Showing posts with label ನೀತಿ ಕಥೆ. Show all posts
Showing posts with label ನೀತಿ ಕಥೆ. Show all posts
ವಿನಯ್ ...
ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- ೩

ಇಲ್ಲಿಯವರೆಗೂ ನೀವು ಕೂರ್ಮನ ಕಥೆಯ ಓದಿದಿರಿ, ಬನ್ನಿ ಮುಂದಿನ ಭಾಗವಾದ ಕಪ್ಪೆ ಮತ್ತು ಸುಂದರ ಮಹಿಳೆಯ ನೀತಿ ಕಥೆಯನ್ನು ಓದೋಣ...

ಕಪ್ಪೆಗಳು...

ಒಬ್ಬ ರೈತನು ತನ್ನೂರಿನಿಂದ ಪಟ್ಟಣಕ್ಕೆ ಬಂದು ಅಲ್ಲಿದ್ದ ಒಂದು ಉಪಹಾರ ಗೃಹದ ಮಾಲೀಕನ ಹತ್ತಿರ: "ನಾನು ನಿಮಗೆ ನೂರಾರು ಕಪ್ಪೆಯ ಕಾಲನ್ನು ಕೊಡುವೆನು... ನೀವು ಅದನ್ನು ಕೊಳ್ಳುವಿರಾ?" ಅನ್ನಲು, ಅದನ್ನು ಕೇಳಿದ ಉಪಹಾರ ಗೃಹದ ಮಾಲೀಕನಿಗೆ ಅಘಾತ! ತನ್ನನ್ನು ತಾನೇ ಸವರಿಸಿಕೊಂಡು "ನೀನು ಅಷ್ಟು ಕಪ್ಪೆಯ ಕಾಲನ್ನು ಎಲ್ಲಿಂದ ತರುವೆ?" ಎಂದು ಆ ರೈತನನ್ನು ಕೇಳಲು, ರೈತನು ಹೀಗೆ ಉತ್ತರಿಸಿದನು: "ನನ್ನ ಮನೆಯ ಹತ್ತಿರ ಒಂದು ಕೊಳವಿದೆ, ಅದರಲ್ಲಿ ಲಕ್ಷಾಂತರ ಕಪ್ಪೆಗಳಿವೆ... ಅವು ರಾತ್ರಿಯೆಲ್ಲಾ ಕೂಗುವುದರಿಂದ ನನ್ನ ನಿದ್ದೆ/ನೆಮ್ಮದಿ ಹಾಳಾಗಿದೆ.., ಅದಕ್ಕೆ ನಾ ಅವುಗಳನ್ನ ಹಿಡಿದು ತಂದು ನಿಮಗೆ ಮಾರುವೆ, ನೀವು ಯೋಗ್ಯ ಬೆಲೆ ನೀಡಿ ಕೊಂಡುಕೊಳ್ಳಿ..." ಎಂದನು. ಉಪಹಾರ ಗೃಹದ ಮಾಲೀಕನಿಗೆ ಆ ರೈತ ಹೇಳಿದ್ದು ಸರಿಯೆನಿಸಿ ೫೦೦ ರ ಲೆಕ್ಕದಲ್ಲಿ ಮುಂದಿನ ಹಲವು ವಾರಗಳ ಕಾಲ ತನ್ನ ಉಪಹಾರ ಗೃಹಕ್ಕೆ ಕಪ್ಪೆಗಳನ್ನು ಸರಬರಾಜು ಮಾಡಬೇಕು ಎಂಬ ಕರಾರು ಇಟ್ಟನು. ರೈತನು ಮಾಲೀಕನ ಮಾತಿಗೆ ಒಪ್ಪಿ ತನ್ನ ಊರಿಗೆ ಮರುಳಿದನು.


ಮುಂದಿನ ವಾರ ಮತ್ತೆ ಆ ಉಪಹಾರ ಗೃಹದ ಬಳಿ ಬಂದ ರೈತನ ಮುಖ ತೀರಾ ಸೆಪ್ಪಗಾಗಿತ್ತು. ನೂರಾರು ಕಪ್ಪೆಗಳನ್ನು ಹೊತ್ತು ತರುವೆ ಎಂದು ಹೇಳಿಹೋಗಿದ್ದ ಅವನ ಕೈಯಲ್ಲಿ ಕೇವಲ ಎರಡು "ಸೊಣಕಲು" ಕಪ್ಪೆಗಳು ಮಾತ್ರ ಇದ್ದವು. ಆ ಉಪಹಾರ ಗೃಹದ ಮಾಲೀಕನು ಕೂತುಹಲದಿಂದ "ಎನಪ್ಪಾ, ಏನೋ ರಾಶಿ-ರಾಶಿ ಕಪ್ಪೆಗಳನ್ನು ತರುತ್ತೇನೆ ಅಂದೆಯೆಲ್ಲಾ... ಎಲ್ಲಿ ನಿನ್ನ ಕಪ್ಪೆಗಳು..?" ಅಂತ ಕೇಳಲು, ರೈತನು "ಇಲ್ಲ ಸ್ವಾಮಿ, ನನ್ನ ಲೆಕ್ಕಚಾರ ತಪ್ಪಾಗಿತ್ತು, ಕೇವಲ ಎರಡು ಕಪ್ಪೆಯ ಶಬ್ದವನ್ನು ನಾನು ನೂರಾರು ಕಪ್ಪೆಗೆ ಹೋಲಿಸಿಬಿಟ್ಟಿದ್ದೆ.." ಎಂದು ಪೆಚ್ಚಾಗಿ ಹೇಳಿದನು....!


[ನೀತಿ: ನಿಮ್ಮ ಬಗ್ಗೆ ಹಲವು ಜನರು ಕೊಂಕು ಮಾತು ಅಥವಾ ನಿಂದನೆ/ಜರಿಯುವ ಕೆಲಸ ಮಾಡುತ್ತಿದ್ದರೆ, ಬಹುಶ: ಮೇಲಿನಂತೆ ಅವರು ಕೇವಲ "ಕೆಲವು" ಒಟಗುಟ್ಟುವ ಕಪ್ಪೆಗಳಾಗಿರಬಹುದು...!!!. ನಿಮ್ಮಲ್ಲಿರುವ ಕಷ್ಟಗಳನ್ನು ಸ್ವತ: ಹೋಲಿಕೆ ಮಾಡತೊಡಗಿದರೆ ಅದು ಒಂದು ಕತ್ತಲೆ ಕೋಣೆಯ ಮಧ್ಯದಲ್ಲಿ ಏನು ಕಾಣದೆ ನಿಂತಿರುವಂತೆ ನಿಮಗೆ ಭಾಸವಾಗಬಹುದು... ಕತ್ತಲು ಕೇವಲ ಆ ಕೋಣೆಯ ಭಾಗವಾದರೂ ಆ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಆದರ ಸ್ಪಷ್ಠತೆ ಹೇಗೆ ಗೊತ್ತಾಗುವುದಿಲ್ಲವೋ ಹಾಗೆಯೇ ನಮ್ಮ ಮನದ ಯೋಚನೆ ನಮ್ಮನ್ನು ನಿಂದಿಸುವ ಆ ನಿಂದಕರ ಮೇಲೆ ಇರುತ್ತದೆ.. ನಾವು ಮಾನಸಿಕವಾಗಿ ಅದರಲ್ಲಿ ಎಷ್ಟು ಬೆರೆತುಹೋಗಿರುತ್ತೇವೆ ಅಂದರೆ ಅದು ನಮ್ಮ ದಿನನಿತ್ಯದ ಕಾರ್ಯ, ಕೆಲವೊಮ್ಮೆ ನಮ್ಮ ನಿದ್ದೆಯನ್ನು ಸಹ ಬಿಡುವುದಿಲ್ಲ!!!. ಕೇವಲ ಕತ್ತಲಲ್ಲಿದ್ದೇ ಎಲ್ಲಾ ವಿರ್ಮರ್ಶಿಸುವ ನಾವು ಆ ಕತ್ತಲಿನಿಂದಾಚೆ ಬೆಳಕಿನ ಅಸ್ತಿತ್ವ ಇದೆ ಎಂಬುದನ್ನು ಮರೆತುಬಿಡುತ್ತೇವಲ್ಲಾ, ಎಂತಹ ವಿಪರ್ಯಾಸ ನೋಡಿ!!. ಕತ್ತಲಲ್ಲಿ ಇಜ್ಜಲಿಗೆ ಹುಡುಕಾಡುವ ನಾವು ನಮ್ಮ ನಿಂದಕರ ವಿಷಯದಲ್ಲೂ ಹಾಗೇ ಮಾಡದೇ ಬೆಳಕಿನ ಹಾಗೆ ನಿಜ ವಿಷಯ ಅರಿತು ಅದಕ್ಕೆಲ್ಲಾ ಕಿವಿಗೊಡದಿದ್ದರೆ ಎಷ್ಟು ಚೆನ್ನ ಅಲ್ಲವೇ..?]


----------------------------------------


ಸುಂದರ ಮಹಿಳೆ

ಒಮ್ಮೆ ಬೌದ್ಧ ಧರ್ಮದ ಭಿಕ್ಷುಗಳಿಬ್ಬರು ನೆಡೆಯುತ್ತ ಸಾಗುತ್ತಿರಲು, ಅವರು ನೆಡೆಯುತ್ತಿದ್ದ ಹಾದಿಯಲ್ಲಿ ಒಂದು ಒಡೆದುಹೋದ ಸೇತುವೆ ಕಾಣಿಸಿತು. ತಮ್ಮ ಮುಂದಿನ ಹಾದಿ ಆ ಸೇತುವೆ ದಾಟಿಯೇ ಹೋಗಬೇಕಾಗಿದ್ದರಿಂದ ಅವರು ಮೆಲ್ಲನೆ ಅದರ ಮೇಲೆ ಸಾಗುತ್ತಿರಲು ಮಧ್ಯದಲ್ಲಿ ಅವರಿಗೆ ಒಬ್ಬ ಸುಂದರ ಮಹಿಳೆ ಕಾಣಿಸಿದಳು. ಅವಳು ಸಹ ಆ ಸೇತುವೆಯ ದಾಟಲು ಪ್ರಯತ್ನಪಡುತ್ತಿರಲು, ಅದು ಸಾಧ್ಯವಾಗದೆ ಮಧ್ಯದಲ್ಲೇ ಸಿಲುಕಿಬಿಟ್ಟಿದ್ದಳು... ಆ ಭಿಕ್ಷುಗಳಲ್ಲಿ ಒಬ್ಬರಾದ ಹಿರಿಯ ಭಿಕ್ಷುವು ಅವಳನ್ನು ಸ್ವತ: ಹೊತ್ತುಕೊಂಡೊಯ್ಯುವುದಾಗಿ ವಿನಂತಿಸಲು ಅವಳು ಸಮ್ಮತಿಸಿ, ಆ ಹಿರಿಯ ಭಿಕ್ಷುವು ಅವಳನ್ನು ಸುರಕ್ಷಿತವಾಗಿ ಇನ್ನೊಂದು ದಡ ಸೇರಿಸಿದರು. ಇದನ್ನು ನೋಡಿದ ಕಿರಿಯ ಭಿಕ್ಷುವಿಗೆ ಮನದಲ್ಲೇ ಉರಿಯ ಅನುಭವವಾಯಿತು. ತನ್ನ ಧರ್ಮದಲ್ಲಿ ಪರಸ್ತ್ರೀಯರನ್ನು ಮುಟ್ಟುವುದನ್ನ, ಸ್ನೇಹ ಬೆಳೆಸುವುದನ್ನ ವಿರೋಧಿಸಿರುವಾಗ ಈ ಹಿರಿಯ ಭಿಕ್ಷುವು ಅವಳನ್ನ ಹೊತ್ತೊಯ್ಯುವುದಾಗಿ ಕೇಳಿದ್ದಲ್ಲದೇ ಅವಳನ್ನು ಸ್ಪರ್ಶಿಸಿ, ಮುಟ್ಟಿ, ತನ್ನ ದೇಹದ ಮೇಲೆ ಹೊತ್ತು ಇನ್ನೊಂದು ದಡ ಸೇರಿಸಿದ್ದು ಏಕೆ ಎಂಬ ಪ್ರಶ್ನೆ ಮನದಲ್ಲಿ ಕಾಡುತ್ತಿದ್ದರೂ ಹಿರಿಯ ಭಿಕ್ಷುವಿಗೆ ಗೌರವ ನೀಡಬೇಕು ಎಂಬ ನಿಯಮದಲ್ಲಿ ಮರುಮಾತನಾಡದೆ ಸುಮ್ಮನೆ ಅವರೊಂದಿಗೆ ಹೊರಟನು. ಆ ಮಹಿಳೆ ಅವರಿಗೆ ಧನ್ಯವಾದ ಹೇಳಿ ತನ್ನ ಪಯಣ ಮುಂದುವರಿಸಲು, ಈ ಕಿರಿಯ ಭಿಕ್ಷುವಿನ ಮನ ಆಗಲೇ ಕುದಿಯಲು ಪ್ರಾರಂಭಿಸಿಯಾಗಿತ್ತು. ಅವನ ಮನವು ಈ ಹಿರಿಯ ಭಿಕ್ಷುವಿನ ಬಗ್ಗೆ ಇಲ್ಲದ ಕಲ್ಪನೆ ಮಾಡತೊಡಗಿತು, ಬೇಡದ ಭಾವನೆಗಳು ಬರತೊಡಗಿದವು... ಇವೆಲ್ಲದರ ನಡುವೆ ಆ ಹಿರಿಯ ಭಿಕ್ಷುವು ಸುಮ್ಮನೆ ನೆಡೆಯುತ್ತಿರಲು, ಇತ್ತ ಸಹನೆಯ ಕಟ್ಟೆಯೊಡೆದ ಕಿರಿಯ ಭಿಕ್ಷುವು "ನೀವು ನನಗೆ ಅಷ್ಟೆಲ್ಲಾ ಉಪದೇಶ ಮಾಡುತ್ತಿರಲ್ಲಾ, ಅದೇ ನಿಮಗೆ ಒಂದು ಸುಂದರ ಮಹಿಳೆ ಕಾಣಿಸಿದಾಗ ತಮ್ಮ ಧರ್ಮದ ತತ್ವವೆಲ್ಲಾ ಬಿಟ್ಟು, ತಾವೇ ಮೊದಲು ಹೋಗಿ ಅವಳನ್ನು ಮುಟ್ಟಿ, ಹೊತ್ತೊಯ್ದು ಆ ದಡ ಸೇರಿಸಿದರಲ್ಲ..., ಎಲ್ಲೊಯ್ತು ನಿಮ್ಮ ನಿಷ್ಠೆ, ಧರ್ಮ, ಅಚಾರಗಳೆಲ್ಲಾ...? ನಿಮ್ಮಿಂದ ಕಲಿಯಬೇಕಾದದ್ದು ಇದನ್ನೇನಾ...?" ಎಂದು ಹೇಳಲು, ಹಿರಿಯ ಭಿಕ್ಷುವು ಅದೇ ಸೌಮ್ಯಭಾವದಿಂದ ಈ ಕಿರಿಯ ಭಿಕ್ಷುವನ್ನು ಕೇಳಿದರು: "ನಾನೇನೋ ಹಲವು ಗಂಟೆಗಳ ಹಿಂದೆಯೇ ಅವಳನ್ನು ಇನ್ನೊಂದು ದಡ ಸೇರಿಸಿಬಿಟ್ಟು ಬಂದಿದ್ದೆ. ಆದರೆ ಅವಳು ಅಲ್ಲಿಂದ ನಿನ್ನ ಹೆಗಲ ಮೇಲೆ ಇನ್ನೂ ಪ್ರಯಾಣ ಮುಂದುವರಿಸಿರುವಂತೆ ಕಾಣಿಸುತ್ತಿದೆಯಲ್ಲಾ...?!!"


[ನೀತಿ: ಚೀನಾ ದೇಶದ ಹಳೆಯ ನೀತಿ ಕಥೆಯಾದ ಇದು ಪ್ರಸ್ತುತ ಕಾಲದಲ್ಲಿನ ನಮ್ಮ ಯೋಚನಾ ಲಹರಿಗಳ ಬಗ್ಗೆ (ಅಯಾ ಸಂದರ್ಭಕ್ಕನುಗುಣವಾಗಿ...) ಸವಿವರವಾಗಿ ಹೇಳುತ್ತಿದೆ. ನಾವು ಅನೇಕ ಸಲ ಕಿರಿಕಿರಿ ಮತ್ತು ಮನದ ನೆಮ್ಮದಿ ಕೆಡಿಸುವ ಸಂದರ್ಭಗಳನ್ನು/ಜನರನ್ನು ನೋಡುತ್ತಲೇ ಇರುತ್ತೇವೆ. ಒಮ್ಮೆ ಅವರು ನಮ್ಮ ನೆಮ್ಮದಿ ಕೆಡಿಸಿದರೆ, ಮತ್ತೊಮ್ಮೆ ನಮ್ಮ ಮನದಲ್ಲಿ ದ್ವೇಷ-ಅಸೂಯೆ ತರುವ ಮಟ್ಟಕ್ಕೂ ಹೋಗುತ್ತಾರೆ. ಆದರೆ ಈ ಕಥೆಯಲ್ಲಿ ಆ ಕಿರಿಯ ಭಿಕ್ಷು ಮಾಡಿದಂತೆ ನಾವು ಸಹ ಅ ಬೇಡದ ವಿಷಯ/ಯೋಚನೆಯನ್ನು ಮರೆಯದೇ/ಅಲ್ಲಿಯೇ ಬಿಟ್ಟುಬಿಡದೆ "ಸುಂದರ ಮಹಿಳೆ" ಯನ್ನು ಅವನು ಹೊತ್ತಂತೆ ನಾವು ಸಹ ನಮ್ಮ ಹೆಗಲ ಮೇಲೆ ಹೊತ್ತು ಕೊಂಡೊಯ್ಯುತ್ತಿರುತ್ತೇವೆ...!!!. ನಮ್ಮನ್ನು ಅವರು ಅನೇಕ ಸಲ ಅವಮಾನಿಸಿದರೂ, ಮಾನಸಿಕವಾಗಿ ಹಿಂಸಿಸಿದರೂ ಅದರಿಂದ ಹುಟ್ಟುವ ದ್ವೇಷ-ಅಸೂಯೆಯಂಬ "ಸುಂದರ ಮಹಿಳೆ" ಯ ಭಾರವನ್ನು ಹೆಗಲ ಮೇಲೆಯೇ ಕುಳಿಸಿಕೊಂಡಿರುತ್ತೇವೆ...! ಕಾರಣವೆನೆಂದರೆ ನಮಗೆ ಆ "ಸುಂದರ ಮಹಿಳೆ" ಯ ಭಾರವನ್ನು ಕೆಳಗೆ ಇಳಿಬಿಡುವ ಮನಸ್ಸು ಆ ಹೊತ್ತಿನಲ್ಲಿ ಬಂದಿರುವುದಿಲ್ಲವೇನೋ...!!. ನಮ್ಮ ಮನದಲ್ಲಿರುವ ಆ ದ್ವೇಷ-ಅಸೂಯೆ-ಕೋಪಕಾರಕ ವಸ್ತುವನ್ನ ನಾವು ಇನ್ನೊಂದು ದಡದಲ್ಲಿ ಇಳಿಸಿ ನಮ್ಮ ಜೀವನದ ಪಯಣ ಮುಂದುವರಿಸಿದರೆ ನಮ್ಮ ಮನ ಆ ನಿರುಪಯುಕ್ತ ಭಾರವ ಸುಮ್ಮನೆ ಹೊರುವುದನ್ನ ತಪ್ಪಿಸಬಹುದಲ್ಲವೇ...! ನಿಂದನೆ, ದ್ವೇಷ..., ಅವು ಸಮಯ ಮೀರಿದ ಮೇಲೂ ಮನದಲ್ಲಿ ಪೋಷಿಸುವುದರಿಂದ ಯಾರಿಗೆ ತಾನೇ ಲಾಭ ಹೇಳಿ...! ವಿನ: ಕಾರಣ ತಲೆಬಿಸಿ ಮಾಡಿಕೊಂಡಿದ್ದ ಬಿಟ್ಟು..!!]
ವಿನಯ್ ...
ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- 2

ನಾವು ನಮ್ಮ ಜೀವನವನ್ನ ಅನುಭವಗಳಿಂದಲೇ ರಚಿಸಿಕೊಳ್ಳುತ್ತೇವೆ....

ಕೂರ್ಮ, ಕಪ್ಪೆ ಮತ್ತು ಒಬ್ಬ ಸುಂದರ ಮಹಿಳೆ... ಈ ಕೆಳಗಿನ ಕಥೆಗಳ ಮೂಲಕ ನಮಗೆ ಜೀವನದ ಪಾಠ ತಿಳಿಸುತ್ತಾರೆ.

ಬನ್ನಿ, ಅವರಲ್ಲಿ ಕೂರ್ಮನ ಕಥೆಯನೊಮ್ಮೆ ಓದೋಣ...


ಕೂರ್ಮನ ಕಥೆ...

ಒಂದು ಕೂರ್ಮ ಪರಿವಾರವು ತಮ್ಮ ಎಲ್ಲಾ ಜನರೊಡಗೂಡಿ ಸಂಚಾರಕ್ಕೆ ಹೊರಟವು. ಬಹಳ ಮಂದ ಸಂಚಾರಿಗಳಾದ ಕೂರ್ಮಗಳು ಹೊರಡುವ ಸಿದ್ದತೆ ಮಾಡಿಕೊಳ್ಳೂವುದಕ್ಕೇ ೭ ವರುಷ ತೆಗೆದುಕೊಂಡವು! ಎಲ್ಲಾ ಸಿದ್ಧತೆಯಾದ ಮೇಲೆ ಕೂರ್ಮ ಪರಿವಾರವು ಸಂಚಾರಕ್ಕೆ ಹೊರಟಿತು. ಅಂತೂ ತಮ್ಮ ಸಂಚಾರದ ಎರಡನೆ ವರ್ಷದಲ್ಲಿ ಕೊನೆಗೂ ಒಂದು ಸೂಕ್ತ ಸ್ಥಳವನ್ನು ಹುಡುಕಿಕೊಂಡವು!!!

ಸುಮಾರು ೬-೭ ತಿಂಗಳು ಸ್ಥಳವನ್ನ ಸ್ವಚ್ಛಗೊಳಿಸಲು, ತಾವು ತಂದಿದ್ದ ಎಲ್ಲಾ ಸಾಮಾನು ಪೆಟ್ಟಿಗೆಯನ್ನು ತೆರೆದಿಡಲು ತಗೆದುಕೊಂಡವು. ಎಲ್ಲ ಜೋಡಿಸಿಡುತ್ತಿದ್ದ ವೇಳೆಯಲ್ಲಿ ತಾವು ಉಪ್ಪಿನ ಪೊಟ್ಟಣವ ತರುವುದನ್ನ ಮರೆತಿದ್ದನ್ನು ಆ ಕೂರ್ಮ ಗುಂಪಿನಲ್ಲಿದ್ದ ಹಿರಿಯ ಕೂರ್ಮನಿಗೆ ಹೊಳೆಯಿತು. ಮತ್ತೇನು..., ತಮ್ಮ ಸಂಚಾರವು ಆ ಉಪ್ಪಿನ ಪೊಟ್ಟಣವಿಲ್ಲದೆ ಏನು ಉಪಯೋಗವಿಲ್ಲ ಎಂದು ಅರಿತ ಆ ಪರಿವಾರವು ಬಹು ದೀರ್ಘ ಸಮಾಲೋಚನೆ ನೆಡೆಸಿ ತಮ್ಮ ಕುಟುಂಬದಲ್ಲಿದ್ದ ಸಣ್ಣ ಕೂರ್ಮ ಸದಸ್ಯನಿಗೆ ಉಪ್ಪಿನ ಪೊಟ್ಟಣವನ್ನು ತರುವ ಜವಬ್ದಾರಿಯನ್ನು ಕೊಡಲಾಯಿತು. ಆ ಸಣ್ಣ ಕೂರ್ಮನು ಆ ಪರಿವಾರದಲ್ಲೇ ಬಹುಬೇಗ ನೆಡೆಯಬಲ್ಲವನಾಗಿದ್ದರೂ ಹ್ಯಾಪು ಮೋರೆ ಹಾಕಿಕೊಂಡು, ಕಣ್ಣು ತುಂಬ ನೀರು ತುಂಬಿಸಿಕೊಂಡು, ತನ್ನ ಚಿಪ್ಪಿನೊಳಗೆ ಮುದುರಿಕೊಂಡನು. ನಂತರ ಎಲ್ಲರು ಪುಸುಲಾಯಿಸಿದ ಮೇಲೆ ಒಂದು ಷರತ್ತಿನ ಮೇಲೆ ಹೋಗಿ ಬರಲು ಆ ಸಣ್ಣ ಕೂರ್ಮನು ಒಪ್ಪಿಕೊಂಡನು. ಅದೇನೆಂದರೆ: ಅವನು ಹಿಂದಿರುಗಿ ಬರುವವರೆಗೂ ಯಾರು ಏನನ್ನು ತಿನ್ನಬಾರದು...! ಕೊನೆಗೂ ಎಲ್ಲರು ಈ ಷರತ್ತಿಗೆ ಒಪ್ಪಿದ ಮೇಲೆ ಆ ಸಣ್ಣ ಕೂರ್ಮನು ಅಲ್ಲಿಂದ ಉಪ್ಪು ತರಲು ಹೊರಟನು.

ಮೂರು ವರುಷ, ೪.., ೫.., ೬.., ಆ ಸಣ್ಣ ಕೂರ್ಮನ ಸುಳಿವೇ ಇಲ್ಲ!!! ೭ನೇ ವರ್ಷ ಅಗುತ್ತಿದ್ದಂತೆ ಕೂರ್ಮ ಪರಿವಾರದ ಹಿರಿಯ ಸದಸ್ಯನು ಹಸಿವು ತಾಳಲಾರದೇ, ಅಲ್ಲಿದ್ದ ಉಳಿದ ಸದಸ್ಯರಿಗೆ ತಾನು ಈಗ ಅಹಾರವನ್ನು ತಿನ್ನುವುದಾಗಿ ಹೇಳಿ, ಅಲ್ಲಿದ್ದ ಆಹಾರದ ಪೊಟ್ಟಣವನ್ನು ತೆರೆಯಲು, ಧಟ್ಟನೆ ಒಂದು ಮರದ ಹಿಂಬದಿಯಲ್ಲಿದ್ದ ಆ ಸಣ್ಣ ಕೂರ್ಮನು ಕಿರುಚುತ್ತ ಹೊರಬಂದು: "ನೋಡಿ, ನಾ ಹೇಳ್ಲಿಲ್ವೇನು! ನೀವ್ಯಾರೂ ನನಗೆ ಕಾಯೋದಿಲ್ಲಾ ಅಂತಾ...!. ಹೋಗಿ ನಾನು ಉಪ್ಪು ತರಲು ಹೋಗುವುದಿಲ್ಲ..." ಅಂತ ಹೇಳಿತು. ಆಗ ತಲೆ ತಿರುಗಿ ಬೀಳಬೇಕಾದ ಸ್ಥಿತಿ ಉಳಿದ ಕೂರ್ಮಗಳದಾಗಿತ್ತು!!


[ನೀತಿ: ನಮ್ಮಲ್ಲಿ ಅನೇಕರು ಇತರರು ಸಹ ನಮ್ಮಂತೆ ಇರಬೇಕು...ನಾವು ಬಯಸಿದಂತೆ ಇರಬೇಕು/ಕೇಳಬೇಕು ಎನ್ನುವ ಭಾರದಲ್ಲಿ ತಮ್ಮ ಸಮಯ/ಸಹನೆಯನ್ನು ವಿನ: ಕಾರಣ ವ್ಯರ್ಥ ಮಾಡಿಕೊಳ್ಳುತ್ತಿರುತ್ತಾರೆ. ಉಪಯೋಗವಿಲ್ಲದ ಕಾರ್ಯವಾದ ಈ ಬೇರೆಯವರ ಬಗೆಗಿನ ಆಲೋಚನೆ ನಮ್ಮ ಬಗ್ಗೆ ಸ್ವತ: ನಾವೇ ಮಾಡಿಕೊಂಡರೆ ಸ್ವಯಂ-ಉದ್ಧಾರವಾದರೂ ಆಗಬಹುದಲ್ಲವೇ...?]
ವಿನಯ್ ...
ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- ೧

ನೆಬ್ರಸ್ಕ ಊರಿನ ರೈತರೊಬ್ಬರು ಆ ಊರಿನಲ್ಲೇ ಪ್ರಸಿದ್ಧ ಬೆಳೆಗಾರರಾಗಿದ್ದರು. ಅವರು ತಮ್ಮ ಹೊಲದಲ್ಲಿ ಬೆಳೆಯುತ್ತಿದ್ದ ಉತ್ತಮ ಬೆಳೆಗೆ ಹಲವು ವರ್ಷಗಳಿಂದ ಪ್ರಶಸ್ತಿ ಸಹ ಬರುತಿತ್ತು.

ಒಮ್ಮೆ ಒಬ್ಬ ಪತ್ರಕರ್ತರು ಅವರ ಬೇಸಾಯದ ಯಶಸ್ಸಿನ ಹಿಂದಿನ ಕಾರಣ ತಿಳಿಯಲು ಸಂದರ್ಶಿಸಿದಾಗ ಒಂದು ಕೂತುಹಲಕಾರಿ ಅಂಶ ಆ ಪತ್ರಕರ್ತರಿಗೆ ತಿಳಿಯಿತು... ಅದೆನೆಂದರೆ ಈ ರೈತರು ತನ್ನ ಅಕ್ಕ ಪಕ್ಕದ ರೈತರೊಡನೆ ಆ ಬೆಳೆಯ ಉತ್ತಮ ಕಾಳುಗಳನ್ನು ಹಂಚಿಕೊಳ್ಳುತ್ತಿದದ್ದು....!

"ನೀವು ನಿಮ್ಮ ಉತ್ತಮ ಕಾಳುಗಳನ್ನು ಅವರೊಡನೆ ಏನೋ ಹಂಚಿಕೊಳ್ಳುತ್ತಿದ್ದೀರಿ, ಆದರೆ ಅವರು ನಿಮ್ಮ ಪ್ರತಿಸ್ಪರ್ಧಿಗಳಾಗಿ ನಿಮ್ಮೆದುರಿಗೆ ಪ್ರತಿ ವರ್ಷ ನಿಲ್ಲುತ್ತಾರಲ್ಲಾ...! ಅದಕ್ಕೆ ನೀವೇನು ಹೇಳುತ್ತೀರಿ...?" ಎಂದು ಆ ಪತ್ರಕರ್ತರು ಕೇಳಲು, ಇವರು:

"ಸರ್, ಅದೇಕೆ ಹಂಗ್ ಹೇಳ್ತಿದ್ದೀರಿ...!, ನಿಮಗೆ ಗೊತ್ತಿಲ್ಲವೇ, ಸಾಮಾನ್ಯವಾಗಿ ತೆನೆ ಬೆಳೆಯುವಾಗ ತನ್ನ ಪರಾಗವನ್ನು ಗಾಳಿಯಲ್ಲಿ ತೇಲಿಬಿಡುತ್ತದೆ. ಅದು ಹೊಲದಿಂದ ಹೊಲಕ್ಕೆ ಹಾರುತ್ತ ತೇಲುತ್ತಿರುತ್ತದೆ. ನನ್ನ ಪಕ್ಕದ ಹೊಲದಲ್ಲಿರುವ ರೈತರು ಕಡಿಮೆ ಗುಣಮಟ್ಟದ ಬೇಜ ನೆಟ್ಟರೆ ಅಲ್ಲಿಂದ ಹಾರಿ ಬರುವ ಪರಾಗವು ನನ್ನ ಫಸಲಿನ ಬೆಳೆಯ ಗುಣಮಟ್ಟವನ್ನ ಕಡಿಮೆ ಮಾಡುವುದಿಲ್ಲವೇ? ಅದಕ್ಕೆ ನಾನು ಉತ್ತಮ ಮಟ್ಟದ ಬೆಳೆ ಬೆಳೆಯಬೇಕೆಂದರೆ ನನ್ನ ಅಕ್ಕ ಪಕ್ಕ ಹೊಲದಲ್ಲಿರುವ ರೈತರು ಸಹ ನನ್ನಂತೆ ಉತ್ತಮ ಬೆಳೆ ಬೆಳೆಯಲೇಬೇಕು..."

... ಆ ರೈತನಿಗೆ ಸಹಜೀವನದ ಮಹತ್ವ ಗೊತ್ತಿತ್ತು. ಅದಕ್ಕೆ ಅವನು ತನ್ನ ಬೆಳೆ ಉತ್ತಮಗೊಳ್ಳಲು ತನ್ನ ಪಕ್ಕದ ಹೊಲದಲ್ಲಿರುವ ಇತರ ರೈತ ಬಾಂಧವರ ಬೆಳೆಯು ಉತ್ತಮಮಟ್ಟದಾಗಿರುಬೇಕು ಎಂದು ಅಶಿಸುತ್ತಿದ್ದನು...

....ಹಾಗೆಯೇ ಅದನ್ನ ನಮ್ಮ ಬಾಳಿಗೆ ಅನ್ವಯಿಸುದಾದರೆ, ನಮ್ಮ ನೆಮ್ಮದಿ/ನಮ್ಮ ಸಂತೋಷ ನಮ್ಮ ನೆರೆ ಹೊರೆಯವರ/ಮಿತ್ರರು-ಬಾಂಧವರ ಜೊತೆಗಿರುವ ಉತ್ತಮ ಬಾಂಧವ್ಯದಲ್ಲಿದೆ. ನಾವು ನಮ್ಮ ಸಂತೋಷಕ್ಕೆ ಎಷ್ಟು ಪ್ರಯತ್ನಪಡುತ್ತೇವೇಯೋ ಅಷ್ಟೇ ನಾವು ಇವರ ನಡುವೆಯೂ ಸಹ ಸಂತಸ ತರಲಿಕ್ಕೆ ಪ್ರಯತ್ನಪಡಲೇಬೇಕು. ಎಕೆಂದರೆ ಜೀವನದ ಮಹತ್ವವೇ ಅದು. ಎಷ್ಟು ದಿನ ನಾವು ಬಾಳಿ ಬದುಕಿದೆವು ಎನ್ನುವುದಕ್ಕಿಂತ ನಮ್ಮ ಜೀವನ ಎಷ್ಟು ಜನರನ್ನು ತಲುಪಿತು ಎಂಬುದರಲ್ಲಿ ಅರ್ಥ ಇದೆ. ನಮ್ಮ ಸಂತೋಷದೊಡನೆ ನಮ್ಮ ಜೊತೆ ಬಾಳುತ್ತಿರುವ ಇತರರ ಸಂತೋಷಕ್ಕೂ ನಾವು ಪ್ರಯತ್ನ ಪಟ್ಟರೆ ಅದಕ್ಕಿಂತ ಉತ್ತಮವಾದ ಕಾರ್ಯ ಯಾವುದಿದೆ ಹೇಳಿ....?


ನೀತಿ ಇಷ್ಟೇ: ನಾವು ಸಂತೋಷದಿಂದಿರಬೇಕೆಂದರೆ ನಾವು ನಮ್ಮ ಪ್ರೀತಿಪಾತ್ರರಲ್ಲೂ ಸಹ ಸಂತೋಷವನ್ನು ಬಯಸಬೇಕು....