ವಿನಯ್ ...
"ನೆನಪಿನ ಪುಸ್ತಕದಲ್ಲಿನ ಎಲ್ಲಾ ಅಕ್ಷರಗಳು ಮಾಸಿಹೋಗಬಹುದು....
ಅದರೆ ನಿನ್ನ ನೆನಪಿದೆಯಲ್ಲಾ... ಅದನ್ನು ನನ್ನ ಮನ ಎಂದೂ ಮರೆಯುವುದಿಲ್ಲ.."



ಚಿತ್ರ ಕೃಪೆಃ thepursuitcc.typepad.com



ಕೆಲಸದ ನಿಮಿತ್ತ ಕಬರ್ಡ್ ನಲ್ಲಿ ಮಾರ್ಕ್ಸ್ ಕಾರ್ಡ್ ಹುಡುಕುತ್ತಿದ್ದ ನಾನು ಅಲ್ಲಿದ್ದ ಒಂದೊಂದೆ ಕವರಗಳನ್ನ ತಗೆದು ಹೊರಗೆ ಸಾಲಾಗಿ ಇಡುತ್ತಿದ್ದಾಗ ತಟಕ್ಕೆನೆ ಒಂದು ಕವರಿನಿಂದ ಸಣ್ಣ ಪುಸ್ತಕವೊಂದು ಉದರಿತು. ಹುಡುಕುತ್ತಿದ್ದ ವಸ್ತು ಸಿಗದ ನಿರಾಶೆಯಲ್ಲಿ ಆಗ ಕೆಳಗೇನು ಬಿದ್ದಿತ್ತು ಎಂಬ ಗೊಡವೆಗೆ ಹೋಗದೆ ಮತ್ತೆ ಹುಡುಕುವ ಪ್ರಯತ್ನ ಸಾಗಿತ್ತು. ಹಾಗೆ ಪ್ರಯತ್ನ ಸಾಗಿದ್ದಾಗ ಅಲ್ಲೇ ಮೂಲೆಯಲ್ಲಿ ಮುದರಿಕೊಂಡಿದ್ದೆ ಕವರಿನ ಒಳಗೆ ಸಿಕ್ಕಿತು ನನ್ನ ಹಳೆಯ ಮಾರ್ಕ್ಸ್ ಕಾರ್ಡ್ ಪ್ರತಿ..!. ಅದನ್ನು ಝೆರಾಕ್ಸ್ ಮಾಡಿಸಲು ಹೊರಟ ನಾನು ಹೊರಗೆ ತಗೆದಿರಿಸಿದ್ದ ಎಲ್ಲ ಕವರುಗಳನ್ನ ಮತ್ತೆ ಎತ್ತಿಡುತ್ತಿದ್ದಾಗ ನನ್ನ ಕಣ್ಣು ಏಕೋ ಮತ್ತೆ ಆ ಸಣ್ಣ ಪುಸ್ತಕದ ಮೇಲೆ ಬಿತ್ತು.

ಅರೇ.. ಅದು ನನ್ನ ದ್ವಿತೀಯ ಪಿ.ಯು.ಸಿ ಯಲ್ಲಿದ್ದಾಗಿನ ಸ್ಲಾಮ್ ಬುಕ್... ಫ್ಲಾಷ್ ಬ್ಯಾಕ್ ನೆನಪಾಗಿ ಒಂದೊಂದೇ ಪುಟ ತಿರುವಿ ಹಾಕುತ್ತಿದ್ದೆ.

ಅದರಲ್ಲಿ ಬರೆದ ಒಂದು ಸ್ಲಾಮ್ ಪುಟ ನನ್ನನ್ನ ೧೦ ವರ್ಷದ ಹಿಂದಿನ ನೆನಪಿನ ಸುರಳಿಯನ್ನ ಬಿಚ್ಚಿಸುತ್ತ ಹಾಗೇ ಕರೆದುಕೊಂಡು ಹೋಯಿತು...

-----------

೧೫ ಮೇ ೨೦೦೦

ಆಗಷ್ಟೆ ನಮ್ಮ ದ್ವಿತೀಯ ಪಿ.ಯು.ಸಿ ಯ ತರಗತಿ ಶುರುವಾಗಿತ್ತು. ನಮಗೆ ಇದು ಜೀವನದ ಪ್ರಮುಖಘಟ್ಟವೆಂದರಿತ ನಮ್ಮ ಪ್ರಾಂಶುಪಾಲರು ಮತ್ತು ಶಿಕ್ಷಕರು ನಿಗದಿಗಿಂತ ೧೫ ದಿನ ಮೊದಲೇ ಪೂರ್ವಭಾವಿ ತರಗತಿಗಳನ್ನ ಪ್ರಾರಂಭಿಸಿದ್ದರು (ನನಗೋ ಕ್ಲಾಸ್ ಅಟೆಂಡ್ ಆಗುವ ಮನಸ್ಸೇ ಇರಲಿಲ್ಲ..!!). ಅದರಲ್ಲಿ ಗಣಿತ ಪ್ರಮುಖವಾಗಿತ್ತು. ಬೆಳಗ್ಗೆ ೮.೩೦ ಗೆ ತರಗತಿ ಶುರುವಾಗುತ್ತಿತು. ನನ್ನದು ಸೈನ್ಸ್ "ಬಿ" ಸೆಕ್ಷನ್. ನಮ್ಮ ಸೈನ್ಸ್ ವಿಭಾಗದಲ್ಲೇ ಇನ್ನೊಂದು ತರಗತಿ "ಡಿ" ಸೆಕ್ಷನ್. ಅಲ್ಲಿಂದ ಸಹ ಹಲವರು ಬರುತ್ತಿದ್ದರು. ಅವರ ಗುಂಪಿನಲ್ಲಿದ್ದವಳೇ ಸ್ವಾತಿ...

ಬೆಳ್ಳಗೆ, ಸಾಮಾನ್ಯ ಎತ್ತರದ, ಉದ್ದನೆ ಕೂದಲಿನ ಹುಡುಗಿ ಸ್ವಾತಿ... ತನ್ನ ಇಬ್ಬರು ಗೆಳತಿಯರೊಡನೆ "ಡಿ" ಸೆಕ್ಷನ್ ತರಗತಿಯಿಂದ ಬರುತ್ತಿದ್ದ ಅವಳು ಮೊದಮೊದಲು ಕೇವಲ ಪಾಠ ಕೇಳುತ್ತ ಶಿಕ್ಷಕರ ಎದುರು ಅಷ್ಟೇನೂ ದೌಟ್ಸ್ ಕೇಳದೆ ಸುಮ್ಮನೆ ಕೂರುತ್ತಿದ್ದರೂ ನಂತರದ ದಿನಗಳಲ್ಲಿ ಇಂಟರಾಕ್ಷನ್ ಪ್ರಾರಂಭಿಸಿದ್ದಳು. ನನಗೆ ಮೊದಲು ಇಷ್ಟವಾಗಿದ್ದೇ ಅವಳು ಕೇಳುತ್ತಿದ್ದ ಪ್ರಶ್ನೆಗಳ ವೈಖರಿಯ ಬಗ್ಗೆ. ಬಹುಶ: ಮೊದಲೇ ಪ್ರೀಪೇರ್ ಆಗಿಯೇ ಬರುತ್ತಿದ್ದಳೇನೋ...! ಅದರಲ್ಲೂ ಅವಳಿಗೆ ಪಾಠ ತಗೆದುಕೊಳ್ಳುತ್ತಿದ್ದ ಶಿಕ್ಷಕರ ಶಹಭಾಷ್ ಗಿರಿ ಬೇರೆ...! ನಮ್ಮ ಗುಂಪಿನ ಹಲವಾರು ಹುಡುಗರಿಗೆ ಶಿಕ್ಷಕರು ಅವಳನ್ನು ಹೊಗಳುತ್ತಿದ್ದನ್ನು ನೋಡಿಯೇ ಮೈಯೂರಿ ಹತ್ತಿಕೊಳ್ಳುತ್ತಿತ್ತು..!!. ಅದರ ಸಲುವಾಗಿಯೇ ಏನೋ ಅವಳಿಗೆ "ಮಿಸ್ ಜೀನಿಯಸ್" ಎಂದು ನಾಮಕರಣ ಇವರೇ ಮಾಡಿಬಿಟ್ಟಿದ್ದರು...!

ಅವಳ ಮಾತು, ಸುಂದರ ನಗೆ... ಏನೋ ಒಂದು ಆಕರ್ಷಣೆ ನನಗೆ... ಅವಳನ್ನು ಮಾತನಾಡಿಸುವ ಹಂಬಲ... ಒಂದು ಸಣ್ಣ ಅವಕಾಶಕ್ಕಾಗಿ ಕಾಯುತ್ತಿದ್ದ ನನಗೆ ಅದು ತಾನಾಗಿಯೇ ಒದಗಿಬಂತು...

ಜ್ವರದ ಕಾರಣದಿಂದ ಎರಡು ದಿನಗಳ ಕಾಲ ರಜೆ ತಗೆದುಕೊಂಡಿದ್ದ ಅವಳು ಪುನ: ತರಗತಿಗೆ ಬಂದಿದ್ದಾಗ ಇನ್ನೂ ಪಾಠ ಶುರುವಾಗಲು ಬಹಳ ಸಮಯವಿತ್ತು. ಮಿಕ್ಕವರೆಲ್ಲರು ಇನ್ನೂ ಬರುವರಿದ್ದರು. ನಾನು ನನ್ನ ಪಾಡಿಗೆ ಹಿಂದಿನ ದಿನದ ಭೌತಶಾಸ್ತ್ರದ ನೋಟ್ಸ್ ಅಪ್ ಡೇಟ್ ಮಾಡಿಕೊಳ್ಳುತ್ತಿದ್ದಾಗ ಹಿಂದಿನಿಂದ ಕೇಳಿಬಂದಿತು ಅವಳ ದನಿ:

"ಏಕ್ಸ್ ಕ್ಯೂಸ್ ಮಿ..."

"ನೆನ್ನೆ ಪಾಠ ಮಾಡಿದ ನೋಟ್ಸ್ ಸಲ್ಪ ರೆಫರ್ ಮಾಡಿಕೊಡ್ಲಾ....?"

ನಾನು ಹುಡುಕುತ್ತಿದ್ದ ಅವಕಾಶ ಇದೇನಾ ಎಂದು ನನಗೆ ಅಶ್ಚರ್ಯವಾಯಿತು. ಅವಳೇ ನನ್ನನ್ನು ಬಂದು ಮಾತನಾಡಿಸುತ್ತಾಳೆ ಎಂದು ಮನಸ್ಸಿನಲ್ಲೂ ಯೋಚಿಸಿರಲ್ಲಿಲ್ಲ... ಅವಳ ದನಿಯೇ ನನ್ನನ್ನು ಒಂದು ಕ್ಷಣ ತಬ್ಬಿಬ್ಬುಗೊಳಿಸಿತ್ತು. ಸವರಿಸಿಕೊಂಡು

"ಒನ್ ನಿಮಿಷ... ಕೊಟ್ಟೆ ಇರಿ.." ಎಂದು ಹೇಳಿ ಎರಡು ದಿನದ ನೋಟ್ಸ್ ಪುಸ್ತಕ ಹುಡುಕಿ ಕೊಟ್ಟೆ...

ಅರ್ಧ-ಮೂಕ್ಕಾಲು ಘಂಟೆಯ ನಂತರ ಪುಸ್ತಕ ಹಿಂದಿರಿಗಿಸುವಾಗ:

"ರಾಹುಲ್, ತುಂಬ ಡಿಟೇಲ್ ಆಗಿ ನೋಟ್ಸ್ ಬರೆದುಕೊಂಡಿದ್ದೀರಾ ನೀವು, ಲೆಕ್ಚರರ್ ಹೇಳಿದ ಅಡಿಶ್ನಲ್ ಪಾಯಿಂಟ್ಸ್ ಸಹ ಬರೆದುಕೊಂಡಿದ್ದೀರಲ್ಲಾ..?... ದಟ್ಸ್ ಗುಡ್.."

ನಾನು: "ಹು:, ರೆಫೆರೆನ್ಸ್ ಗೆ ಬೇಕಾಗುತ್ತೆ ಅಂತ ನೋಟ್ ಮಾಡ್ಕೊಳ್ತೀನಿ..." ಎಂದು ಮುಗುಳುನಕ್ಕೆ...

ಅವಳು: "ಎನಿವೇ... ಥ್ಯಾಂಕ್ ಯೂ ವೆರಿ ಮಚ್.." ಎಂದು ನಕ್ಕು ಹೊರಟುಹೋದಳು...

ಅಂದಿನಿಂದ ಅವಳು ನಾನು ಕಾಲೇಜಿನ ಕಾರಿಡಾರಿನಲ್ಲಿ ಎದುರು-ಬದುರು ಸಿಕ್ಕಾಗ ಮಾತನಾಡಿಸುವ ಅವಕಾಶಗಳು ಬಹಳ ಸಿಗುತ್ತಿದ್ದವು. ಬಹುತೇಕ ತರಗತಿಯ ಬಗ್ಗೆ, ಲೆಕ್ಚರರ ಪಾಠದ ಬಗ್ಗೆಯಷ್ಟೆ ಮಾತು ಮೀಸಲಿರುತ್ತಿತ್ತು...!. ಬೇರೆ ವಿಷಯದ ಕಡೆ ಮಾತು ತಿರುಗಲೆತ್ನಿಸಿದರೂ ಮನಸ್ಸು ಏಕೋ ವಿನ:ಕಾರಣ ನನ್ನನು ತಡೆಯುತ್ತಿತ್ತು...!!

ಇನ್ನೊಂದು ಸುವರ್ಣ ಅವಕಾಶ ನನಗೆ ಒಮ್ಮೆ ಒದಗಿ ಬಂತು. ತರಗತಿಯ ವಾರದ ಪರೀಕ್ಷೆ ನೆಡೆಯುತ್ತಿದ್ದಾಗ ಒಮ್ಮೆ ಸ್ವಾತಿ ೧೦ ನಿಮಿಷ ತಡವಾಗಿ ಬಂದಳು. ಸೀಟಿಗಾಗಿ ತಡಕಾಡಿದರೂ ಆಗಲೇ ಎಲ್ಲಾ ಭರ್ತಿಯಾಗಿದ್ದರಿಂದ ಕೊನೆಗೆ ಉಳಿದ ಕೊನೆಯ ಬೆಂಚಿನ ಸಾಲಲ್ಲಿ ಕುಳಿತು ಬರೆಯತೊಡಗಿದಳು. ನಾನು ಆ ಬೆಂಚಿನ ಸಾಲಿನ ಪಕ್ಕದ ಬೆಂಚಿನಲ್ಲಿ ಇದ್ದೆ. ೧೦ ನಿಮಿಷವಾದ ಮೇಲೆ ಮೆಲ್ಲನೆ ನನ್ನ ಕರೆದು:

"ರಾಹುಲ್, ಸರಿಯಾಗಿ ಪ್ರೆಪೇರ್ ಆಗಿಲ್ಲ ಕಣೋ... ೨-೩ ಪ್ರಶ್ನೆ ಗೆ ಸಲ್ಪ ಆನ್ಸರ್ ಹೇಳ್ತೀಯಾ...!"

ನನಗೆ ಇದರಿಂದ ಒಮ್ಮೆ ಕಿಸಿವಿಸಿಯಾದರೂ, ಕೆಲ ನಿಮಿಷ ತಡೆಯಲು ಹೇಳಿ ನಂತರ ನನಗೆ ಗೊತ್ತಿದ್ದ ಉತ್ತರಗಳನ್ನು ಲೆಕ್ಚರರ್ ಹೊರಗೆ ಹೋಗಿ ನಿಂತಾಗ ಅವಳಿಗೆ ತೋರಿಸಿದೆ. ಅದಕ್ಕೆ ಬಹಳ ಖುಷಿಯಾದ ಅವಳು ಪರೀಕ್ಷೆ ಮುಗಿದ ನಂತರ ಹೊರಬಂದು " ಬಹಳ ಥ್ಯಾಂಕ್ಸ್ ಕಣೋ... ಫೇಲ್ ಅಗ್ಬಿಡ್ತೀನಿ ಅಂತ ಹೆದರಿಕೊಂಡಿದ್ದೆ... ನಿನ್ನ ಅನ್ಸರ್ಸ್ನಿಂದ ತುಂಬ ಹೆಲ್ಪ್ ಅಯ್ತು.." ಎಂದು ಹೇಳಿದಳು... ನನಗೆ ಮನಸ್ಸಿನಲ್ಲೇ ಹರುಷ... ಮಾತಾಡೋಣ ಎಂದು ಬಾಯಿ ತೆರೆಯುವ ಮೊದಲೇ "ಸರಿ ಕಣೋ, ನಾನು ಬರ್ತೀನಿ" ಅಂದು ಹೇಳಿ ಹೊರಟುಹೋದಳು...!

ಮತ್ತೊಮ್ಮೆ ಮನಕ್ಕೆ ಬೇಸರ.. ನೋವು...

ಮನವು ಅವಳ ಅಕರ್ಷಣೆಗೆ ಒಳಗಾಗಿದ್ದರೂ, ಅವು ನುಡಿಗಳಲ್ಲಿ ಹೊರಬಾರದೆ ಮನಸನ್ನ ಚುಚ್ಚಿ-ಚುಚ್ಚಿ ಕಾಡುತ್ತಿದ್ದವು. ಎಲ್ಲಿ ಮನದ ಮಾತು ಅವಳಿಗೆ ಹೇಳಿ ಈಗ ಮಾತನಾಡಿಸುವ ಮಟ್ಟಕ್ಕೆ ಬಂದಿರುವ ಸಂದರ್ಭವೂ ಹಾಳಾಗುವುದೋ ಎಂದು ಭಯಪಟ್ಟು ನನ್ನನ್ನ ನಾನೇ ಸುಮ್ಮನಿರಿಸಿಕೊಳ್ಳಬೇಕಾಯಿತು...!

ಒಂದೊಂದೇ ದಿನ, ತಿಂಗಳು, ಪರೀಕ್ಷೆಗಳೆಲ್ಲಾ ಕಳೆದು ಕೊನೆಯ ವಾರ್ಷಿಕ ಪರೀಕ್ಷೆಯ ಸಮಯವೂ ಹತ್ತಿರ ಬಂದುಬಿಟ್ಟಿತ್ತು. ಅವಳ ಹತ್ತಿರ ನನ್ನ ಭಾವನೆಗಳನ್ನ ಹೇಳಿಕೊಳ್ಳೋಣವೆಂದರೆ ಮನದ ತುಮುಲವೇ ನನ್ನ ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತಿತ್ತು. ಬಾಯವರೆಗೂ ಬಂದ ಮಾತು ಅಲ್ಲೇ ಕರಗಿಹೋಗುಬಿಡುತ್ತಿತ್ತು... ಸ್ವಾತಿ ಹತ್ತಿರ ಬಂದು "ರಾಹುಲ್, ಎಕ್ಸಾಮ್ ಪ್ರೆಪರೆಷನ್ ಜೋರಾ...? ಹೇಗ್ ಓದ್ಕೊಂಡಿದ್ದೀಯಾ..?" ಎನಲು, ನಾನು "ಪರ್ವಾಗಿಲ್ಲ, ಓಕೆ..." ಅಂತ ಉತ್ತರಿಸಿದೆ. ಅವಳು " ನೀನು ಫರ್ಸ್ಟ್ ಕ್ಲಾಸ್ ಬಂದೇ ಬರ್ತೀಯಾ ಕಣೋ... ಬೆಸ್ಟ್ ಅಫ್ ಲಕ್... ಮುಂದಿನ ವಾರದಿಂದ ನಾನು ಕ್ಲಾಸಿಗೆ ಬರುತ್ತಿಲ್ಲ, ಮನೆಯಲ್ಲೇ ಎಕ್ಸಾಮ್ ಗೆ ಪ್ರೆಪೇರ್ ಅಗ್ತೀನಿ" ಎಂದು ಹೇಳಿ ಹೊರಡಲು ಅಣಿಯಾದಳು. ನಾನು "ಸ್ವಾತಿ, ನಿನಗೆ ಏನೋ ಹೇಳೋದಿತ್ತು.." ಎಂದು ಮಾತು ತಗೆದು ಹೇಳಹೊರಟಿದ್ದರೂ, ಅವಳು "ರಾಹುಲ್, ಒಂದ್ ನಿಮಿಷ ನನ್ನ ಫ್ರೆಂಡ್ಸ್ ನ ಮೀಟ್ ಮಾಡಿಬಂದೆ.. ಅಮೇಲೆ ಹೇಳ್ತೀಯಾ.." ಅಂತ ಅಂದು ಅಲ್ಲಿಂದ ಹೊರಟೇ ಹೋದಳು... ಮನವು ಬಹು ಆಳದ ಪ್ರಪಾತಕ್ಕೆ ಕುಸಿದಂತ ಅನುಭವವಾಯಿತು...

ನಂತರ ಫೈನಲ್ ಪೇಪರ್ ಬರೆದ ದಿನ ಎಲ್ಲರಂತೆ ನಾನು ಒಂದು ಸ್ಲಾಮ್ ಪುಸ್ತಕ ಕೈಲಿ ಹಿಡಿದು ನನ್ನ ಮಿತ್ರರ ಹತ್ತಿರ ಸ್ಲಾಮ್ ಬರೆಸಿಕೊಳ್ಳುತ್ತಿರಲು, ಸ್ವಾತಿ ದೂರದಲ್ಲಿ ತನ್ನ ಗೆಳತಿಯರೊಡನೆ ಹರಟುತ್ತ ನಿಂತದ್ದು ಕಂಡಿತು. ಕೂಡಲೆ ಸ್ಲಾಮ್ ಪುಸ್ತಕ ಎತ್ತಿಕೊಂಡ ನಾನು ಅವಳತ್ತ ಓಡಿ " ಸ್ವಾತಿ, ನೀನು ಸ್ಲಾಮ್ ಬುಕ್ ನಲ್ಲಿ ಬರೆಯೋದಿಲ್ವಾ...?" ಅಂತ ಕೇಳಲು, "ಓಹ್, ಸಾರಿ ಕಣೋ, ಈಗ ಬರೆದೆ..." ಎಂದು ಬರೆಯಲು ಶುರುಮಾಡಿದಳು. ತನ್ನ ಕೈಲಿದ್ದ ಸ್ಲಾಮ್ ಬುಕ್ ಅನ್ನು ನನಗೆ ಕೊಟ್ಟು " ನೀನು ಬರೆದು ಬಿಡಪ್ಪ..., ದಯವಿಟ್ಟು ಅರ್ಧ-ಬರ್ಧ ಡೀಟೇಲ್ಸ್ ಬರಿಬೇಡ... ಎಲ್ಲಾ ಕಂಫ್ಲೀಟ್ ಮಾಡು ಅಯ್ತಾ...?" ಎಂದು ಹೇಳಲು ನಾನು ಗೋಣು ಆಡಿಸಿ ಅವಳ ಸ್ಲಾಮ್ ಪುಸ್ತಕದಲ್ಲಿ ಗೀಚಲು ಶುರುಮಾಡಿದೆ.

ತಕ್ಷಣ ಎನೋ ನೆನಪಾದವಳಂತೆ... " ರಾಹುಲ್, ಅವತ್ತು ಎಕ್ಸಾಮ್ ಮುಂಚೆ ನೀನು ಎನೋ ಹೇಳ್ಬೇಕಂತಿದ್ದೆ ಅಲ್ವ...? ಎನೋ ಅದು..?" ಅಂತ ಕೇಳಲು ನನಗೆ ಮೈ ಜುಮ್ಮೆಂದ ಅನುಭವ.. ತಡವರಿಸಿಕೊಳ್ಳುತ್ತ "ಅಹ.. ಎನಿಲ್ಲ... ಮರ್ತೋಯ್ತು ಕಣೆ..." ಎಂದು ಮಾತು ಬದಲಿಸಲು ಯತ್ನಿಸಿದೆ. ಅವಳು "ಇಲ್ಲಾ, ಎನಾದರೂ ಇಂಪಾರ್ಟೆಂಟ್ ವಿಷಯ ಇತ್ತಾ..?" ಅಂತ ಮತ್ತೆ ಕೇಳಲು "ಇಲ್ಲ ಕಣೆ, ಅಂತದ್ದೇನಾದರೂ ಇದ್ದಿದ್ದರೆ ನಿನ್ನ ಹತ್ತಿರ ಹೇಳುತ್ತಿರಲಿಲ್ಲವೇನೂ..." ಅಂತ ಮಾತು ತಪ್ಪಿಸಲು ಯತ್ನಿಸಿದೆ. ಅವಳು "ಅಯ್ತಪ್ಪ, ನೆನಪಿಸಿಕೊಂಡೇ ಹೇಳು ಪರ್ವಾಗಿಲ್ಲ.. ಎನಿವೇ ಕೀಪ್ ಇನ್ ಟಚ್...ಮರಿಬೇಡ..." ಅಂತ ಹೇಳಿ ತನ್ನ ಗೆಳತಿಯರತ್ತ ಮರಳಿ ಹೊರಟಳು. ಮನವು ಚಡಪಡಿಸುತ್ತಿದ್ದರೂ ಮತ್ತೊಮ್ಮೆ ಎನೂ ಹೇಳದೆ ಸುಮ್ಮನಾಗಬೇಕಾಯಿತು...

ಹೌದು, ಅಂದು ನಾನು ಅವಳಿಗೆ ಅದು ಮುಖ್ಯ ಅಲ್ಲದಿದ್ದರೂ ನನಗೆ "ಇಂಪಾರ್ಟೆಂಟ್ ವಿಷಯ" ವೆ ಅಗಿತ್ತು! ಮನದಲ್ಲಿ ಮೊಗ್ಗಾಗಿ ಅರಳಿದ್ದ ಪ್ರೀತಿ ಹೂವಾಗಿ ಅರಳುವ ಮುನ್ನ ಚಿವುಟಿಹೋಗಿತ್ತು. ಏನೋ ನನ್ನ ಸಂಕೋಚದ ಸ್ವಭಾವ ನನ್ನನ್ನು ತಡೆದುನಿಲ್ಲಿಸಿ ಅವಳಿಗೆ ನನ್ನ ಪ್ರೇಮ ನಿವೇದನೆ ಹೇಳದಂತೆ ಮಾಡಿತ್ತು.

ಅವಳು ನನ್ನ ಪುಸ್ತಕದಲ್ಲಿ ಬರೆದ ಸಾಲುಗಳತ್ತ ಒಮ್ಮೆ ಕಣ್ಣಾಡಿಸುತ್ತ ಹೋಗಲು... ಅವಳು ಬರೆದ ಒಂದು ಸಾಲು: "Friendship needs no words... but hearts to bind..." ಮಾತ್ರ ನನ್ನ ಮನವನ್ನು ಹಿಂಡಿ ನೋಯುವಂತೆ ಮಾಡಿತ್ತು. ನನ್ನ ಕುರುಡು ಪ್ರೀತಿಗೆ ಕೊನೆಗೂ "ಪ್ರೀತಿಯ" ಬೆಳಕು ಸಿಗಲಿಲ್ಲ... ( ಬಹುಶ: ಅದು ನನ್ನ ಮೊದಲ Love ಆಗಿದ್ದರಿಂದ ಅಂತಹ ಭಾವನೆಗಳು ಬಂದಿದ್ದವೇನೋ...!)

ಕೆಲ ತಿಂಗಳು ಅವಳ ಇಮೇಲ್, ಎಸ್.ಎಮ್.ಎಸ್ ಬಂದರೂ ಹೈಯರ್ ಸ್ಟಡೀಸ್ಗೋಸ್ಕರ ಯು.ಎಸ್ ಗೆ ಹೊರಟುನಿಂತ ಅವಳು ನನಗೆ ಅದರ ಬಗ್ಗೆ ಕೊನೆಯ ಮೇಸೆಜ್ ಮಾಡಿದ ಮೇಲೆ ನಂತರದ ದಿನಗಳಲ್ಲಿ ಮತ್ತೆ ಅವಳ ಇಮೇಲ್ ಅಗಲಿ ಎಸ್.ಎಮ್.ಎಸ್ ಅಗಲಿ ನನಗೆ ಬರಲಿಲ್ಲ...

*********

ಮನವು ಮತ್ತೆ ವರ್ತಮಾನಕ್ಕೆ ಮರಳಿ ಬಂತು... ಇಂದು ಅದೇ ಸ್ಲಾಮ್ ಬುಕ್ ಓದುತ್ತಿದ್ದರೆ ತನ್ನಷ್ಟಕ್ಕೆ ತಾನೇ ನಗು ಬರುತ್ತಿದ್ದರೂ ಅಂದು ಮನವು ಕಂಡ ಆ ಪ್ರೀತಿಯ ಅಸೆ ಬಹುಶ: ನಾನು ಜೀವಂತವಿರುವವರೆಗೂ ಕಾಡುತಿರುವುದೇನೋ...! ಇಂದು ನನಗೆ ಗರ್ಲ್ ಫ್ರೆಂಡ್ ಇದ್ದರೂ..., ಅದೂ ನಾವಿಬ್ಬರು ಕೆಲವೇ ತಿಂಗಳಲ್ಲಿ ಮದುವೆಯಾಗುತ್ತಿದ್ದರೂ ನಾನು ನನ್ನ ಗರ್ಲ್ ಫ್ರೆಂಡಿಗೆ ಈ ವಿಷಯ ತಿಳಿಸಿದಾಗ ಅವಳು ನನ್ನ ನೋಡಿ ನಕ್ಕು ನಕ್ಕು ಸುಸ್ತಾಗಿದ್ದಳು...!!. "ಅವಗಿನ ತರಹ ಈಗಲೂ ಸುಮ್ಮನಿದ್ದಿದ್ದರೆ ಅವತ್ತಿನ ಸ್ಥಿತಿನೇ ಮತ್ತೆ ನೋಡ್ಬೇಕಾಗಿತ್ತು ಕಣೋ..." ಎಂದು ಛೇಡಿಸಿದಳು. ಹೌದು, ನಾನು ನನ್ನ ಈ ಗರ್ಲ್ ಫ್ರೆಂಡ್ ಗೆ ಬಹುಬೇಗನೆ ಪ್ರೇಮ ನಿವೇದನೆ ಮಾಡಿಬಿಟ್ಟಿದ್ದೆ...! ಹಿಂದಿನ ಅನುಭವದ ಪಾಠದ ಫಲವೇನೋ..! ಅಂತೂ ನನ್ನವಳು ನನ್ನ ನಿವೇದನೆಯನ್ನ ಒಪ್ಪಿದ್ದಳು!!. ಅದರೂ ನನ್ನ ಮನವು ಆ "ಮೊದಲ ಪ್ರೀತಿಯ" ನೆನೆದು ಒಮ್ಮೊಮ್ಮೆ ಪುಳಕಿತಗೊಳ್ಳೂವುದಲ್ಲಾ ಅದಕ್ಕೆ ಕಾರಣ ಬಹುಶ: ನನ್ನ ಎರಡನೆ ಪ್ರೀತಿಯು (ನನ್ನ ಗರ್ಲ್ ಫ್ರೆಂಡಿಗೆ ಗೊತ್ತಾಗದಿದ್ದರೆ ಒಳಿತು...!) ನನ್ನ ಮೊದಲ ಪ್ರೀತಿಯಷ್ಟು ಸಮನಿಲ್ಲವೇನೋ...!

ಓಹ್, ತುರ್ತು ಕೆಲಸವಿದ್ದುದರ ನೆನಪಾಗಿ ನಾನು ಆ ಸ್ಲಾಮ್ ಬುಕ್ ಅನ್ನ ಮತ್ತೆ ಕಬರ್ಡ್ ನಲ್ಲಿ ಎತ್ತಿಟ್ಟಿ (ಮನದಲ್ಲೇ ಒಮ್ಮೆ ನಕ್ಕು...) ಮನೆಯಿಂದ ಜೆರಾಕ್ಸ್ ಪ್ರತಿ ಮಾಡಿಸಲು ಹೊರ ಹೊರಟೆ...