ವಿನಯ್ ...
ನನಗೊಬ್ಬಳು ಗೆಳತಿ ಇದ್ದಳು, ನಮ್ಮಿಬ್ಬರದು ತುಂಬ ಒಳ್ಳೆಯ ಗೆಳೆತನ...


ಒಮ್ಮೆ ನಾನು ಅವಳು ಒಂದು ಸರೋವರದ ಹತ್ತಿರ ಕುಳಿತಿದ್ದಾಗ ಅವಳು ತನ್ನ ಬೊಗಸೆಯಲ್ಲಿ ನೀರು ಹಿಡಿದು ನನ್ನೆಡೆಗೆ ತೋರಿಸಿ ಹೀಗಂದಳು:


"ನಿ ಈ ನೀರನ್ನು ಸೂಕ್ಷ್ಮವಾಗಿ ಗಮನಿಸು..., ಇದು ಪ್ರೀತಿಯನ್ನು ಸೂಚಿಸುತ್ತದೆ.."


ಆದರೆ ನಾ ಅದನ್ನು ಹೀಗೆ ವಿಶ್ಲೇಷಿಸಿದೆ:


"ನಾವು ನೀರನ್ನು ಬೊಗಸೆಯಲ್ಲಿ ಹಗುರವಾಗಿ ಇಟ್ಟು ನೀರನ್ನು ತನ್ನ ಪಾಡಿಗೆ ಇರಲು ಬಿಟ್ಟರೆ ಅದು ಹೆಚ್ಚು ಹೊರಹೋಗದೆ ಅಲ್ಲೇ ಇರುತ್ತದೆ,


ಅದೇ ನಾವು ಬೊಗಸೆಯಲ್ಲಿನ ನೀರನ್ನು ಬಿಗಿಯಾಗಿ ಹಿಡಿಯಲು ಹೋಗಿ ನಮ್ಮ ಹತೋಟಿಯಲ್ಲಿ ಇಡಲು ಪ್ರಯತ್ನ ಪಟ್ಟರೆ ಅದು(ನೀರು) ಕೈ ಬದಿಯಲ್ಲಿ ಅದಷ್ಟು ಹೊರಚಲ್ಲಿ ಹೋಗಲು ಪ್ರಯತ್ನಿಸುತ್ತದೆ.


ಇದೇ ನನ್ನ ಪ್ರಕಾರ ಜನರು ಪರಸ್ಪರ ಭೇಟಿಯಾದಾಗ/ನೋಡಿದಾಗ ಮಾಡುವ ದೊಡ್ಡ ತಪ್ಪು...:


ಪ್ರೀತಿ: ತಮ್ಮ ವಶಕ್ಕೆ ಪಡೆಯಲು/ತಮಗೆ ಆಗಲಿ ಎಂದು ಬಯಸುವುದು, ಅವರ ಆಕಾಂಕ್ಷೆ, ಅವರ ಬಯಕೆ.... ಬೊಗಸೆಯಲ್ಲಿನ ನೀರು ಕೈಯಿಂದ ಚಲ್ಲಿ ಹೊರಹೋಗುತ್ತಿರುವ ಹಾಗೆ....

ಪ್ರೀತಿಯೂ ಅದೇ ತರಹ..., ಅದು ಎಂದೆಂದೂ ಸ್ವತಂತ್ರ... ನಮಗೆ ಅದರ ಗುಣವನ್ನು ಎಂದೂ ಬದಲಾಯಿಸಲಾಗುವುದಿಲ್ಲ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದೀರಾ ಅಂದರೆ ನೀವು ಅವರನ್ನು ಅದಷ್ಟು ಮುಕ್ತವಾಗಿ/ಸ್ವತಂತ್ರವಾಗಿ ಇರಲು ಬಿಡಿ...


ನಿಮ್ಮಿಂದಾದಷ್ಟು ಅವರಿಗೆ ಕೊಡಿ/ಸಹಾಯ ಮಾಡಿ.., ಅದರೆ ಅವರಿಂದ ಹೆಚ್ಚು ಬಯಸಬೇಡಿ....


ಅವರಿಗೆ ಸಲಹೆ ನೀಡಿ.., ಅದರೆ ಅವರ ಮೇಲೆ ಅಧಿಕಾರ ತೋರಿಸಬೇಡಿ....


ಕೇಳಿ.., ಅದರೆ ಬೇಡ ಬೇಡಿ...


ಇದು ಕೇಳುವುದಕ್ಕೆ/ಹೇಳುವುದಕ್ಕೆ ಸುಲಭವನಿಸಬಹುದು... ಅದರೆ ಪ್ರಯತ್ನ ಪಟ್ಟು ಅನುಸರಿಸಲು ಹೊರಟರೆ ನಿಮ್ಮ ಜೀವಮಾನವೇ ಸಾಕಾಗದಿರಬಹುದು... ಅದರೆ ಇದೇ ನಿಜವಾದ ಪ್ರೀತಿಯ ಗುಣ ಲಕ್ಷಣ... ಇದನ್ನ ನೀವು ಅನುಭವಿಸಬೇಕಂದರೆ ನೀವು ನಿಮ್ಮ ಪ್ರೀತಿ ಪಾತ್ರರಲ್ಲಿ ಹೆಚ್ಚನ್ನು ಬಯಸಬಾರದು.


ನಿಜ ಪ್ರೀತಿಗೆ ನಿಮ್ಮ ನಿಶ್ಕಲ್ಮಷ ಹೃದಯ, ನೀವು ತೋರುವ ಆ ಬೆಚ್ಚಗಿನ ಆರೈಕೆಯಷ್ಟೇ ಸಾಕು.., ಎಲ್ಲರ ಹೃದಯ ಗೆಲ್ಲಲು..."


-------------------******------------------------


--- ಇದು ಸ್ವಾಮಿ ವಿವೇಕಾನಂದರು ಹೇಳಿದ ಒಂದು ಸುಂದರವಾದ ಕಥೆ... ನಮ್ಮ ಬಾಳಿಗೆ ನಿಜವಾದ ದಾರಿದೀಪ. ಕಲ್ಕತ್ತ ದಲ್ಲಿನ ಒಂದು ಸಂಪ್ರದಾಯಸ್ಥ ಕಾಯಾಸ್ತ ಕುಟುಂಬದಲ್ಲಿ ೧೨ ಜನವರಿ ೧೮೬೩ ರಂದು ಹುಟ್ಟಿದ ಸ್ವಾಮಿ ವಿವೇಕಾನಂದರು ತಮ್ಮ ಅತಿ ಕಡಿಮೆ ಜೀವಿತಾವಧಿಯಲ್ಲಿ ಮಾಡಿದ ಕಾರ್ಯ ಅವರನ್ನು ಇಂದೂ ಸಹ ಭಾರತದ ಶ್ರೇಷ್ಠ ಪುತ್ರರಲ್ಲಿ ಒಬ್ಬರೆಂದು ಪೂಜಿಸಲಾಗುತ್ತದೆ. ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಅವರು ವೇದಗಳ ಅಧ್ಯಯನ ಮಾಡಿ, ದೇಶದ ಉದ್ದಗಲಕ್ಕೂ ಸುತ್ತಿ, ನಮ್ಮ ದೇಶದ ಪರಮೋತ್ತಮ ಪ್ರತಿನಿಧಿಯಾಗಿ ೧೮೯೩ ರಲ್ಲಿ ನೆಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ವೇದಾಂತ, ಯೋಗ ಮತ್ತು ಹಿಂದುತ್ವದ ಬಗ್ಗೆ ಅಮೇರಿಕದಲ್ಲಿ ಪ್ರವಚನ ಮತ್ತು ಭಾಷಣಗಳನ್ನ ಮಾಡಿದರು. ೧೮೯೭ ರಲ್ಲಿ ಅವರು ಸ್ಥಾಪಿಸಿದ "ರಾಮಕೃಷ್ಣ ಮಠ" ಮತ್ತು "ರಾಮಕೃಷ್ಣ ಮಿಷನ್" ಇಂದೂ ಸಹ ವಿಶ್ವದ ಉದ್ದಗಲಕ್ಕೂ ಭಾರತ ಧರ್ಮದ ಐತಿಹ್ಯದ ಬಗ್ಗೆ ಪ್ರಚಾರ ಮಾಡುತ್ತಿದೆ, ಲಕ್ಷಾಂತರ ಅನುಯಾಯಿಗಳನ್ನು ಪಡೆದಿದೆ...


12 ಜನವರಿ, ಅಂದು ಅವರ ೧೪೭ ನೇ ಜನ್ಮದಿನ... ಭಾರತ ಕಂಡ ಈ ಶ್ರೇಷ್ಠ "ಸಂತ" ನಿಗ ನಮ್ಮೆಲ್ಲರ ನಮನ....
ವಿನಯ್ ...
ಭಾರತ ಹಲವು ಸಂಸ್ಕೃತಿಗಳ ನೆಲೆವೀಡು... ಹಲವು ವೈವಿಧ್ಯಗಳ ಸಂಗಮ.... ಜಗತ್ತಿನ ಹಲವು ಪ್ರಾಚೀನ ಸಂಸ್ಕೃತಿಗಳಲ್ಲಿ ಶ್ರೇಷ್ಠವಾದದ್ದು ಭಾರತೀಯ ಸಂಸ್ಕೃತಿ. ಈ ಪುಣ್ಯಭೂಮಿಯಲ್ಲಿ ಆಚರಿಸುವ ಉತ್ಸವಗಳು ಅನೇಕ. ಇದರಲ್ಲಿ ಆನಾದಿಕಾಲದಿಂದ ಆಚರಣೆಯಲ್ಲಿರುವ/ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಕುಂಭ ಮೇಳವೂ ಒಂದು...



ಬಹುಶ: ಲಕ್ಷಾಂತರ ಜನರು ಸೇರುವ... ಎಲ್ಲರೊಳು ಒಂದಾಗಿ ನದಿಯಲ್ಲಿ ಪುಣ್ಯಸ್ನಾನಗೈಯುವ ಉತ್ಸವ ಜಗತ್ತಿನಲ್ಲಿ ಇದೊಂದೇ ಇರಬಹುದು ಅನಿಸುತ್ತದೆ. ನಾಗ ಬಾಬಾ, ಸಾಧು-ಸಂತರು, ಮಂತ್ರ ಪಠಿಸುವ ಪುರೋಹಿತರು, ಯೋಗಿಗಳು, ವಿದೇಶಿಯರು, ಬಡವ-ಶ್ರೀಮಂತರು...., ಹು: ಯಾರಾರು ಬೇಕು ಹೇಳಿ..... ಎಲ್ಲರ ಗಮನ "ಮೋಕ್ಷ ಸಾಧನೆ" ಗಾಗಿ... ಬಹುಜನ್ಮದ ಬಂಧನದಿಂದ ಮುಕ್ತಿಗಾಗಿ...

ನದಿ ಮೂಲಗಳು ನಮ್ಮ ಸಂಸ್ಕೃತಿಯಲ್ಲಿ ಬಹಳ ಮಹತ್ವ ಸ್ಥಾನ ಪಡೆದಿವೆ... ಎಲ್ಲರ ಜೀವನಾಡಿಯಾಗಿರುವುದಲ್ಲದೇ ಜನರ ಪಾಪ ತೊಳೆಯುವ ಪಾಪನಾಶಿಣಿಗಳಾಗಿಯೂ ಅವುಗಳ ಅಸ್ತಿತ್ವವಿದೆ.... ಜನರ ಅಸ್ತಿಕತನ, ನಂಬಿಕೆ, ಭಕ್ತಿ-ಭಾವಗಳು ಸಹ ಇದರಲ್ಲಿ ಸೇರಿಕೊಂಡಿವೆ. ನೀರು ಹೇಗೆ ಜೀವಸತ್ವವೋ, ಹಾಗೆಯೇ ನಮ್ಮ ಜನಕ್ಕೆ ಸರ್ವವೂ ಸಹ..., ಅದಕ್ಕೆ ನೀರಿಗೆ ಪಂಚಸತ್ವಗಳಲ್ಲಿ ಬಹಳ ಮುಖ್ಯಸ್ಥಾನವಿದೆ.

ನಮ್ಮ ಭಾರತ ಪುಣ್ಯಭೂಮಿಯಲ್ಲಿ ಇರುವ ಹಲವು ನದಿಗಳಲ್ಲಿ ಗಂಗಾ ನದಿಗೆ ನದಿಗಳಲ್ಲೇ ಶ್ರೇಷ್ಟ ಸ್ಥಾನ. ಅಜನ್ಮ ಪಾಪನಾಶಿನಿ ಗಂಗೆಯ ಮಹಿಮೆಯ ಬಗ್ಗೆ ಆನಾದಿ ಕಾಲದಿಂದಲೂ, ಹಲುವು ವೇದಗಳ ಬರಹಗಳಲ್ಲೂ ಉಲ್ಲೇಖವಿದೆ. ಈ ತಾಯಿ ಎಲ್ಲೆಲ್ಲಿ ಹರಿದಳೋ ಅಲ್ಲೆಲ್ಲಾ ಪುಣ್ಯಸ್ಥಾನಗಳ ಉಗಮವಾಗಿದೆ... ಅಸ್ತಿಕ ಭಕ್ತರಿಗೆ ಮುಕ್ತಿಯ ತಾಣವಾಗಿವೆ....

ಕುಂಭ ಮೇಳದ ಬಗ್ಗೆ ಸಂಕ್ಷಿಪ್ತವಾಗಿ ಹೇಳುವುದಾದರೆ: ಪಾಪಗಳನು ತೊಳೆದು, ಜನ್ಮ ಬಂಧನಗಳಿಂದ ಮುಕ್ತಿಪಡೆಯುವ "ಪುಣ್ಯ ಮೇಳ"...

ಏನಿದು "ಕುಂಭ ಮೇಳ"...?

ಕುಂಭ -- ಸಂಸ್ಕೃತದಲ್ಲಿ ಕಳಶಕ್ಕೆ ಹೋಲಿಸಲಾಗುತ್ತದೆ. ನಮ್ಮ ಜೋತಿಷ್ಯ ಶಾಸ್ತ್ರದಲ್ಲಿ ಕುಂಭ/ಕಳಶವು ಕುಂಭ ರಾಶಿಗೆ ಸಂಬಂಧಿಸಿದೆ. ಅದಕ್ಕೆ ಏನೋ ಈ ರಾಶಿಯಲ್ಲಿನ ಗ್ರಹಗಳ ಸಂಯೋಗದಲ್ಲೇ ಈ ಉತ್ಸವ ಬರುವುದರಿಂದ "ಕುಂಭ ಮೇಳ" ಎಂಬ ಹೆಸರು ಬಂದಿರುವುದು.

ಸಮುದ್ರಮಥನ ನೆಡೆದು ಅಮೃತ ಪ್ರಪ್ತಿಯಾದಾಗ ದೇವತೆಗಳು-ರಾಕ್ಷಸರ ನಡುವ ಆ ಅಮೃತ ಪಡೆಯಲು ಭೀಕರ ಯುದ್ಧವೇ ನೆಡೆದಿತ್ತು. ಆದು ೧೨ ದಿನ ಮತ್ತು ೧೨ ರಾತ್ರಿಗಳವರೆಗೂ ವಿಸ್ತರಿಸಿತ್ತು... ( ಮನುಷ್ಯ ಜನ್ಮದ ೧೨ ವರ್ಷಕ್ಕೆ ಇವು ಸಮ). ಆ ಸಮಯದಲ್ಲಿ ಅಮೃತ ಕಳಶವನ್ನು ಹೊತ್ತ ದೇವತೆಗಳು ಅದನ್ನು ರಾಕ್ಷಸರ ಹಿಡಿತದಿಂದ ಉಳಿಸಲು ಹೊತ್ತೊಯುತ್ತಿದ್ದಾಗ ಆ ಕಳಶದಿಂದ ಕುಲುಕಿದ ಹಲವು ಅಮೃತದ ಬಿಂದುಗಳು ಪ್ರಯಾಗ, ಹರಿದ್ವಾರ, ಉಜ್ಜೈನಿ ಮತ್ತು ನಾಸಿಕ್ ಎಂಬ ಕ್ಷೇತ್ರಗಳಲ್ಲಿ ಬಿದ್ದವೆಂದು ಪ್ರತೀತಿ. ಈ ನಾಲ್ಕು ಕ್ಷೇತ್ರಗಳಲ್ಲೇ ಈಗ ಕುಂಭ ಮೇಳ ನೆಡೆಯುವುದು...

ನಾಗ ಬಾಬಗಳು:


"ಕುಂಭ ಮೇಳ" ಪ್ರಮುಖರೆಂದೇ ಹೇಳಲ್ಪಡುವ, ಸಾಧುಗಳಲ್ಲೇ ಬಹಳ ಕೋಪಿಷ್ಟರು, ಭಯಂಕರ ರೂಪದವರು ಮತ್ತು ಆಕ್ರಮಣಶಾಲಿಗಳು. ಯಾವಗಲೂ ತಪ ಸಾಧನಗಳಲ್ಲೇ ತಮ್ಮ ಜೀವನ ಕಳೆಯುವ ಇವರು "ಕುಂಭ ಮೇಳ" ಹೊತ್ತಿಗೆ ಜಾಗೃತರಾಗಿ, ತಮ್ಮ ಆವಾಸಸ್ಥಾನವಾದ ಗುಹೆ, ಬೆಟ್ಟಗಳಿಂದ ಹೊರಬಂದು ನದಿಯಲ್ಲಿ ಪ್ರಥಮರಾಗಿ ಪುಣ್ಯಸ್ನಾನಗೈಯುತ್ತಾರೆ. ಸದಾ ನಗ್ನರಾಗಿರುವ, ದೇಹದ ತುಂಬಾ ಅಗ್ನಿಕುಂಡದ/ಚಿತಾಬಸ್ಮದ ಲೇಪನ ಮಾಡಿಕೊಂಡಿರುವ ಇವರು ಶಿವ ಸಾಕ್ಷಾತ್ಕಾರಕ್ಕಾಗಿ ತಮ್ಮ ಜೀವನ ಮುಡಿಪಿಡುವವರು. ಇವರ ಸ್ನಾನದ ನಂತರವೇ ಇತರರ ಪುಣ್ಯಸ್ನಾನ ನೆಡೆಯುವುದು ಇಲ್ಲಿಯವರೆಗಿನ ವಾಡಿಕೆ.



"ಕುಂಭ ಮೇಳ" ನಡೆಯುವ ಸಮಯ:


ಕುಂಭ ರಾಶಿಯಲ್ಲಿ ಗುರು ಗ್ರಹದ ಪ್ರವೇಶವಾದಾಗ ಮತ್ತು ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದಾಗ "ಕುಂಭ ಮೇಳ" ಘಟಿಸುತ್ತದೆ. ಈ ಸಂಯೋಗ ಎಲ್ಲಾ ವರ್ಷಗಳಲ್ಲೂ ಘಟಿಸುವುದಿಲ್ಲ. ಇದರ ಸಂಯೋಗ ಪುಣ್ಯನದಿಗಳ ನೀರನ್ನು ಅಮೃತವಷ್ಟೇ ಪುಣ್ಯವನ್ನಾಗಿ ಮಾಡುವ ಶಕ್ತಿ ಹೊಂದಿವೆ.


ಸ್ಥಳ ಮತ್ತು ಗ್ರಹ ಕೂಟ ಸಂಯೋಗ:

ಗುರು ಗ್ರಹ, ಸೂರ್ಯ, ಚಂದ್ರಗಳ ಸಮ್ಮಿಲನದಲ್ಲಿ "ಕುಂಭ ಮೇಳ" ಈ ಸ್ಥಳಗಲ್ಲಿ ನೆಡೆಯುತ್ತವೆ:

ಹರಿದ್ವಾರ: ಕುಂಭ, ಮೇಷ, ಧನು

ಪ್ರಯಾಗ: ವೃಷಭ, ವೃಶ್ಚಿಕ.

ನಾಸಿಕ್: ಸಿಂಹ, ಕರ್ಕಾಟಕ

ಉಜ್ಜೈನಿ: ಸಿಂಹ, ಮೇಷ


"ಶಾಹಿ ಸ್ನಾನ" ನೆಡೆಯುವ ದಿನಗಳು:


೧೪ ಜನವರಿ ೨೦೧೦: ಮಕರ ಸಂಕ್ರಾಂತಿ

೧೫ ಜನವರಿ ೨೦೧೦: ಮೌನಿ ಅಮಾವಾಸ್ಯೆ ಮತ್ತು ಸೂರ್ಯ ಗ್ರಹಣದ ದಿನ

೨೦ ಜನವರಿ ೨೦೧೦: ವಸಂತ ಪಂಚಮಿ

೩೦ ಜನವರಿ ೨೦೧೦: ಮಾಘ ಪೂರ್ಣಿಮೆಯ ದಿನ

೧೨ ಮತ್ತು ೧೩ ಫೆಬ್ರವರಿ ೨೦೧೦: ಮಹಾಶಿವರಾತ್ರಿ ಯಂದು

೧೫ ಮಾರ್ಚ್: ಸೋಮವತಿ ಅಮಾವಾಸ್ಯ

೨೪ ಮಾರ್ಚ್: ರಾಮ ನವಮಿಯ ದಿನ

೩೦ ಮಾರ್ಚ್: ಚೈತ್ರ ಪೂರ್ಣಿಮೆಯ ದಿನ

೧೪ ಎಪ್ರಿಲ್: ಅಮಾವಾಸ್ಯ - ಕೃಷ್ಣ ಪಕ್ಷ

೨೮ ಎಪ್ರಿಲ್: ವೈಶಾಖ ಪೂರ್ಣಿಮೆಯ ದಿನ

ಇದರಲ್ಲಿ ೧೨-೧೩ ಫೆಬ್ರವರಿ, ೧೫ ಮಾರ್ಚ್, ೧೪ ಮತ್ತು ೨೮ ಎಪ್ರಿಲ್ ಮುಖ್ಯ ಸ್ನಾನದ ದಿನಗಳು...


ಓದುಗರೆ, ನಿಮ್ಮಲ್ಲಿ ಆನೇಕರು ಈ ಮಹಮೇಳದಲ್ಲಿ ಭಾಗವಹಿಸಲು ಈ ಸ್ಥಳಗಳಿಗೆ ಹೋಗಬಹುದು... ನಿಮ್ಮೆಲ್ಲರ ಪಯಣ ಸುಖಕರವಾಗಿರಲಿ ಎಂದು ಬಯಸುವೆ
ವಿನಯ್ ...
ನಮ್ಮ ಸಂಜು ಅಲಿಯಾಸ್ ಸಂಜಯ್ ನಂಜಪ್ಪ ಬಡಾವಣೆ ಕಂಡ ಅತ್ಯಂತ ಸೋಮಾರಿ ಹುಡುಗರಲ್ಲಿ ಒಬ್ಬ. ಹೇಗೋ ಕಷ್ಟಪಟ್ಟು ಬಿ.ಕಾಂ ಅನ್ನ ೩ನೇ ಕ್ಲಾಸ್ ನಲ್ಲಿ ಪಾಸ್ ಮಾಡಿಕೊಂಡನೋ ಆ ದೇವರಿಗೆ ಗೊತ್ತು!! ಕಾಲೇಜಿಗೆ ಹೋಗಿದ್ದಿಕ್ಕಿಂತ ಹೆಚ್ಚಾಗಿ ಟೇಟರ್ ಮತ್ತು ಪಾರ್ಕ್ ನಲ್ಲೇ ಜಾಸ್ತಿ ಸಮಯ ಕಳೆದ ಅವನು. ಕಾಲೇಜ್ ಮುಗಿದ ಮೇಲೆ ಹೆಚ್ಚೇನು ಮಾಡದೆ ಮನೆಯಲ್ಲೇ ಅರಾಮಾಗಿ ಕಾಲ ಕಳೆಯತೊಡಗಿದ. ಅಪ್ಪ ಕೆಲಸ ಸೇರು ಅಂತ ಕೂಗಿ-ಕೂಗಿ ಹೇಳಿದರೂ ಆದು ತನಗೆ ಹೇಳಿಯೇ ಇಲ್ಲವೇನೋ ಅನ್ನುವಂತೆ ತನ್ನ ಎಮ್.ಪಿ-೩ ಪ್ಲೇಯರ್ ಅನ್ನು ಕಿವಿಗೆ ಹಾಕಿಕೊಂಡು ತನ್ನದೇ ಲೋಕದಲ್ಲಿ ಇದ್ದು ಬಿಡುತ್ತಿದ್ದ. ಅಮ್ಮ ಇವನಿಗೆ ಊಟ ಹಾಕುವಾಗ "ಲೇ ಸಂಜಯಾ, ಇನ್ನ್ ಎಷ್ಟ್ ದಿನ ಹೀಗೆ ಸುಮ್ಮನೆ ತಿಂದ್ಕೊಂಡ್ ಬಿದ್ದಿರ್ತೀಯೋ?" ಅಂತಾ ದೊಡ್ಡ ದನಿಯಲ್ಲಿ ಹೇಳ್ತಾಯಿದ್ದರೆ, ಅವನು "ನೋಡೋಣ, ಮನೆಯಲ್ಲಿ ರೇಷನ್ ಖಾಲಿಯಾಗುವರೆಗೂ...!" ಅಂತ ಪಟ್ಟನೆ ಉತ್ತರಿಸುತ್ತಿದ್ದ. ಅಮ್ಮ "ಇದಕ್ಕಷ್ಟೇ ಲಾಯಕ್ಕು ನೀನು...!" ಅಂತ ಗೊಣಗಿ ಸುಮ್ಮನಾಗುವುದಷ್ಟೇ ಬಾಕಿ!. ಬೆಳಗಿನ ಸೂರ್ಯ ಮೇಲೇರಿ ಮಧ್ಯಾಹ್ನ ಹೊತ್ತಿಗೆ ನೆಡೆಯುತ್ತಿದ್ದರೂ ಇವನು ಏಳುವುದು ಕಷ್ಟ..! ಅಮ್ಮನ "ನೀರ್ ಪ್ರೋಕ್ಷಣೆ" ಆಗದಿದ್ದರೆ ಹಾಗೇ ಬೆಡ್ ಅಲ್ಲೇ ಇದ್ದುಬಿಡುತ್ತಿದ್ದನೇನೊ! ಅಂತೂ ಎದ್ದ ಮೇಲೆ ಏನೂ ಹೇಳಿಕೊಳ್ಳುವಂತ ಕೆಲಸ ಮಾಡದಿದ್ದ ಅವನು, ಬರಿ ತಿಂಡಿ ತಿಂದಿ, ತನ್ನ ಬೈಕ್ ಹತ್ತಿ ಸುತ್ತಲು ಹೋಗುತ್ತಿದ್ದದ್ದೇ ಅವನು ಮಾಡುತ್ತಿದ್ದ ಘನ: ಕಾರ್ಯ...!

ಹೀಗಿದ್ದ ನಮ್ಮ ಸೋಮಾರಿ ಸಂಜು, ಅದ್ ಹೇಗೆ ಗೀತಾಳ ಪ್ರೇಮ ಪಾಶದಲ್ಲಿ ಸಿಕ್ಕಿ ಬಿದ್ದನೋ ಆ ಭಗವಂತನೇ ಬಲ್ಲ...

.....................................................

ತನ್ನ ಎದುರಿನ ಮನೆಯಲ್ಲಿ ಅಂದು ಹೊಸ ನೆರೆಮನೆಯವರಾಗಿ ಒಂದು ಕುಟುಂಬ ಬಂದಿತ್ತು. ಮಹಾ ಸೋಮಾರಿಯಾದ ನಮ್ಮ ಸಂಜು ಅಂದೂ ಸಹ ಗಡದ್ ನಿದ್ದೆ ಸವಿಯುತ್ತಿರಲು, "ಡಂ" ಅಂತ ಜೋರಾದ ಶಬ್ದಕ್ಕೆ ಎದ್ದು ಕುಳಿತುಕೊಂಡನು. ಕಣ್ಣುಜ್ಜಿಕೊಂಡು ಎನಾಯಿತೆಂದು ಹೊರ ಬಂದು ನೋಡಲು, ಪಾತ್ರೆಯೊಂದನ್ನು ತಗೆದುಕೊಂಡು ಹೋಗುವಾಗ ಕೆಲಸದವರು ಕೆಳಗೆ ಬೀಳಿಸಿದ್ದರು. ಹೊಸದಾಗಿ ಬಂದಿದ್ದ ಆ ಕುಟುಂಬದ ಮಧ್ಯವಯಸ್ಸಿನ ವ್ಯಕ್ತಿ "ಏ ಅಪ್ಪ, ಸಲ್ಪ ಹುಷಾರು ಕಣ್ರೋ..." ಅನ್ನಲು, ಅವರ ಹಿಂದೆ ಒಬ್ಬ ಹಾಲು ಬಣ್ಣದ ಚಲುವೆ "ಅಪ್ಪ, ಒಂದ್ ನಿಮಿಷ ಇಲ್ಲಿ ಬಾ" ಅಂತ ಕರೆಯಲು, ನಮ್ಮ ಸಂಜುದು ಹಾಗೇ ಕಣ್ಣ್ ಬಿಟ್ಟ ಸ್ಥಿತಿ...! ನೀವೇನಾದರೂ ಅವನನ್ನ ನೋಡಿದ್ದರೆ "ಇವನಿಗೆ ಸಲ್ಪ ಲವ್ ಅಗಿರ್ ಬೇಕು ಅನಿಸ್ಸುತ್ತೆ..." ಅಂತಿದ್ದಿರೇನೊ!!! ಅದರೆ ನಮ್ಮ ಹುಡುಗ "ಸಲ್ಪ" ಎನು "ಪೂರ್ತಿ" ನೇ ಲವ್ ಎಂಬ ಹಳ್ಳದಲ್ಲಿ ಅವಳ ಕಂಡ ಮೊದಲ ನೋಟದಲ್ಲೇ(ದಿನದಲ್ಲೇ!!) ಬಿದ್ದಿದ್ದ!!

ಅದರ ಪರಿಣಾಮವೇ ಏನೋ...!

ಬೆಳಗ್ಗೆ ( ಸಾರಿ ಮಧ್ಯಾಹ್ನ:...) ಕ್ಕೆ ಕಷ್ಟಪಟ್ಟು ಏಳುತ್ತಿದ್ದ ಅವನಿಗೆ... ಬೆಳಗ್ಗೆ ೬ರ ಕ್ಕೆ ಟಪಕ್ ಅಂತ ಎಚ್ಚರಾಗಿಬಿಡುವುದೇ..!!

ಅಮ್ಮನಿಗೋ ಅಶ್ಚರ್ಯವೋ ಅಶ್ಚರ್ಯ!! "ಎನೋ, ಇಷ್ಟ್ ಬೇಗ ಎದ್ದಿ...?" ಅನ್ನಲು... "ಇಲ್ಲಾ, ಎನೋ ಕೆಲಸ ಇದೆ..." ಅಂತ ಎದ್ದವನೇ ಮನೆಯ ಹೊರಬಂದು, ಕೊಂಡು ತಂದಾಗಿನಿಂದ ಎಂದೂ ತೊಳೆಯದಿದ್ದ ತನ್ನ ಬೈಕ್ ಅನ್ನು ಸೋಪ್ ಹಾಕಿ ಸ್ವಚ್ಚವಾಗಿ ತೊಳೆಯತೊಡಗಿದನು!!!

ಅಂತೂ ಗಾಡಿ ಕ್ಲೀನ್ ಆಗಿದ ಮೇಲೆ 'ಜುರ್ರ್' ಅಂತ ಹೊರಟಿದ್ದೇ ಸಿಗರೇಟ್ ಸೇದಲು ಗಿರಿಯಪ್ಪ ಅಂಗಡಿ ಬಸ್ ಸ್ಟಾಪ್ ಹತ್ತಿರ ನಿಂತಿದ್ದ... (ಸಿಗರೇಟಿಗಿಂತ ಅವನಿಗೆ ಆ ಹಾಲು ಬಣ್ಣದ ಚಲುವೆ ಎಲ್ಲಿ ಹೋಗುತ್ತಾಳೆ ಎಂದು ತಿಳಿಬೇಕಾಗಿತ್ತು!!!). ಇದು ಅವನ ಮನೆಯ ಹತ್ತಿರ ಇದ್ದ ಏಕೈಕ ಬಸ್ ಸ್ಟಾಪ್. ಅಲ್ಲಿನ ಜನ ಯಾವ ಸ್ಥಳಕ್ಕೆ ಹೋಗಬೇಕಾದರೂ ಇಲ್ಲೇ ಬಂದು ಬಸ್ ಹಿಡಿಯಬೇಕು. ಅಲ್ಲಿಂದ ಸಲ್ಪ ದೂರದಲ್ಲಿ ಬೈಕ್ ನಿಲ್ಲಿಸಿ ಕಾದು ಕೂತಿದ್ದ ಅವನಿಗೆ ತನ್ನ ಬೈಕ್ ಟಾಯರ್ "ಟುಸ್ಸ್" ಆಗಿದ್ದು ಅಗಲೇ ಗೊತ್ತಾಗಬೇಕೇ!!. ಅಲ್ಲೇ ಹತ್ತಿರದಲ್ಲಿ ಇದ್ದ ಟೈರ್ ರಿಪೇರಿ ಅಂಗಡಿಯಲ್ಲಿ ಪಂಚರ್ ಹಾಕಿಸಿಕೊಳ್ಳುವಷ್ಟರಲ್ಲಿ ಬಸ್ ಮತ್ತು ಆ "ಹಾಲು ಬಣ್ಣದ ಚಲುವೆ" ನಿಲ್ದಾಣಕ್ಕೆ ಬಂದಿದ್ದರು. ದಡಬಡನೆ ಬೈಕ್ ಸ್ಟಾರ್ಟ್ ಮಾಡಿ ಬಸ್ ಫಾಲೋ ಮಾಡಹತ್ತಿದ ಸಂಜಯ್.. ಬಸ್ ನಿಂತಾಗ ಆ "ಹಾಲು ಬಣ್ಣದ ಚಲುವೆ" ಇಳಿದು ಇನ್ನೇನು ಹೊರಡಬೇಕು, ಅವಳ ಗೆಳತಿ ಅನಿಸುತ್ತೆ... "ಗೀತಾ, ಒಂದ್ ನಿಮಿಷ ನಾನು ಬಂದೆ..." ಅಂತ ಹಿಂದಿನಿಂದ ಕೂಗಲು, ಇವಳು ತಿರುಗು ನಿಂತು ಅವಳ ಸ್ನೇಹಿತೆಯೆಡೆಗೆ ನೋಡಿ ನಕ್ಕಳು. ಸಂಜಯ್ ನೋಡುತ್ತಿದಂತೆ ಅವರಿಬ್ಬರು ನೆಡೆದು ಹೋದದ್ದು ಅಲ್ಲೆ ಹತ್ತಿರದಲ್ಲಿ ಇದ್ದ "ಅರ್.ಟಿ ಕಾಲೇಜ್" ರ ಒಳಗೆ.

ಅಡ್ರಸ್ ಮತ್ತು ಹೆಸರು ಪತ್ತೆಯಾದ ಮೇಲೆ ಇನ್ನೇನು ಬಾಕಿ ಇದೆ ಹೇಳಿ...? ಕಾಲೇಜ್ ಹತ್ತಿರ ಕೂತು ಆ "ಹಾಲು ಬಣ್ಣದ ಚಲುವೆ" ಬರುವವರೆಗೂ ಕಾದು, ಲೈನ್ ಹೊಡೆದು (ಒಂದು ಸಾಲ ಕೆನ್ನೆಗೆ ಒಂದು "ಚಟ್" ಅಂತ ತಿಂದು..!), ಹೇಗೋ ಆ "ಹಾಲು ಬಣ್ಣದ ಚಲುವೆ" ಯನ್ನ ಓಪ್ಪಿಸಿ, ಅವಳ ಹತ್ತಿರ "ಹು:.. ಐ ಲವ್ ಯೂ" ಅನ್ನಿಸಿಕೊಂಡೇ ಬಿಟ್ಟ ನಮ್ಮ ಸಂಜಯ್...!

ಇನ್ನೇನು... ಮನೆ ಬೇರೆ ಎದುರು-ಬದುರಿನಲ್ಲಿ ಇತ್ತಲ್ಲಾ!!! ಬೆಳಗ್ಗೆ ಎದ್ದವನೇ (ಈಗ ಅವನು ಬೆಳಗಿನ ಸೂರ್ಯನನ್ನು ಸರಿಯಾಗಿ ಕಾಣಲು ಶುರುಮಾಡಿದ್ದು..) ತನ್ನ ರೂಮಿನ ಕಿಟಕಿ ಹತ್ತಿರ ಬರುವುದು, ಅಲ್ಲೇ ಇದ್ದ ತನ್ನ ರೇಡಿಯೋ ಆನ್ ಮಾಡುವುದು...!, ನಮ್ಮ ಹುಡುಗಿ ಇವನು ಎದ್ದು ಎಚ್ಚರವಾಗಿದ್ದಾನೆ ಎಂಬ ಸಿಗ್ನಲ್ ಸಿಕ್ಕಿ.. ಕಿಟಕಿ ಹತ್ತಿರ ಬಂದು "ಹಲೋ.. ಗುಡ್ ಮಾರ್ನಿಂಗ್" ಅಂತ ಕಣ್ಣಲ್ಲೇ ಹೇಳಿ... ಸಣ್ಣಗೆ ಒಂದು "ಫ್ಲಾಯಿಂಗ್ ಕಿಸ್ಸ್" ಹಾರಿಬಿಡುವುದು...! ನಮ್ಮ ಹುಡುಗ ಈ ಕಡೆ ಅದನ್ನ ಹಿಡಿದು "ಪುನೀತನಾಗುವುದು"...! ದಿನ ಮರೆಯದೇ ನೆಡೆಯುತ್ತಿದ್ದ ದಿನಚರಿ ಆದು...

-------------------

ಕಾಲೇಜ್ ಹತ್ತಿರದ ಪಾರ್ಕ್ ಅವರ "ಮೀಟಿಂಗ್ ಸ್ಪಾಟ್". ಅಲ್ಲೂ ಬೇರೇನೂ ನೆಡೆಯುತ್ತಿರಲಿಲ್ಲ.. ಸುಮ್ಮನೇ ಒಬ್ಬರೊನೊಬ್ಬರು ನೋಡುವುದು, ಸಣ್ಣನೇ ನಕ್ಕು ಸುಮ್ಮನಾಗಿಬಿಡುವುದು...! ಅವಳು "ಐಸ್ ಕ್ರೀಮ್ ತಿನ್ನೋಣ ಬಾ..." ಅಂದರೆ ಇವನು "ಬೇಡ ಬಿಡು" ಅನ್ನುವುದು, ಇವನು "ಬಾ, ಫಿಲ್ಮ್ ಗೆ ಹೋಗೋಣಾ.." ಅಂದರೆ ಇವಳು "ಇಲ್ಲ, ಟೈಮ್ ಇಲ್ಲಾ ಕಣೋ.." ಅಂತ ಉತ್ತರ!. ಕೊನೆಗೆ ಇಬ್ಬರ "ಇಲ್ಲ" ಗಳ ನಡುವೆ ಸಮಯ ಕಳೆದು ಹೋಗಿ ಸುಮ್ಮನೆ ಅವರವರ ಮನೆಗೆ ಹೊರಡಬೇಕಿತ್ತು...!

ಇದರ ನಡುವೆ ನಮ್ಮ ಸಂಜಯನಿಗೆ ಕೆಲಸ ಸಿಕ್ಕಿ, ಅವನು ತನ್ನ ಮಿತ್ರರಿಗೆಲ್ಲಾ ಪಾರ್ಟಿ ಕೊಡಿಸಿ ಕಳಿಸಿದ ಮೇಲೆ ೭ ಗಂಟೆ ಯಾಗಿಬಿಟ್ಟಿತು. ಅಲ್ಲೇ ಹತ್ತಿರದಲ್ಲಿ ಇದ್ದ "ಕಾಫಿ ಡೇ" ನಲ್ಲಿ ಗೀತಳ ಜೊತೆ ಸಮಯ ಕಳೆಯುತ್ತಿದ್ದಾಗ ಅವಳ ಅಪ್ಪ ಅಲ್ಲಿಗೆ ಬಂದು ಬಿಡುವುದೇ!

ಸುಮ್ಮನೆ ಅವರನ್ನ ಒಮ್ಮೆ ನೋಡಿದ ಅವಳ ಅಪ್ಪ ಮರುಮಾತನಾಡದೇ ಅಲ್ಲಿಂದ ಹೊರಡಲು, ಗೀತಾ "ನಾನ್ ಬರ್ತೀನಿ ಕಣೋ..." ಅಂತ ಅಲ್ಲಿಂದ ಎದ್ದು ಹೊರಟಳು. ಸಂಜಯ್ ಗೆ ತನ್ನ ತಲೆ ಕೆರೆದುಕೊಂಡು ಸುಮ್ಮನೆ ಕೂರದೇ ಬೇರೇನು ಉಳಿದಿರಲಿಲ್ಲ!!!

ಅಲ್ಲಿಂದ ಮನೆಗೆ ಬಂದ ಅವನಿಗೆ ತನ್ನ "ಎದುರು ಮನೆಯಲ್ಲಿ" ( ಐ ಮೀನ್ ಗೀತಾಳ ಮನೆಯಲ್ಲಿ...) ರಂಪ ರಾಮಾಯಣ ಸುಮಾರು ಹೊತ್ತು ಕೇಳುತ್ತಲೇ ಇತ್ತು. ಇಲ್ಲಿ ಇವನು ರೇಡಿಯೋ ಆನ್ ಮಾಡಿದರೆ "ಏನಿದಿ ಗ್ರಹಚಾರವೋ, ಏನಿದಿ ವನವಾಸವೋ.." ಅಂತ ಹಾಡತೊಡಗಿತು. ಇವನಿಗೆ ತಲೆ ಕೆಟ್ಟು ರೇಡಿಯೋ ಆಫ್ ಮಾಡಿ ಬೆಡ್ ಮೇಲೆ ತಲೆಯವರೆಗೂ ರಗ್ ಎಳೆದು ಮಲಗಲು ಯತ್ನಿಸಿದನು (ನಿದ್ದೆ ಎಲ್ಲಿ ಬರುತ್ತದೆ ಅವನಿಗೆ..!)

ಇತ್ತ ನಮ್ಮ ಗೀತಾ ಕಿಟಕಿಯ ಹತ್ತಿರ ಬರುವುದನ್ನ ನಿಲ್ಲಿಸಿ ಸುಮಾರು ದಿನಗಳಾಗತೊಡಗಿತು. ಹೊರಗೆ ಸಿಕ್ಕರೂ ಮಾತನಾಡುವ ಸುಳಿವಿಲ್ಲ...! ಇತ್ತ ನಮ್ಮ ಸಂಜಯ್ ಗೆ ಅಲ್ಲಿ ಕೆಲಸದಲ್ಲಿ ಆಸಕ್ತಿ ಇಲ್ಲ. ಇತ್ತ ಮನೆಗೆ ಬಂದು ಕುಳಿತರೂ ಅವನ ರೇಡಿಯೋ ಅವನನ್ನೇ ಅಣಕಿಸುವಂತೆ "ಗೀತಾ, ಸಂಗೀತಾ... ಏಕೆ ಹೀಗೆ ದೂರವಾದೆ, ಎಲ್ಲಿ ಹೋದೆ...?" ಅಂತ ಹಾಡತೊಡಗಿದರೆ ಅವನಿಗೆ ಆ ರೇಡಿಯೋ ಅನ್ನೇ ಎತ್ತಿ ಹೊರಗೆಸೆಯುವಷ್ಟು ಕೋಪ..! ಮತ್ತೇನು ಮಾಡುವುದು, ತನ್ನ ಕರ್ಮ ಎಂದು ತಾನೇ ತೆಪ್ಪಗೆ ಕುಳಿತುಬಿಡುತ್ತಿದ್ದ...

ಅಂತೂ ಒಂದು ದಿನ ಹೇಗೊ ನಮ್ಮ ಸಂಜಯ್ ಗೀತಾಳನ್ನು ಒಪ್ಪಿಸಿ, ನಾವು ಇಲ್ಲಿಂದ ಬೇರೆ ಊರಿಗೆ ಹೋಗಿಬಿಡೋಣ, ಇಲ್ಲಾ ಅಂದರೆ ನಾನು ನಿನ್ನ ಬಿಟ್ಟು ಇರಲಾರೆ ಅಂತ ಕಾಡಿ-ಬೇಡಿ ಕೋರಿದನು. ಇಬ್ಬರು ರೆಡಿಯಾಗಿ ರೈಲ್ವೆ ಸ್ಟೇಷನ್ ಗೆ ಬಂದು ಇನ್ನೇನು ರೈಲು ಹತ್ತಬೇಕು ಅಷ್ಟರಲ್ಲಿ ಮತ್ತೆ ಗೀತಾಳ ಅಪ್ಪ ಅಲ್ಲೂ ಪ್ರತ್ಯಕ್ಷವಾಗಿ ಬಿಡುವುದೇ...!?!

ಸಂಜಯ್ ಗೆ ಈಗ ಹುಚ್ಚು ಹಿಡಿಯುವುದೊಂದೇ ಬಾಕಿ...!

ಇನ್ನೇನು ಅವನು ಅವರ ಕಾಲು ಹಿಡಿದು "ಸರ್, ತಪ್ಪಾಯಿತು... ಕ್ಷಮಿಸಿ ಬಿಡಿ, ಈ ಜನ್ಮದಲ್ಲಿ ಮತ್ತೆ ಈ ಕೆಲಸ ಮಾಡುವುದಿಲ್ಲಾ..." ಅಂತ ಹೇಳುವ ಮೊದಲೇ ಅವಳ ಅಪ್ಪ...:

"ನೋಡಪ್ಪಾ, ನೀನು ಎಲ್ಲಾ ಬಿಟ್ಟು ಈ ರೀತಿ ಓಡಿಹೋದರೆ ಮುಂದೆ ಆರಾಮಾಗಿರಬಹುದು ಅನ್ಕೊಂಡಿದ್ದಿಯೇನು? ಅಲ್ಲಯ್ಯ, ಲವ್ ಮಾಡೋಕೆ ಧೈರ್ಯ ಇರುತ್ತೆ, ಅದರೆ ಎಲ್ಲರನ್ನು ಓಪ್ಪಿಸಿ ಮದುವೆಯಾಗೋಕೆ ಎನ್ ಭಯ ನಾ...? ನೀವ್ ಹೋಗೋದಲ್ದೆ ನಿಮ್ಮ ಮನೆಯವರಿಗೂ ತಲೆ ನೋವು ತರ್ಸ್ತಿರಲ್ಲಾ ಕಣಯ್ಯಾ...!" ಅಂತ ಹೇಳಿದಾಗ ನಮ್ಮ ಸಂಜಯ್ ತನ್ನ ಮೈ ಚಿವುಟಿಕೊಂಡು ತಾನು ಕನಸು ಕಾಣುತಿಲ್ಲಾ ತಾನೇ ಅಂತ ತನ್ನನ್ನು "ಚೆಕ್" ಮಾಡಿಕೊಂಡ!! ಅವನಿಗೆ ಈ ವಿಷಯ ಇಷ್ಟು ಸುಲಭವಾಗಿ "ಸಾಲ್ವ್" ಆಗುತ್ತೆ ಅಂತಾ ಕನಸಿನಲ್ಲಿ ಅಂದುಕೊಂಡಿರಲಿಲ್ಲವೇನೋ! "ರೋಗಿ ಬಯಸಿದ್ದು ಹಾಲು ಅನ್ನ, ಡಾಕ್ಟರ್ ಹೇಳಿದ್ದು ಹಾಲು ಅನ್ನ..." ಅಂತೆ ತನ್ನ "ಡೊಡ್ಡ ಸಮಸ್ಯೆ" ಸಾಲ್ವ್ ಅಯ್ತು ಎಂಬ ಸಂಭ್ರಮದಲ್ಲಿ ಮನೆಗೆ ಬಂದು ಗೀತಳ ತಂದೆಯ ಜೊತೆಗೂಡಿ ತನ್ನ ತಂದೆ-ತಾಯಿಯ ಹತ್ತಿರ ಮದುವೆಯ ವಿಷಯದ ಮಾತನಾಡಲು ಹೋದನು. ಸಂಜಯ್ ಯ ತಂದೆ-ತಾಯಿ ಇವನ ಪ್ರೇಮ ಕಥಾ ಮತ್ತು "ಎಸ್ಕೇಪ್" ಕಥಾ ತಿಳಿದು ಸಲ್ಪ "ಶಾಕ್" ಹೊಡೆದರೂ ಮುಂದೆ ಇನ್ನೇನಾದರೂ "ಡೊಡ್ಡ ಕೆಲಸ" ಮಾಡಿಬಿಟ್ಟರೆ ನಮಗೇನು ಗತಿ ಅಂತ ಹೆದರಿ ತನ್ನ ಮಗ ಸುಖವಾಗಿದ್ದರೆ ಸಾಕು ಎಂಬ ಅಸೆಯೊಂದಿಗೆ ಮದುವೆಗೆ ಓಪ್ಪಿದರು. ಅಂತೂ ಆಗಸ್ಟ್ ೧೫ ರಂದು ಸಂಜಯ್ ತನ್ನ "ಬ್ಯಾಚಲರ್" ಡಿಗ್ರಿ ಕಳೆದುಕೊಂಡು "ಮ್ಯಾರೇಜ್" ಎಂಬ "ಮಾಸ್ಟರ್" ಡಿಗ್ರಿ ಪಡೆದ ( ಸಂಸಾರ ಬಂಧನದ ಜೈಲಿಗೆ ಹೋದದ್ದು ಅವನಿಗೆ ಮರೆತುಹೋಯಿತು ಅನಿಸುತ್ತೆ..!).

ಅದರೆ ಅವನ ಮದುವೆಯ ದಿನ ವಾಲಗದವರು ಒಂದು ಹಾಡು ನುಡಿಸಿದ್ದು, ಆ ಹಾಡನ್ನು ಕೇಳಿದ ಸಂಜಯ್ ಗೀತಾಳ ಜೋಡಿಗೆ ಕಾಕತಳೀಯ ಅನಿಸಲಿಲ್ಲವೇನೋ...!! ಎಕೆಂದರೆ ಆ ಹಾಡು:

"ಜೊತೆಯಲಿ, ಜೊತೆ-ಜೊತೆಯಲಿ ಇರುವೆನು ಹೀಗೆ ಎಂದೂ..."

ಆಗಿತ್ತು!!!!
ವಿನಯ್ ...
೧೯೩೪ ರ ಟಾಕಿ ಚಿತ್ರ "ಸತಿ ಸುಲೋಚನ" ಚಿತ್ರದಿಂದ ಪ್ರಾರಂಭವಾದ ನಮ್ಮ ಕನ್ನಡ ಚಿತ್ರರಂಗದ ಪಯಣ ಹಲವು ಏಳು- ಬೀಳುಗಳ ನಡುವೆ ೭೫ ವರ್ಷಗಳ ಮೈಲಿಗಲ್ಲು ದಾಟಿಬಿಟ್ಟಿದೆ. ಅಂದು ಸಿನೆಮಾ ತಂದ ಕುತೂಹಲ, ಇಂದು ಅದ್ಭುತ ತಂತ್ರಜ್ಞಾನದ ಜೊತೆಯೊಂದಿಗೆ ಪ್ರೇಕ್ಷಕರ ಮನ ತಣಿಸುತಿದೆ. ಅದರೆ ಇತ್ತೀಚಿಗಿನ ದಿನಗಳಲ್ಲಿ ನಮಗೆ ಕಾಣುತಿರುವ ದೃಶ್ಯ ನಿಜಕ್ಕೂ ನಮ್ಮಲ್ಲೇ ಒಂದು ಪ್ರಶ್ನೆ ಮೂಡಿಸದೇ ಇರದು, ಅದುವೇ... "ನಮ್ಮ ಕನ್ನಡ ಚಿತ್ರರಂಗ ಎತ್ತ ಸಾಗುತಿದೆ...?"

೧೯೩೪ ರಿಂದ ೫೦ ರ ದಶಕದಲ್ಲಿ ಹಲವು ವಾಕ್ ಚಿತ್ರಗಳು ನಿರ್ಮಾಣಗೊಂಡು ಪ್ರದರ್ಶಿಸಲ್ಪಟ್ಟರೂ, ಚಿತ್ರರಂಗದ ನಿಜವಾದ ಸುವರ್ಣ ಪರ್ವ ಪ್ರಾರಂಭಗೊಂಡಿದ್ದೇ ೧೯೫೦ ರಲ್ಲಿ. ಗುಬ್ಬಿ ವೀರಣ್ಣನವರ ಕಂಪನಿ ಸೇರಿದಂತೆ ಕೆಲವು ಕಂಪನಿಗಳಲ್ಲಿ ತಮ್ಮ ನಾಟಕಗಳಿಂದಲೇ ಹೆಸರು ಪಡೆದಿದ್ದ "ಮುತ್ತುರಾಜ್", ಎಚ್,ಎಲ್.ಎನ್ ಸಿಂಹ ರವರ "ಬೇಡರ ಕಣ್ಣಪ್ಪ" ಚಿತ್ರದ ಮುಖಾಂತರ "ರಾಜ್ ಕುಮಾರ್" ಆಗಿ ಚಿತ್ರರಂಗದಲ್ಲಿ ಕಾಲಿಟ್ಟ ವರ್ಷ ವದು. ಕನ್ನಡದ "ನಟಸಾರ್ವಭೌಮ" ನ ಚಿತ್ರರಸಿಕರ ಹೃದಯ ಸಿಂಹಾಸನರೋಹಣದ ಶುಭ ಕಾಲ.

ನರಸಿಂಹರಾಜು ಮತ್ತು ಜಿ.ವಿ ಐಯ್ಯರ್ ರವರು ಪಾದಾರ್ಪಣೆ ಮಾಡಿದ್ದ ಈ ಸಿನೆಮಾದಲ್ಲಿ ಅಂದು "ಉದ್ದ ಮೂಗಿನ" (ಇದನ್ನು ಎಚ್,ಎಲ್.ಎನ್ ಸಿಂಹ ರವರೇ ರಾಜ್ ರವರನ್ನು ಮೊದಲು ನೋಡಿದಾಗ ಹೇಳಿದ್ದರಂತೆ...!, "ಉಬ್ಬು ಹಲ್ಲು" ಎಂದು ನರಸಿಂಹರಾಜು ಅವರಿಗೆ...!) ಯುವಕ ತನ್ನ ಅಭಿನಯದಿಂದಲೇ ಮುಂದೆ ಎಲ್ಲರ "ಮುತ್ತಿನ ರಾಜ" ನಾಗುವನೆಂಬ ಕನಸು ಸ್ವತ: ಸಿಂಹರವರೇ ಕಂಡಿರಲಿಲ್ಲವೇನೋ...! ಈ ಚಿತ್ರ ಅಂದು ಯಶಸ್ವಿ ಪ್ರದರ್ಶನ ಕಾಣುವುದೊಂದಿಗೆ ನವ "ತಾರೆ" ಯ ಜನನವಾಗಿತ್ತು.

ಮುಂದೆ ಹಲವು ಚಿತ್ರಗಳು ಬಂದಿದ್ದರೂ ನಿರ್ಮಾಣದ ಪ್ರಮಾಣ ಅಷ್ಟು ಏರುಗತಿಯಲ್ಲೂ ಸಹ ಇರಲಿಲ್ಲ... ಕಾರಣ: ನಮ್ಮ ಚಿತ್ರಗಳಿಗೆ ಬಂಡವಾಳ ಹೂಡಿಕೆ, ತಂತ್ರಜ್ಞಾರ ಸಹಾಯ, ನಿರ್ಮಾಣ ಸಲಕರಣೆ ನಮ್ಮ ನಾಡಿನಲ್ಲಿ ಹೆಚ್ಚಾಗಿ ದೊರೆಯದೇ ದೂರದ ಮದರಾಸಿನಲ್ಲಿ (ಈಗಿನ ಚೆನ್ನೈ...) ನಲ್ಲಿ ಚಿತ್ರ ನಿರ್ಮಾಣ ಮಾಡುವಂತಾಯಿತು. ಇದರ ಕಾರಣದಿಂದಲೇ ನಮ್ಮ ಹಲವು ನಟರು ಮತ್ತು ನಿರ್ದೇಶಕರು, ಚಿತ್ರ ಉದ್ಯಮದವರು ಮದರಾಸನ್ನೇ ತಮ್ಮ ವಾಸಸ್ಥಾನವಾಗಿ ಮಾಡಿಕೊಂಡಿದ್ದರು. ಎಲ್ಲಾ "ಮದರಾಸ್" ಅವಲಂಬನೆ ಯಾಗುತ್ತಿದ್ದ ಹೊತ್ತಿನಲ್ಲೇ ಐಯ್ಯರ್, ರಾಜ್ ಮತ್ತು ನರಸಿಂಹರಾಜು ಮುಂತಾದವರು ಇದನ್ನ ಮನಗೊಂಡು ತಮ್ಮ ಸ್ನೇಹಿತರ ಜೊತೆಗೂಡಿ "ರಣಧೀರ ಕಂಠೀರವ" ಚಿತ್ರ ಮಾಡಿ ಅದರಲ್ಲಿ ಯಶಸ್ಸು ಪಡೆದಾಗಲೇ ಕನ್ನಡ ಚಿತ್ರ "ಮದರಾಸ್" ನ ಬಂಧನದಿಂದ ಕಳುಚಿ ಬಂದು ಕಾರುನಾಡಿನಲ್ಲಿ ಸ್ಥಾಪಿತವಾದದ್ದು....

ನಂತರ ಹಲವು ದಶಕಗಳ ಕಾಲ ರಾಜ್ ಕುಮಾರ್ ಕನ್ನದ ಚಿತ್ರರಂಗವನ್ನು ಆಳಿದರೂ, ಇವರ ಜೊತೆ ಉದಯ್ ಕುಮಾರ್, ಕಲ್ಯಾಣ್ ಕುಮಾರ್ ಪಂಡರಿ ಬಾಯಿ, ಲೀಲಾವತಿ, ಸರೋಜದೇವಿ ಹಾಗೂ ಇತರ ನಟ/ನಟಿಯರು ಸಹ ತಮ್ಮ ಚಾಪನ್ನು ಕನ್ನಡ ಚಿತ್ರಜಗತ್ತಿನ ಮೇಲೆ ಮೂಡಿಸಿದರು. ಖಳ ನಟನೆಯಿಂದಲೇ ಪ್ರಸಿದ್ದರಾದ ವಜ್ರಮುನಿ, ತೂಗುದೀಪ ಶ್ರೀನಿವಾಸ್ ಮತ್ತು ದಿನೇಶ್ ರವರು ಸಹ ಇದೇ ಸಮಯದಲ್ಲೇ ಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದ್ದರು. ಕನ್ನಡ ಚಿತ್ರ ರಸಿಕರಿಗೂ ಸಹ ಇದರಿಂದ ಹಲವು ಸದಭಿರುಚಿಯ ಚಿತ್ರಗಳು ನೋಡಲು ದೊರೆತವು. ಇವರೆಲ್ಲರ ಜೊತೆ ಕನ್ನದ ಸಿನೆಮದಲ್ಲಿ ತೆರೆಯ ಹಿಂದಿನ ಜನರ ಕೊಡುಗೆ ಸಹ ಬಹಳವಿತ್ತು. ಕು.ರಾ.ಸೀ ಇವರೆಲರಲ್ಲಿ ಮೊದಲಿಗರು. ಅವರು ಉತ್ತಮ ನಿರ್ದೇಶಕರು ಅಲ್ಲದೇ ಉತ್ತಮ ಗೀತೆ ರಚನಕಾರರು, ಚಿತ್ರಕಥೆ ಮತ್ತು ಅದಕ್ಕೆ ಸಂಬಂಧಿಸಿದ್ದ ಹಲವು ಕೆಲಸದಲ್ಲಿ ಎತ್ತಿದ ಕೈ. ಇವರು ಚಿತ್ರಜಗತ್ತಿಗೆ ಹಲವು ಖ್ಯಾತನಮರ ಅಗಮನಕ್ಕೂ ಸಹ ಕಾರಣರಾಗಿದ್ದರು. ಕನ್ನಡ ಚಿತ್ರಗಳಲ್ಲದೇ ದೂರದ ಮಲಯ ಚಿತ್ರ ನಿರ್ದೇಶಿಸಿ ಅಂತರ್ ರಾಷ್ಟ್ರೀಯ ಪ್ರಶಸ್ತಿ ಸಹ ಪಡೆದಿದ್ದರು.

ರಾಜ್ ರವರ ಸದಾಭಿರುಚಿ ಚಿತ್ರಗಳು ೭೦ ರ ದಶಕದ ವರೆಗೂ ಹೆಚ್ಚಾಗಿ ಬರುತ್ತಿರಲು, ಅವರು ಜನರ ಮನದಲ್ಲಿ ಸ್ಥಾಪಿತವಾಗುತ್ತಾ ಹೋದರು. ಈ ನಡುವೆ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಓಬ್ಬರಾದ ಪುಟ್ಟಣ್ಣ ಕಣಗಾಲ್ ಸಂಪತ್ ಕುಮಾರ್ ಮತ್ತು ಅಮರನಾಥ್ ರವರನ್ನು "ವಿಷ್ಣುವರ್ಧನ್" ಮತ್ತು "ಅಂಬರೀಷ್" ಆಗಿ "ನಾಗರಹಾವು" ಚಿತ್ರದಲ್ಲಿ ೧೯೭೨ ರಲ್ಲಿ ಪರಿಚಯಿಸುವುದರೊಂದಿಗೆ ರಾಜ್ ಗೆ ಪ್ರತಿಸ್ಪರ್ಧಿಗಳು ಹುಟ್ಟಿದರು! "ನಾಗರಹಾವು" ವಿನ "ರಾಮಚಾರಿ" ಯ ಪಾತ್ರಕ್ಕೆ ಜನರು ಅಷ್ಟು ಮರುಳಾಗಿದ್ದರೆಂದರೆ ಆ ಚಿತ್ರ ತೆರೆಕಂಡ ಚಿತ್ರಮಂದಿರಗಳಲ್ಲಿ ದಾಖಲೆ ಪ್ರದರ್ಶನವನ್ನೇ ಕಂಡವು. ಅಂದು ಆ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದ ಅಂಬರೀಷ್ ರವರು ಮುಂದೆ "ರೆಬೆಲ್ ಸ್ಟಾರ್" ಆಗಿ ಪ್ರಸಿದ್ಧಿಯಾಗಿದ್ದು ಇತಿಹಾಸ. ಪುಟ್ಟಣ್ಣ ಕಣಗಾಲ್ ರವರು ಇತರ ಪ್ರಸಿದ್ಧ ನಟರಾದ ರಾಮಕೃಷ್ಣ, ಶ್ರೀಧರ್, ಪದ್ಮ ವಾಸಂತಿ ಮುಂತಾದವರನ್ನು ಸಹ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದರು...

೮೦ ರ ದಶಕದ ಮತ್ತೊಂದು ನೆನಪಿಡಬೇಕಾದ ಹೆಸರು ಶಂಕರ್ ನಾಗ್, ಮೂಲತ: ಕನ್ನಡದ ಕರಾವಳಿ ಕ್ಷೇತ್ರದಿಂದ ಬಂದ ಶಂಕರ್ ತಮ್ಮ ವಿದ್ಯಾಭ್ಯಾಸ/ಕಾರ್ಯಕ್ಷೇತ್ರ ಮುಂಬೈ ಮಾಡಿಕೊಂಡಿದ್ದರೂ ನಂತರ ತಮ್ಮ ಅಣ್ಣ ಅನಂತ್ ನಾಗ್ ರವರೊಟ್ಟಿಗೆ ಕನ್ನಡದ ಚಿತ್ರರಂಗದಲ್ಲಿ ನೆನಪಿನಲ್ಲಿಯುಳಿಯುವ ಕಾರ್ಯ ಮಾಡಿದರು. ಅನಂತ್ ನಾಗ್ ಶಂಕರ್ ರವರಿಗಿಂತ ಮೊದಲೇ ಬಹಳ ಪ್ರಸಿದ್ಧಿಯನ್ನು ಪಡೆದಿದ್ದರು. ಶಂಕರ್ ಮುಂಬೈಯಲ್ಲಿ ನಾಟಕವಾಡುತ್ತಿದ್ದಾಗಲೇ ಗಿರೀಶ್ ಕಾರ್ನಾಡರ ಅಹ್ವಾನದಿಂದ "ಒಂದಾನೊಂದು ಕಾಲದಲ್ಲಿ" ಚಿತ್ರದಲ್ಲಿ ನಟಿಸಿ ಮೊದಲ ಯತ್ನದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದು ಸಂಚಲನ ಮೂಡಿಸಿದ್ದರು. ಚಿತ್ರದ ತಾಂತ್ರಿಕತೆಯ ಕಡೆಗೆ ಹೆಚ್ಚು ಗಮನ ಹರಿಸಿದ್ದ ಶಂಕರ್ ಅದನ್ನು ಇನ್ನೂ ಹೆಚ್ಚು ಉತ್ತಮಪಡಿಸಲು "ಸಂಕೇತ್ ಸ್ಟುಡಿಯೋ" ಅನ್ನು ಕರ್ನಾಟಕದಲ್ಲಿ ಪ್ರಾರಂಭಿಸಿದ್ದರು. ಆ ಕಾಲದಲ್ಲಿ ಈ ಸ್ಟುಡಿಯೋ ಬಹಳ ಹೆಸರು ಪಡೆದಿತ್ತು ಸಹ.. ಕೆಲವು ಉತ್ತಮ ಚಿತ್ರಗಳನ್ನು ಕನ್ನಡ ಜನತೆಗೆ ನೀಡಿದ್ದ ಶಂಕರ್ ತಮ್ಮ ಪೂರ್ಣ ಪ್ರಭೆ ಬೀರುವ ಮೊದಲೇ ೧೯೯೦ ರಲ್ಲಿ ನಮ್ಮನೆಲ್ಲ ಬಿಟ್ಟು ಕಲಾದೇವಿಯಲ್ಲಿ ಲೀನವಾಗಿಹೋದರು.

೭೦ ಮತ್ತು ೮೦ ರ ಸಾಲಿನಲ್ಲಿ ಬಂದ ಹಲವು ಚಿತ್ರಗಳು ಗೆಲ್ಲಲು ಸಾಧ್ಯವಾಗಿಸಿದ್ದು ಆ ಚಿತ್ರಗಳ ಮಧುರ ಸಂಗೀತ... ನಾವು ಇಲ್ಲಿ ನೆನೆಯಬೇಕಾಗಿದ್ದು ಚಿತ್ರಬ್ರಹ್ಮ "ಚಿ. ಉದಯಶಂಕರ" ರವರನ್ನು. ಡಾ|| ರಾಜ್ ಚಿತ್ರಗಳ ಬೆನ್ನೆಲುಬು ಆಗಿದ್ದ ಅವರು ಸಂಭಾಷಣೆ ಮಾತ್ರವಲ್ಲದೇ ಹಾಡುಗಳನ್ನು ಸಹ ಬರೆಯುತ್ತಿದ್ದರು. ಅವರ ಹಾಡು ಮತ್ತು ರಾಜನ್-ನಾಗೇಂದ್ರ, ಉಪೇಂದ್ರ ಕುಮಾರ್, ಎಂ. ರಂಗರಾವ್ ಮುಂತಾದ ಹಲವು ಸಂಗೀತಗಾರರ ಬಲದಿಂದ ಕನ್ನಡ ಚಿತ್ರಜಗತ್ತು ಎಂದೂ ಮರೆಯದ ಹಾಡುಗಳನ್ನ ತನ್ನ ಭಂಡಾರದಲ್ಲಿ ಪಡೆದಿದೆ

ಶಂಕರ್ ಬಂದ ಸಮಯದಲೇ ದೇವರಾಜ್, ಜಗ್ಗೇಶ್, ಅವಿನಾಶ್ ರಂತಹ ನಟರು ತಮ್ಮ ಪಾತ್ರಗಳಿಂದ ಗಮನಸೆಳೆದಿದ್ದರು. ಇದರಲ್ಲೂ ರವಿ ಮತ್ತು ಹಂಸಲೇಖರ ಜೋಡಿ "ಪ್ರೇಮ ಲೋಕ" ಮತ್ತು "ರಣಧೀರ" ಮುಂತಾದ ಚಿತ್ರಗಳಿಂದ ಯುವ ಜನರ ಮನಸ್ಸಿಗೆ ಕಿಚ್ಚು ಹಿಡಿಸಿದ್ದರು. ರವಿಯವರ "ಕನಸು" ಮತ್ತು ಹಂಸ್ ರವರ "ಗಾನ" ಕನ್ನಡ ಚಿತ್ರರಂಗದಲ್ಲಿ "ಅದ್ಭುತ ಮಾಯಲೋಕ" ವನ್ನೇ ಸೃಷ್ಠಿ ಮಾಡಿತ್ತು. ಇವರಿಬ್ಬರಲ್ಲದೇ ನಿರ್ದೇಶಕರಾಗಿ ಕಾಲಿಟ್ಟ ರಾಜೇಂದ್ರಸಿಂಗ್ ಬಾಬು, ರಾಜೇಂದ್ರ ಬಾಬು, ನಾಗಭರಣ, ಗಿರೀಶ್ ಕಾಸರವಳ್ಳಿ, ದಿನೇಶ್ ಬಾಬು ಸಹ ಪ್ರಮುಖರು. ಗಿರೀಶ್ ಕಾಸರವಳ್ಳಿ ತಮ್ಮ ವಿಭಿನ್ನ ರೀತಿಯ ಚಿತ್ರಗಳಿಂದ ಪ್ರಸಿದ್ಧರಾದರಲ್ಲದೇ ಹಲವಾರು ರಾಷ್ಟ್ರಪ್ರಶಸ್ತಿಗಳನ್ನು ಸಹ ಪಡೆದರು. ಹಲವು ನವ ನಟರ/ನಟಿಯರ ಅಗಮನಕ್ಕೆ ದಾರಿ ಕೊಟ್ಟ ಈ ದಶಕ "ಕನಸಿನ ರಾಣಿ" ಮಾಲಾಶ್ರೀ ರವರನ್ನು ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರನ್ನು "ನಂಜುಂಡಿ ಕಲ್ಯಾಣ" ಚಿತ್ರದ ಮೂಲಕ ಚಿತ್ರಲೋಕಕ್ಕೆ ಕಾಲಿರಿಸುವಂತೆ ಮಾಡಿದವು.

೮೦ ರ ದಶಕದಲ್ಲಿ ಇನ್ನೊಂದು ಪ್ರಸಿದ್ಧಿಯಾದ ಹೆಸರು ಶಿವರಾಜ್ ಕುಮಾರ್. "ಅನಂದ್" ಚಿತ್ರದಲ್ಲಿ ಸುಧಾ ರಾಣಿ ಯವರೊಂದಿಗೆ ಪದಾರ್ಪಣೆ ಮಾಡಿದ ಶಿವು, ಮುಂದೆ ಅವರ ೨ನೇ ಮತ್ತೆ ೨ನೇ ಚಿತ್ರ ’ರಥಸಪ್ತಮಿ’ ’ಮನ ಮೆಚ್ಚಿದ ಹುಡುಗಿ’ ಬಾಕ್ಸ್ ಆಫೀಸ್ ಗೆಲವು ಕಂಡಾಗ "ಹ್ಯಾಟ್ರಿಕ್ ಹೀರೋ" ಆಗಿಬಿಟ್ಟರು. ತಮ್ಮ ತಂದೆ ಡಾ|| ರಾಜ್ ಅವರ ನೆರಳಿನಲ್ಲಿ ನೆಡೆಯದೆ ತಮ್ಮದೇ ವಿಭಿನ್ನ ಅಭಿನಯ ಕೌಶಲ್ಯದಿಂದ ಅನೇಕ ಅಭಿಮಾನಿಗಳನ್ನು ಇಂದು ಪಡೆದಿದ್ದಾರೆ. ಸುನೀಲ್ ಅವರಂತಹ ನಟರು ಸಹ ಇದೇ ಸಮಯದಲ್ಲಿ ಚಿತ್ರರಂಗಕ್ಕೆ ಅಗಮಿಸಿದ್ದರು. ಭರವಸೆ ಮೂಡಿಸಿದ ನಟರು ಕೂಡ ಅಗಿದ್ದ ಅವರು ನಮ್ಮ ಕನ್ನಡದ ಪ್ರೇಕ್ಷಕರಿಗೆ ತಮ್ಮ ಅಭಿನಯದಿಂದ ಇನ್ನಷ್ಟು ಮೋಡಿ ಮಾಡುವ ಮೊದಲೇ ಶಂಕರ್ ರವರಂತೆ ರಸ್ತೆ ಅಪಘಾತದಲ್ಲಿ ಮೃತಪಟ್ಟು ದೈವಧೀನರಾದರು.

ಈಗಿನ ಪ್ರಸಿದ್ಧ ನಟರು/ನಿರ್ದೇಶಕರು ಆದ ಉಪೇಂದ್ರ ಮತ್ತು ರಮೇಶ್ ಸಹ ಇದೇ ಕಾಲಕ್ಕೆ ಸೇರಿದವರೇ. ತಮ್ಮ ಮ್ಯಾನರಿಸಮ್ ಇಂದ "ಎ" ಮತ್ತು "ಉಪೇಂದ್ರ" ಚಿತ್ರಗಳನ್ನು ಗೆಲ್ಲಿಸಿಕೊಟ್ಟ ಉಪೇಂದ್ರರವರು ಅಭಿಮಾನಿಗಳ ಪಾಲಿಗೆ "ರಿಯಲ್ ಸ್ಟಾರ್" ರಾದರು. ಅವರ "ಓ೦" ಮತ್ತು "ಶ್.." ಸಹ ಭರವಸೆ ಮೂಡಿಸಿದ ಚಿತ್ರಗಳು. ನಟಿಯರಲ್ಲಿ ಭವ್ಯ, ಮಹಲಕ್ಷ್ಮಿ, ತಾರಾ, ವನಿತಾ ವಾಸು, ಪ್ರೇಮಾ ಸಹ ತಮ್ಮ ಅಭಿನಯ ಸಾಮರ್ಥ್ಯ ತೋರಿಸಿದರು. ಇವರೆಲ್ಲರು ನಾಯಕ ನಟರಷ್ಟು ದೀರ್ಘ ಕಾಲ ಚಿತ್ರರಂಗದಲ್ಲಿ ಇರಲು ಸಾಧ್ಯವಾಗಲಿಲ್ಲ.

"ಅರಗಿಣಿ" ಮತ್ತು "ಓ ಮಲ್ಲಿಗೆ" ಚಿತ್ರಗಳಿಂದ ಪ್ರಸಿದ್ಧರಾದ ರಮೇಶ್ ತಮ್ಮ ಅಭಿನಯದಿಂದಲೇ ಪ್ರಸಿದ್ಧರಾಗಿದ್ದರು. "ತ್ಯಾಗರಾಜ" ಬಿರುದೇ ಅದಕ್ಕೆ ಸಾಕ್ಷಿ... ಇವರು ಮುಂದೆ "ಆಕ್ಸಿಡೆಂಟ್" ಮತ್ತು ಹಲವು ಚಿತ್ರಗಳನ್ನು ಸಹ ನಿರ್ದೇಶಿಸಿದರು.

ಡಾ|| ರಾಜ್ ಕುಟುಂಬದಲ್ಲಿ ಮೂರನೆಯವರಾಗಿ ಚಿತ್ರೋದ್ಯಮಕ್ಕೆ ಕಾಲಿಟ್ಟವರೇ ಅಪ್ಪು -- ಪುನೀತ್ ರಾಜ್ ಕುಮಾರ್. ತಮ್ಮ "ಅಪ್ಪು" ಚಿತ್ರದಿಂದ ಎಲ್ಲರ ಹೃದಯ ಗೆದ್ದ ಅಪ್ಪು ರವರು ಈಗಲೂ ಬಹುಬೇಡಿಕೆಯ ನಟ.

ತೂಗುದೀಪ ಶ್ರೀನಿವಾಸ್ ರವರ ಪುತ್ರರಾದ ದರ್ಶನ್ ಕಿರುತರೆ ಮತ್ತು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳನ್ನು ನಿರ್ವಹಿಸಿ "ಮೆಜೆಸ್ಟಿಕ್" ಚಿತ್ರದಿಂದ ಜನಪ್ರಿಯರಾದರು. "ಕರಿಯ" ಚಿತ್ರ ಅವರನ್ನು ಅಭಿಮಾನಿಗಳಿಗೆ "ಚಾಲೆಂಜಿಂಗ್ ಸ್ಟಾರ್" ಮಾಡಿಸಿತು. ಇಂದೂ ಸಹ ಅವರ ಅಕ್ಷನ್ ಚಿತ್ರಗಳೆಂದರೆ ಅಭಿಮಾನಿಗಳಿಗೆ ಪಂಚಪ್ರಾಣ. ಹಲವು ನಟರ/ನಟಿಯರ ಮಕ್ಕಳು ಚಿತ್ರರಂಗಕ್ಕೆ ಬಂದರೂ ದರ್ಶನ್ ಅವರಷ್ಟು ಜನಪ್ರಿಯ ಅವರಾಗಲಿಲ್ಲ.

೯೫ ರ ನಂತರದ ಸಮಯದಲ್ಲಿ ನಮ್ಮ ಚಿತ್ರರಂಗ ಕೆಳಮುಖದ ಹಾದಿ ಹಿಡಿ ಹಿಡಿಯಿತು. ಚಿ. ಉದಯಶಂಕರರ ಅಕಾಲಿಕ ಸಾವು, ಹಲವು ಪ್ರಸಿದ್ಧರನ್ನ ಕಳೆದುಕೊಂಡ ನಮ್ಮ ಕನ್ನಡ ಚಿತ್ರರಂಗ ಬಡವಾಗತೊಡಗಿತು. "ಸಂತೆ ಗೆ ಮೂರು ಮಾರು" ನೇಯುವ ಕೆಲಸವು ಸಹ ಇಲ್ಲಿಂದಲೇ ಪ್ರಾರಂಭವಾಯಿತು. ಹಲವು ಟೇಕ್ ಗಳ ನಿರಂತರ ಪ್ರಯತ್ನದಿಂದ ಅಂದು ಒಂದು ಹಾಡು ಸಿದ್ದವಾಗುತ್ತಿದ್ದ ಆ ಸಮಯ ಹೋಗಿ "ಬಿಟ್ ಬೈ ಬಿಟ್" ಕಾರ್ಯ ಪ್ರಾರಂಭವಾಯಿತು. ದಿನಕ್ಕೊಂದು ಸಂಗೀತ/ ಚಿತ್ರ ನಿರ್ದೇಶಕರು ಬರತೊಡಗಿದರು. "ಇತರ ಮೂಲಗಳ" ಹಣ ಹರಿದು ಬಂದು ಎಲ್ಲಾ ಜನರು "ನಿರ್ಮಾಪಕರು" ರಾಗತೊಡಗಿದರು. ಅವರ ಮಕ್ಕಳು ಮತ್ತು ಹತ್ತಿರದ ಸಂಬಂಧಿಗಳು ಚಿತ್ರದ ಪ್ರಮುಖ ಪಾತ್ರ ಮಾಡತೊಡಗಿದರು. ಕೆಲವರು ಕೇವಲ ಪ್ರಚಾರಕ್ಕೆ ಮಾತ್ರ ಚಿತ್ರ ಮುಹೂರ್ತ ಮಾಡಿಸಿ ಅಮೇಲೆ "ಸುದ್ಧಿ" ಇಲ್ಲದೇ ಹೋಗುತ್ತಿದ್ದರು. "ನಮ್ಮ ಚಿತ್ರ ವಿಭಿನ್ನ ಕಥೆ ಹೊಂದಿದೆ" ಅಂತ ಹೇಳಿದ ಹಲವು ಚಿತ್ರಗಳು ಟೇಟರಿಗೆ ಬಂದ ಒಂದು ವಾರದ ಒಳಗೆ "ಮಾಯವಾಗತೊಡಗಿತು". ೬೦ ರ ದಶಕದಿಂದ ೮೦ ರ ಕೊನೆವರೆಗೂ ಹಲವು ಕಾದಂಬರಿ ಅಧಾರಿತ ಚಿತ್ರಗಳು ಬಂದರೂ ನಂತರ "ಒಳ್ಳೆ ಕಥೆ" ಸಿಗಲಿಲ್ಲ ಎಂಬ ಕಾರಣಕ್ಕೆ ನಮ್ಮ ಚಿತ್ರ "ಪಂಡಿತರು" -- ಪಕ್ಕದ "ಮನೆಯ" "ಕದ್ದ ಸರಕು" ಗಳನ್ನು ಬಳಸತೊಡಗಿದರು... ಹೆಸರಿಗೆ ಕೆಲವು "ಹಿಟ್" ಆಯಿತಾದರೂ, ಬಹುತೇಕ ಚಿತ್ರಗಳು "ಮಣ್ಣು" ಮುಕ್ಕಿದ್ದೇ ಆಯಿತು ಅಷ್ಟೆ...!

ಪರಭಾಷ ನಟಿಯರ "ಆಮದು" ಕಾರ್ಯ "ನಮ್ಮ ನಾಡಿನಲ್ಲಿ ಪಾತ್ರಕ್ಕೆ ಸೂಟ್ ಆಗೋ ನಾಯಕಿ ಸಿಗ್ತಾ ಇಲ್ಲ" ಎಂಬ "ಪಿಳ್ಳೆ ನೆವ" ಇಂದ ಹೆಚ್ಚತೊಡಗಿತು. ಅವರಿಗೋ ನಮ್ಮ ಭಾಷೆ ಬರದು, ಯಾರೋ ಹೇಳಿದಂತೆ "ಉಲಿಯುವ" ಅವರು ನಮ್ಮ ಚಿತ್ರಗಳಿಗೆ ಎನು ತಾನೇ ಮಾಡಬಲ್ಲರು..? ಅಂತೂ ಈ "ಘನ ಕಾರ್ಯ" ದಿಂದ ನಮ್ಮ ನಾಡಿನ ನಟಿಯರು ಮೂಲೆಗುಂಪಾಗದೇ ಮತ್ತೇನು ಮಾಡಿಯಾರು!

ಕೇವಲ ಹಣದ "ವ್ಯಾಪಾರಕ್ಕೆ" ಬಂದಂತಿರುವ ಈ ಜನ ನಮ್ಮ ಚಿತ್ರ ರಂಗಕ್ಕೆ ಏನು ಕೊಡುವರೋ ಗೊತ್ತಿಲ್ಲ. ಅಂತು ಸರಕು "ಸುತ್ತಿ-ಸುತ್ತಿ" ಹಾಕುವ "ಚಾಳಿ" ಯಿಂದ ನಮ್ಮ ಕನ್ನಡ ಚಿತ್ರಕ್ಕೆ ಭಾರಿ ನಷ್ಟವಾಗುತ್ತಿರುವುದು ಮಾತ್ರ ಕಂಡಿತ. ಕೆಲವನ್ನು ಬಿಟ್ಟರೆ ( ಮುಂಗಾರು ಮಳೆ, ದುನಿಯಾ ಮತ್ತು ಇತ್ತೀಚಿಗಿನ "ಮನಸಾರೆ"...) ಇತರ ಚಿತ್ರಗಳು ತಾವು ಸೋಲುವುದಲ್ಲದೇ ತಮ್ಮ ಕೆಟ್ಟ ಕಥಾ ಸರಕಿನಿಂದ ಪ್ರೇಕ್ಷಕರು ಮತ್ತೆ ಚಿತ್ರಮಂದಿರದ ಹತ್ತಿರ ಸುಳಿಯದಂತೆ ಮಾಡುತ್ತಿವೆ.

ಹಾಗೇ ನಟರ ಸಂಭಾವನೆ, ನಿರ್ಮಾಪಕ-ಪ್ರದರ್ಶಕರ ನಡುವಿನ "ಒಳ ಕಿತ್ತಾಟ", ನಟರ ನಡುವಿನ "ವೈಮನಸ್ಸು" ನಮ್ಮ ಚಿತ್ರರಂಗದ ಬೇರುಗಳನ್ನು ಗೆದ್ದಲ ಹುಳುಗಳಂತೆ ಕೊರೆಯತೊಡಗಿವೆ. ಅದರಿಂದ ನಮ್ಮ ಭವ್ಯ ಇತಿಹಾಸದ ಕನ್ನಡ ಚಿತ್ರರಂಗದ ತಳಪಾಯ ಅಲುಗಾಡತೊಡಗಿದೆ. ನಮ್ಮ ನೆರೆರಾಜ್ಯದಲ್ಲಿ ಮಾಡುವ ಸದಾಭಿರುಚಿಯ ಚಿತ್ರಗಳು ಇಲ್ಲಿ ಕಮ್ಮಿಯಾಗುತ್ತಾ ಹೋಗುತ್ತಿವೆ. ಹೀಗೆ ಆದರೆ ಬಹುಶ್: ನಮ್ಮ ಮುಂದಿನ ಪೀಳಿಗೆಗೆ ಕೇವಲ ಹಳೆಯ ಚಿತ್ರಗಳನ್ನೇ ನೋಡಿಸಿ ನಾವೆಲ್ಲರು ಸಂತೋಷಪಡಬೇಕೇನೋ..?
ವಿನಯ್ ...
ಅಂತೂ " ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ..." ಅನ್ನುವ ನುಡಿಯಂತೆ ನಮ್ಮ ಬಿ.ಜೆ.ಪಿ ಸರ್ಕಾರದ "ಅಂತರಿಕ ಜಗಳ..." "ದಿಲ್ಲಿಗೆ ಹೋಗಿ ಗಣಿದೊರೆಗಳ ಜೊತೆ ರಾಜಿಯಾಗುವ ತನಕ..." ಎಂಬಂತಾಗಿದೆ...! ಸರಿ ಸುಮಾರು ಕೆಲವು ವಾರಗಳ ವರೆಗೆ ನೆಡೆದ "ಅಂತರಿಕ ಯುದ್ಧ" ಅಂತೂ ಅಡ್ವಾಣಿಯರ ಹುಟ್ಟುಹಬ್ಬದ ದಿನ ಸಮಾಪ್ತಿಗೊಂಡಿದ್ದು ( ನಮಗೆ ಕಾಣಿಸುವಂತೆ...!) ಪಾಪ ಅಡ್ವಾಣಿ ಯವರಿಗೆ "ಅಮೃತ" ಕುಡಿದಷ್ಟೇ ಸಂತೋಷವಾಗಿರಬಹುದು...! ಬಹಳ ದಿನ ನಮ್ಮ ರಾಜ್ಯದ ಮು.ಮ ಮತ್ತು ಬಿ.ಜೆ.ಪಿ ಯ ಅಧ್ಯಕ್ಷರು/ಹಿರಿಯ ನಾಯಕರು ತಮ್ಮ ತಲೆ ಕೆರೆದು-ಕೆರೆದು...(ಮುಂಗಾರು ಮಳೆಯ ಗಣೇಶ್ ಹೇಳಿದಂತೆ ಅದು ಹುಣ್ಣಾಗಿ ಮತ್ತೇನೋ ಅಗಲಿಲ್ಲ... ಅವರ ಪುಣ್ಯ...!) ಎಲ್ಲಿ ಕಮಲ ಗಣಿಯ ಆಳದಲ್ಲಿ ಹುದುಗಿಹೋಗುವುದೋ ಎಂಬ ಭಯ ತಾತ್ಕಲಿಕವಾಗಿ ಸಲ್ಪ ಕಮ್ಮಿಯಾಗಿದೆ ಎನಿಸಿ ಸರ್ವ ಬಿ.ಜೆ.ಪಿ "ಬಂಧು" ಗಳು ಮಾಧ್ಯಮದವರ ಮುಂದೆ ಕೇಕ್ ಸವಿಯುವದೊಂದಿಗೆ ( ಅದರಲ್ಲಿ ಮೊಟ್ಟೆ ಇತ್ತೋ, ಅಥವಾ ಪ್ಯೂರ್ ವೆಜಿಟೇರ್ಯನ್ ಕೇಕೊ ನನಗಂತೂ ಗೊತ್ತಿಲ್ಲ ಪ... ) ಮುಕ್ತಾಯಗೊಳಿಸಿದರು...!

ಪರಸ್ಪರ ಕೈ ಮೇಲೆತ್ತಿ ಹಿಡಿದು "ಹಮ್ ಸಾತ್ ಸಾತ್ ಹೇ.." (ಅಲ್ಲಿ ಕೇವಲ ೪-೫ ಜನ ಇದ್ದರಷ್ಟೇ...!) ಎಂದು ಮುಗುಳ್ನಕ್ಕರು.... ನಮ್ಮ ಮು.ಮ ಅವರ ಮುಖದ ಮೇಲಿನ ನಗು ನೋಡಿ ಬಿ.ಜೆ.ಪಿ ಯ ನಿಷ್ಟಾವಂತ ಜನರಿಗಿಂತ ನಮ್ಮ ಬಡಪಾಯಿ ಕರುನಾಡು ಜನರು ತುಂಬ ಸಂತಸಪಟ್ಟಿರುವರು ಎಂದು ನನ್ನ ಅನಿಸಿಕೆ...! ಏಕೆಂದರೆ ಕೆಲವು ದಿನಗಳಿಂದ ತೀರ್ಥಕ್ಷೇತ್ರಗಳಿಗೆ ತೆರಳಿ, ಎಲ್ಲಾ ದೇವರನ್ನು "ನನ್ನನ್ನು ಕಾಪಾಡಪ್ಪ" ಎಂದು ಬೇಡಿ, ಇತ್ತ ಮಾಧ್ಯಮದವರ ಮುಂದೆ ಕಣ್ಣಲ್ಲಿ ನೀರು ತರಿಸಿಕೊಂಡು ತಮ್ಮ ದುರ್ದಿನಗಳ ಬಗ್ಗೆ ನೆನೆದು ದುಖಿ:ಸುತ್ತಿದ್ದಾಗ ಅಂತೂ ೭ನೇ ತಾರೀಕಿನ ಭಾನುವಾರ ( ಅದರಲ್ಲೂ ಬಿ.ಜೆ.ಪಿ ಯ ಹಿರಿಯ ನಾಯಕನ ಜನ್ಮದಿನದಂದು...) ಅವರಿಗೆ "ಶುಭ ಭಾನುವಾರ" ವಾಗಿ ಪರಿಗಮಿಸಿದ್ದು ಎನೋ ನಮ್ಮ ಮು.ಮ ಅವರು ಇಂದಿನ ಜನ್ಮದಲ್ಲಿ ( ಸಾರಿ, ಹಿಂದಿನ ಜನ್ಮದಲ್ಲಿ...) ಮಾಡಿದ ಯಾವುದೋ ಸತ್ಕಾರ್ಯದ ಫಲವಿರಬಹುದು...! ಹಾಗೇ ನಮ್ಮ ಬಡಪಾಯಿ ಕನ್ನಡಿಗರು ತಮ್ಮ ಯಾವುದೋ ಪುಣ್ಯದ ಫಲದ ಮಹಿಮೆಯಿಂದಲೇನೋ ಮತ್ತೊಮ್ಮೆ ಮತಗಟ್ಟೆಯ ಮುಂದೆ ನಿಂತು ವೋಟ್ ಹಾಕುವ ದುರ್ದಶೆ ಕಳೆದುಕೊಂಡರು...! ರಾಜ್ಯ ಸರ್ಕಾರದ ಬೊಕ್ಕಸವಂತೂ "ಅಯ್ಯೋ ನಾ ಉಳಿದೆ ಮಹದೇವಾ..." ಅಂತ ತನ್ನ ಇಷ್ಟದೇವರಲ್ಲಿ ಮೊರೆಇಟ್ಟಿರಬಹುದು... ನಮ್ಮ ಚುನಾವಣಾ ಕಾರ್ಯಕರ್ತಂತೂ "ಉಸ್ಸಪ್ಪ... ನಾವು ಬದುಕಿದೆವೋ..!" ಅಂತ ನಿಟ್ಟುಸಿರು ಬಿಟ್ಟಿರಬಹುದು...! ಪುಡಾರಿಗಳಂತೂ " ಅಯ್ಯೋ, ಹೋಯ್ತಲ್ಲಯ್ಯ ತಿನ್ನುವ ಚಾನ್ಸ್.." ಅಂತ ಸಿಕ್ಕಪಟ್ಟೆ ಮನದಲ್ಲೇ ಕೊರಗಿರಬಹುದು...!!!

ಅಂತೂ ಬಹಳ "ತಂತ್ರ" - "ಪ್ರತಿತಂತ್ರ" ಗಳ ನಡುವೆ ಸೊರಗಿ ಸಣ್ಣಗಾಗಿರುವ ನಮ್ಮ ಮು.ಮ "ಈಗಿನಿಂದ ನಾವೆಲ್ಲರು ಅಣ್ಣ-ತಮ್ಮಂದಿರಂತೆ ಪಕ್ಷಕ್ಕಾಗಿ ದುಡಿಯುತ್ತೇವೆ" ಅಂತ ಸಾರಲು... ಏಕೋ ಮನದಲ್ಲಿ ಡವ ಡವ...! ಎಕೆಂದರೆ ಎಲ್ಲಿ "ಗಣಿ" ಸ್ಪೋಟ ಸಂಭವಿಸಿ "ಕಮಲ" ಅದರ "ಧೂಳಿ" ನಲ್ಲಿ ಎಲ್ಲಿ ನಲುಗಿಹೋಗಬಹುದೋ ಎಂಬ ಭಯ ನಮ್ಮ ಬಡಪಾಯಿ ಮತಗಾರನನ್ನ ಕಾಡದೆ ಇರುವುದಿಲ್ಲವೇನೋ??? ಎಕೆಂದರೆ ಆ "ಹಮ್ ಸಾತ್ ಸಾತ್ ಹೇ.." ಯ ದೃಶ್ಯವಳಿಯಲ್ಲಿ ಕೆಲವು "ಅತೃಪ್ತ ಮುಖಗಳು" ಕಾಣಿಸಿಕೊಂಡಿದಕ್ಕೆ ಸಾಕ್ಷಿ... ಎಲ್ಲಿ ಆ "ಅತೃಪ್ತ ಮುಖಗಳು" ಮತ್ತೊಂದು ದಿನ ತಮ್ಮ "ದುಂಡಿನೊಡಿಗೆ" ಮತ್ತೆ "ದಿಲ್ಲಿ ಚಲೋ" ಕಾರ್ಯಕ್ರಮ ಶುರುವಚ್ಚಿಕೊಳ್ಳುವರೋ ಆ ದೇವರೇ ಬಲ್ಲ...!

ಭಾರಿ "ಚಿದಂಬರ ರಹಸ್ಯ" ವಾಗಿ ಉಳಿದ "ಆತೃಪ್ತರ" ಓಲೈಸುವ ಕಾರ್ಯ ಏನ್ನೆಲ್ಲಾ ಸ್ವಾಹ: ಮಾಡಿದೆಯೋ ಅದು ಮುಂದಿನ ದಿನಗಳಲ್ಲೇ ಗೊತ್ತಾಗಬೇಕು... ( ಕೆಲವು ಬಂಡಾಯ ಶಾಸಕರಿಗೆ "ಮಂತ್ರಿಗಿರಿಯ" ಕನಸು ಇಷ್ಟರಲ್ಲೇ ಬೀಳಲೂ ಶುರುವಾಗಿರಬಹುದು...!) "ನಾವು ರಾಜ್ಯದ ಜನರಲ್ಲಿ ಕ್ಷಮೆ ಬೇಡುತ್ತೇವೆ.. ನಮ್ಮಿಂದಾದ ತಪ್ಪನ್ನು ಮನ್ನಿಸಿ, ನಾವು ಈಗ ನೆರೆಸಂತ್ರಸ್ತ ಜನರ ನೋವು ಅರಿತು ಅವರಿಗೆ ಸಹಾಯವಿಡಬೇಕು" ಅಂತ ನಮ್ಮ ಮು.ಮ ಅವರು ಹೇಳುತ್ತಿದ್ದಾಗ ಬಹುಶ: ಇದನ್ನು ನಮ್ಮ ನೆರೆಸಂತ್ರಸ್ತ ಜನರು ಟಿ.ವಿ ಯಲ್ಲಿ ನೋಡಿದ್ದರೆ (ಸದ್ಯಕ್ಕೆ ಅವರ ಮನೆ-ಮಠ ಕಳೆದುಕೊಂಡು ತೊಂದರೆಯಲ್ಲಿ ಇರುವಾಗ ಟಿ.ವಿ ನೋಡಿ ಇನ್ನೂ ಮಂಡೆ ಬಿಸಿ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ ಬಿಡಿ..!) ಇವರು ನಮ್ಮ ಮನೆ ಉದ್ದರಿಸುವುದಕ್ಕಿಂತ ತಮ್ಮ "ಮನೆ" ಯನ್ನು ಉದ್ದರಿಸಿಕೊಳ್ಳುವುದೇ ಒಳಿತು ಎಂದು ಮನದಲ್ಲೇ ಅಂದುಕೊಂಡು ನಿಟ್ಟುಸಿರುಬಿಡಬಹುದು...!

ಕಮಲ ಇಂತಹ ಸಂದರ್ಭದಲ್ಲೇ ಈ ರೀತಿ ನಲುಗಲ್ಪಟ್ಟರೆ ಪಾಪ ತಮ್ಮನ್ನು ವಿಧಾನ ಸಭೆಗೆ ಅರಿಸಿದ ಜನ ಮುಂದೆ ಕರ್ನಾಟಕದಲ್ಲಿ "ಅರಳಲು" ಬಿಡುವರೇ...?, ನಮ್ಮ ಮು.ಮ ಸಲ್ಪ ಮತದಾರರ ಮೇಲೆ ಕರುಣೆ ಇಟ್ಟು ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ತ್ವರಿತ ರೀತಿಯಲ್ಲಿ ಮಾಡಿದರೆ ಜನರು ಖುಷ್... ಎಲ್ಲರೂ ಖುಷ್....
ವಿನಯ್ ...
ನೆನ್ನೆ ( 21 ಅಕ್ಟೋಬರ್ 2009) ೨೪ ಗಂಟೆ ನಿರಂತರ ಪ್ರಸಾರವಾಗುವ ಸುದ್ಧಿ ಚಾನಲೊಂದನ್ನು ವೀಕ್ಷಿಸುತ್ತಿದ್ದಾಗ ಟಿ.ವಿ ಸುದ್ಧಿ ಸ್ಕ್ರೊಲ್ ನಲ್ಲಿ "ಭಗ್ನ ಪ್ರೇಮಿಗಳ ದಿನ.." ಅಂತ ಸುದ್ಧಿ ಸಾಲು ಕಾಣಿಸಿಕೊಳ್ಳಲು, ಕುತೂಹಲಗೊಂಡ ನಾನು ಚಾತಕ ಪಕ್ಷಿಯಂತೆ ಆ ಸುದ್ಧಿಗಾಗಿ ಕೆಲ ಹೊತ್ತು ಕಾದು ನೋಡಿ, ಕೊನೆಗೂ ನನ್ನ ಕಾಯುವಿಕೆ ಕೊನೆಗೊಂಡು ಆ ಟಿ.ವಿ ವಾಚಕ ಕೊಟ್ಟ (ಓದಿದ) ಮಾಹಿತಿಯೇ ಈ ಕೆಳಗಿನ ಕಿರು ಲೇಖನ...

....................

ಬನ್ನೇರುಘಟ್ಟದ ಪಾಲಿಟೆಕ್ನಿಕ್ ಕಾಲೇಜೊಂದರ ವಿದ್ಯಾರ್ಥಿಗಳು ಅಚರಿಸಿದ ಈ "ಭಗ್ನ ಪ್ರೇಮಿಗಳ" ದಿನ ಪ್ರಾರಂಭವಾದದ್ದೇ ಅವರದೇ ಒಬ್ಬ ಸ್ನೇಹಿತನಿಂದ ವಂತೆ. ಅವನು ಯಾರೋ ಒಬ್ಬಳನ್ನು ಪ್ರೀತಿಸಿ... ಅವಳು ಕೈಕೊಟ್ಟು... ಅವನಿಗೆ ಅದು ತಿಳಿದು... ಅವನ ಹೃದಯ ಭಗ್ನವಾಗಿ... ಈ ವಿಷಯವನ್ನು ಅವನ ಮಿತ್ರರಿಗೆ ಹೇಳಿದಾಗ ಅವರು ಈ ದಿನವೇ ನಿನಗೆ ಜೀವನದ ಹೊಸ ದಿನ ( ಅಂದರೆ 21 ಅಕ್ಟೋಬರ್...) ಎಂದು ಪಾರ್ಟಿ ಕೊಟ್ಟು ಪ್ರೇಮ ವೈಫಲ್ಯವನ್ನು ಆಚರಿಸಿದರಂತೆ. ಅಂದಿನಿಂದ ಎಲ್ಲಾ ವರ್ಷ ಅಕ್ಟೋಬರ್ 21 ರಂದು ಅವರಿಗೆ ( ಅಂದರೆ ಪ್ರೇಮ ಭಗ್ನಗೊಂಡವರಿಗೆ...! ) " ಭಗ್ನ ಪ್ರೇಮಿಗಳ ದಿನ "!!

ಆ ಸುದ್ಧಿಯಲ್ಲೇ ತೋರಿಸಿದಂತೆ ಅವರೊಂದು ಡೊಡ್ಡ ಕೇಕ್ ಕತ್ತರಿಸಿ, ಎಲ್ಲರಿಗೂ ಹಂಚಿ (ಕೊನೆಗೆ ಉಳಿದ ಚೂರುಗಳನ್ನು ಮುಖಕ್ಕೆ ಬಳಿದು...!. ಟಿ.ವಿ ಯಲ್ಲಿ ನೋಡಿದಂತೆ ಅವರದೇ ಒಂದು ಡೊಡ್ಡ ಸಂಘ ಇತ್ತು ಅನ್ನಿ! ) ನಂತರ ಒಬ್ಬೊಬ್ಬ ಯುವಕನು ಟಿ.ವಿ ಯ ಪ್ರತಿನಿಧಿಗೆ " ಓದುವ ಸಮಯದಲ್ಲಿ ಪ್ರೀತಿ ಮಾಡಬೇಡಿ, ಅದನ್ನು ನಂಬಿ ಹಾಳಾಗಬೇಡಿ..." "ಪ್ರೀತಿಯಿಂದ ನಿಮ್ಮ ಜೀವನದ ಅಮೂಲ್ಯ ಸಮಯ ವ್ಯರ್ಥಮಾಡಿಕೊಳ್ಳಬೇಡಿ.." ಅಂತ ತನ್ನದೇ ಧಾಟಿಯಲ್ಲಿ ಹೇಳುತ್ತಿದ್ದಾಗ ನಿಜಕ್ಕೂ ಸೋಜಿಗ ಅನಿಸಿದ್ದು ಅವರು ಇದನ್ನ ಮೊದಲೇ ಯೋಚಿಸಬಾರದಿತ್ತೇ ಎಂದು...?. ಅವರ ಮುಖದ ಮೇಲಿದ್ದ ಕುರುಚಲು ಗಡ್ಡ, ಪಟಾಕಿ ಹೊಡೆದು ಸಂಭ್ರಮಿಸಿದ ಪರಿ, ಪರಸ್ಪರ ಸಿಹಿ ಹಂಚುತ್ತಿದ್ದಾಗ ಇದ್ದ ಉತ್ಸಾಹ ಪ್ರೀತಿ ಮಾಡುವ ಮೊದಲು ಇದ್ದಿದ್ದರೆ ಬಹುಶ: ಈ ದಿನ ಅವರು ಅಚರಿಸುವ ಅಗತ್ಯವೇ ಬರುತ್ತಿರಲಿಲ್ಲವೇನೋ...!

ಸುಮ್ಮನೆ ಕನಸುಗಳನ್ನು ಹೊತ್ತು (!?!) ಪ್ರೀತಿಯೆಂಬ ಕಾಣದ ಮಾಯಾಜಿಂಕೆಯ ಹಿಂದೆ ಓಡುವ ನಮ್ಮ ಯುವಕರು ನಂತರ ಪ್ರೇಮ ವೈಫಲ್ಯದಲ್ಲಿ ಸಿಲುಕಿ ನೊಂದು, ಬೆಂದು, ಜೀವನವನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಸಲ್ಪ ಯೋಚಿಸಿ ಹೆಜ್ಜೆ ಇಡುವುದು ಒಳಿತಲ್ಲವೇ...?