ವಿನಯ್ ...
ನಮ್ಮ ಸಂಜು ಅಲಿಯಾಸ್ ಸಂಜಯ್ ನಂಜಪ್ಪ ಬಡಾವಣೆ ಕಂಡ ಅತ್ಯಂತ ಸೋಮಾರಿ ಹುಡುಗರಲ್ಲಿ ಒಬ್ಬ. ಹೇಗೋ ಕಷ್ಟಪಟ್ಟು ಬಿ.ಕಾಂ ಅನ್ನ ೩ನೇ ಕ್ಲಾಸ್ ನಲ್ಲಿ ಪಾಸ್ ಮಾಡಿಕೊಂಡನೋ ಆ ದೇವರಿಗೆ ಗೊತ್ತು!! ಕಾಲೇಜಿಗೆ ಹೋಗಿದ್ದಿಕ್ಕಿಂತ ಹೆಚ್ಚಾಗಿ ಟೇಟರ್ ಮತ್ತು ಪಾರ್ಕ್ ನಲ್ಲೇ ಜಾಸ್ತಿ ಸಮಯ ಕಳೆದ ಅವನು. ಕಾಲೇಜ್ ಮುಗಿದ ಮೇಲೆ ಹೆಚ್ಚೇನು ಮಾಡದೆ ಮನೆಯಲ್ಲೇ ಅರಾಮಾಗಿ ಕಾಲ ಕಳೆಯತೊಡಗಿದ. ಅಪ್ಪ ಕೆಲಸ ಸೇರು ಅಂತ ಕೂಗಿ-ಕೂಗಿ ಹೇಳಿದರೂ ಆದು ತನಗೆ ಹೇಳಿಯೇ ಇಲ್ಲವೇನೋ ಅನ್ನುವಂತೆ ತನ್ನ ಎಮ್.ಪಿ-೩ ಪ್ಲೇಯರ್ ಅನ್ನು ಕಿವಿಗೆ ಹಾಕಿಕೊಂಡು ತನ್ನದೇ ಲೋಕದಲ್ಲಿ ಇದ್ದು ಬಿಡುತ್ತಿದ್ದ. ಅಮ್ಮ ಇವನಿಗೆ ಊಟ ಹಾಕುವಾಗ "ಲೇ ಸಂಜಯಾ, ಇನ್ನ್ ಎಷ್ಟ್ ದಿನ ಹೀಗೆ ಸುಮ್ಮನೆ ತಿಂದ್ಕೊಂಡ್ ಬಿದ್ದಿರ್ತೀಯೋ?" ಅಂತಾ ದೊಡ್ಡ ದನಿಯಲ್ಲಿ ಹೇಳ್ತಾಯಿದ್ದರೆ, ಅವನು "ನೋಡೋಣ, ಮನೆಯಲ್ಲಿ ರೇಷನ್ ಖಾಲಿಯಾಗುವರೆಗೂ...!" ಅಂತ ಪಟ್ಟನೆ ಉತ್ತರಿಸುತ್ತಿದ್ದ. ಅಮ್ಮ "ಇದಕ್ಕಷ್ಟೇ ಲಾಯಕ್ಕು ನೀನು...!" ಅಂತ ಗೊಣಗಿ ಸುಮ್ಮನಾಗುವುದಷ್ಟೇ ಬಾಕಿ!. ಬೆಳಗಿನ ಸೂರ್ಯ ಮೇಲೇರಿ ಮಧ್ಯಾಹ್ನ ಹೊತ್ತಿಗೆ ನೆಡೆಯುತ್ತಿದ್ದರೂ ಇವನು ಏಳುವುದು ಕಷ್ಟ..! ಅಮ್ಮನ "ನೀರ್ ಪ್ರೋಕ್ಷಣೆ" ಆಗದಿದ್ದರೆ ಹಾಗೇ ಬೆಡ್ ಅಲ್ಲೇ ಇದ್ದುಬಿಡುತ್ತಿದ್ದನೇನೊ! ಅಂತೂ ಎದ್ದ ಮೇಲೆ ಏನೂ ಹೇಳಿಕೊಳ್ಳುವಂತ ಕೆಲಸ ಮಾಡದಿದ್ದ ಅವನು, ಬರಿ ತಿಂಡಿ ತಿಂದಿ, ತನ್ನ ಬೈಕ್ ಹತ್ತಿ ಸುತ್ತಲು ಹೋಗುತ್ತಿದ್ದದ್ದೇ ಅವನು ಮಾಡುತ್ತಿದ್ದ ಘನ: ಕಾರ್ಯ...!

ಹೀಗಿದ್ದ ನಮ್ಮ ಸೋಮಾರಿ ಸಂಜು, ಅದ್ ಹೇಗೆ ಗೀತಾಳ ಪ್ರೇಮ ಪಾಶದಲ್ಲಿ ಸಿಕ್ಕಿ ಬಿದ್ದನೋ ಆ ಭಗವಂತನೇ ಬಲ್ಲ...

.....................................................

ತನ್ನ ಎದುರಿನ ಮನೆಯಲ್ಲಿ ಅಂದು ಹೊಸ ನೆರೆಮನೆಯವರಾಗಿ ಒಂದು ಕುಟುಂಬ ಬಂದಿತ್ತು. ಮಹಾ ಸೋಮಾರಿಯಾದ ನಮ್ಮ ಸಂಜು ಅಂದೂ ಸಹ ಗಡದ್ ನಿದ್ದೆ ಸವಿಯುತ್ತಿರಲು, "ಡಂ" ಅಂತ ಜೋರಾದ ಶಬ್ದಕ್ಕೆ ಎದ್ದು ಕುಳಿತುಕೊಂಡನು. ಕಣ್ಣುಜ್ಜಿಕೊಂಡು ಎನಾಯಿತೆಂದು ಹೊರ ಬಂದು ನೋಡಲು, ಪಾತ್ರೆಯೊಂದನ್ನು ತಗೆದುಕೊಂಡು ಹೋಗುವಾಗ ಕೆಲಸದವರು ಕೆಳಗೆ ಬೀಳಿಸಿದ್ದರು. ಹೊಸದಾಗಿ ಬಂದಿದ್ದ ಆ ಕುಟುಂಬದ ಮಧ್ಯವಯಸ್ಸಿನ ವ್ಯಕ್ತಿ "ಏ ಅಪ್ಪ, ಸಲ್ಪ ಹುಷಾರು ಕಣ್ರೋ..." ಅನ್ನಲು, ಅವರ ಹಿಂದೆ ಒಬ್ಬ ಹಾಲು ಬಣ್ಣದ ಚಲುವೆ "ಅಪ್ಪ, ಒಂದ್ ನಿಮಿಷ ಇಲ್ಲಿ ಬಾ" ಅಂತ ಕರೆಯಲು, ನಮ್ಮ ಸಂಜುದು ಹಾಗೇ ಕಣ್ಣ್ ಬಿಟ್ಟ ಸ್ಥಿತಿ...! ನೀವೇನಾದರೂ ಅವನನ್ನ ನೋಡಿದ್ದರೆ "ಇವನಿಗೆ ಸಲ್ಪ ಲವ್ ಅಗಿರ್ ಬೇಕು ಅನಿಸ್ಸುತ್ತೆ..." ಅಂತಿದ್ದಿರೇನೊ!!! ಅದರೆ ನಮ್ಮ ಹುಡುಗ "ಸಲ್ಪ" ಎನು "ಪೂರ್ತಿ" ನೇ ಲವ್ ಎಂಬ ಹಳ್ಳದಲ್ಲಿ ಅವಳ ಕಂಡ ಮೊದಲ ನೋಟದಲ್ಲೇ(ದಿನದಲ್ಲೇ!!) ಬಿದ್ದಿದ್ದ!!

ಅದರ ಪರಿಣಾಮವೇ ಏನೋ...!

ಬೆಳಗ್ಗೆ ( ಸಾರಿ ಮಧ್ಯಾಹ್ನ:...) ಕ್ಕೆ ಕಷ್ಟಪಟ್ಟು ಏಳುತ್ತಿದ್ದ ಅವನಿಗೆ... ಬೆಳಗ್ಗೆ ೬ರ ಕ್ಕೆ ಟಪಕ್ ಅಂತ ಎಚ್ಚರಾಗಿಬಿಡುವುದೇ..!!

ಅಮ್ಮನಿಗೋ ಅಶ್ಚರ್ಯವೋ ಅಶ್ಚರ್ಯ!! "ಎನೋ, ಇಷ್ಟ್ ಬೇಗ ಎದ್ದಿ...?" ಅನ್ನಲು... "ಇಲ್ಲಾ, ಎನೋ ಕೆಲಸ ಇದೆ..." ಅಂತ ಎದ್ದವನೇ ಮನೆಯ ಹೊರಬಂದು, ಕೊಂಡು ತಂದಾಗಿನಿಂದ ಎಂದೂ ತೊಳೆಯದಿದ್ದ ತನ್ನ ಬೈಕ್ ಅನ್ನು ಸೋಪ್ ಹಾಕಿ ಸ್ವಚ್ಚವಾಗಿ ತೊಳೆಯತೊಡಗಿದನು!!!

ಅಂತೂ ಗಾಡಿ ಕ್ಲೀನ್ ಆಗಿದ ಮೇಲೆ 'ಜುರ್ರ್' ಅಂತ ಹೊರಟಿದ್ದೇ ಸಿಗರೇಟ್ ಸೇದಲು ಗಿರಿಯಪ್ಪ ಅಂಗಡಿ ಬಸ್ ಸ್ಟಾಪ್ ಹತ್ತಿರ ನಿಂತಿದ್ದ... (ಸಿಗರೇಟಿಗಿಂತ ಅವನಿಗೆ ಆ ಹಾಲು ಬಣ್ಣದ ಚಲುವೆ ಎಲ್ಲಿ ಹೋಗುತ್ತಾಳೆ ಎಂದು ತಿಳಿಬೇಕಾಗಿತ್ತು!!!). ಇದು ಅವನ ಮನೆಯ ಹತ್ತಿರ ಇದ್ದ ಏಕೈಕ ಬಸ್ ಸ್ಟಾಪ್. ಅಲ್ಲಿನ ಜನ ಯಾವ ಸ್ಥಳಕ್ಕೆ ಹೋಗಬೇಕಾದರೂ ಇಲ್ಲೇ ಬಂದು ಬಸ್ ಹಿಡಿಯಬೇಕು. ಅಲ್ಲಿಂದ ಸಲ್ಪ ದೂರದಲ್ಲಿ ಬೈಕ್ ನಿಲ್ಲಿಸಿ ಕಾದು ಕೂತಿದ್ದ ಅವನಿಗೆ ತನ್ನ ಬೈಕ್ ಟಾಯರ್ "ಟುಸ್ಸ್" ಆಗಿದ್ದು ಅಗಲೇ ಗೊತ್ತಾಗಬೇಕೇ!!. ಅಲ್ಲೇ ಹತ್ತಿರದಲ್ಲಿ ಇದ್ದ ಟೈರ್ ರಿಪೇರಿ ಅಂಗಡಿಯಲ್ಲಿ ಪಂಚರ್ ಹಾಕಿಸಿಕೊಳ್ಳುವಷ್ಟರಲ್ಲಿ ಬಸ್ ಮತ್ತು ಆ "ಹಾಲು ಬಣ್ಣದ ಚಲುವೆ" ನಿಲ್ದಾಣಕ್ಕೆ ಬಂದಿದ್ದರು. ದಡಬಡನೆ ಬೈಕ್ ಸ್ಟಾರ್ಟ್ ಮಾಡಿ ಬಸ್ ಫಾಲೋ ಮಾಡಹತ್ತಿದ ಸಂಜಯ್.. ಬಸ್ ನಿಂತಾಗ ಆ "ಹಾಲು ಬಣ್ಣದ ಚಲುವೆ" ಇಳಿದು ಇನ್ನೇನು ಹೊರಡಬೇಕು, ಅವಳ ಗೆಳತಿ ಅನಿಸುತ್ತೆ... "ಗೀತಾ, ಒಂದ್ ನಿಮಿಷ ನಾನು ಬಂದೆ..." ಅಂತ ಹಿಂದಿನಿಂದ ಕೂಗಲು, ಇವಳು ತಿರುಗು ನಿಂತು ಅವಳ ಸ್ನೇಹಿತೆಯೆಡೆಗೆ ನೋಡಿ ನಕ್ಕಳು. ಸಂಜಯ್ ನೋಡುತ್ತಿದಂತೆ ಅವರಿಬ್ಬರು ನೆಡೆದು ಹೋದದ್ದು ಅಲ್ಲೆ ಹತ್ತಿರದಲ್ಲಿ ಇದ್ದ "ಅರ್.ಟಿ ಕಾಲೇಜ್" ರ ಒಳಗೆ.

ಅಡ್ರಸ್ ಮತ್ತು ಹೆಸರು ಪತ್ತೆಯಾದ ಮೇಲೆ ಇನ್ನೇನು ಬಾಕಿ ಇದೆ ಹೇಳಿ...? ಕಾಲೇಜ್ ಹತ್ತಿರ ಕೂತು ಆ "ಹಾಲು ಬಣ್ಣದ ಚಲುವೆ" ಬರುವವರೆಗೂ ಕಾದು, ಲೈನ್ ಹೊಡೆದು (ಒಂದು ಸಾಲ ಕೆನ್ನೆಗೆ ಒಂದು "ಚಟ್" ಅಂತ ತಿಂದು..!), ಹೇಗೋ ಆ "ಹಾಲು ಬಣ್ಣದ ಚಲುವೆ" ಯನ್ನ ಓಪ್ಪಿಸಿ, ಅವಳ ಹತ್ತಿರ "ಹು:.. ಐ ಲವ್ ಯೂ" ಅನ್ನಿಸಿಕೊಂಡೇ ಬಿಟ್ಟ ನಮ್ಮ ಸಂಜಯ್...!

ಇನ್ನೇನು... ಮನೆ ಬೇರೆ ಎದುರು-ಬದುರಿನಲ್ಲಿ ಇತ್ತಲ್ಲಾ!!! ಬೆಳಗ್ಗೆ ಎದ್ದವನೇ (ಈಗ ಅವನು ಬೆಳಗಿನ ಸೂರ್ಯನನ್ನು ಸರಿಯಾಗಿ ಕಾಣಲು ಶುರುಮಾಡಿದ್ದು..) ತನ್ನ ರೂಮಿನ ಕಿಟಕಿ ಹತ್ತಿರ ಬರುವುದು, ಅಲ್ಲೇ ಇದ್ದ ತನ್ನ ರೇಡಿಯೋ ಆನ್ ಮಾಡುವುದು...!, ನಮ್ಮ ಹುಡುಗಿ ಇವನು ಎದ್ದು ಎಚ್ಚರವಾಗಿದ್ದಾನೆ ಎಂಬ ಸಿಗ್ನಲ್ ಸಿಕ್ಕಿ.. ಕಿಟಕಿ ಹತ್ತಿರ ಬಂದು "ಹಲೋ.. ಗುಡ್ ಮಾರ್ನಿಂಗ್" ಅಂತ ಕಣ್ಣಲ್ಲೇ ಹೇಳಿ... ಸಣ್ಣಗೆ ಒಂದು "ಫ್ಲಾಯಿಂಗ್ ಕಿಸ್ಸ್" ಹಾರಿಬಿಡುವುದು...! ನಮ್ಮ ಹುಡುಗ ಈ ಕಡೆ ಅದನ್ನ ಹಿಡಿದು "ಪುನೀತನಾಗುವುದು"...! ದಿನ ಮರೆಯದೇ ನೆಡೆಯುತ್ತಿದ್ದ ದಿನಚರಿ ಆದು...

-------------------

ಕಾಲೇಜ್ ಹತ್ತಿರದ ಪಾರ್ಕ್ ಅವರ "ಮೀಟಿಂಗ್ ಸ್ಪಾಟ್". ಅಲ್ಲೂ ಬೇರೇನೂ ನೆಡೆಯುತ್ತಿರಲಿಲ್ಲ.. ಸುಮ್ಮನೇ ಒಬ್ಬರೊನೊಬ್ಬರು ನೋಡುವುದು, ಸಣ್ಣನೇ ನಕ್ಕು ಸುಮ್ಮನಾಗಿಬಿಡುವುದು...! ಅವಳು "ಐಸ್ ಕ್ರೀಮ್ ತಿನ್ನೋಣ ಬಾ..." ಅಂದರೆ ಇವನು "ಬೇಡ ಬಿಡು" ಅನ್ನುವುದು, ಇವನು "ಬಾ, ಫಿಲ್ಮ್ ಗೆ ಹೋಗೋಣಾ.." ಅಂದರೆ ಇವಳು "ಇಲ್ಲ, ಟೈಮ್ ಇಲ್ಲಾ ಕಣೋ.." ಅಂತ ಉತ್ತರ!. ಕೊನೆಗೆ ಇಬ್ಬರ "ಇಲ್ಲ" ಗಳ ನಡುವೆ ಸಮಯ ಕಳೆದು ಹೋಗಿ ಸುಮ್ಮನೆ ಅವರವರ ಮನೆಗೆ ಹೊರಡಬೇಕಿತ್ತು...!

ಇದರ ನಡುವೆ ನಮ್ಮ ಸಂಜಯನಿಗೆ ಕೆಲಸ ಸಿಕ್ಕಿ, ಅವನು ತನ್ನ ಮಿತ್ರರಿಗೆಲ್ಲಾ ಪಾರ್ಟಿ ಕೊಡಿಸಿ ಕಳಿಸಿದ ಮೇಲೆ ೭ ಗಂಟೆ ಯಾಗಿಬಿಟ್ಟಿತು. ಅಲ್ಲೇ ಹತ್ತಿರದಲ್ಲಿ ಇದ್ದ "ಕಾಫಿ ಡೇ" ನಲ್ಲಿ ಗೀತಳ ಜೊತೆ ಸಮಯ ಕಳೆಯುತ್ತಿದ್ದಾಗ ಅವಳ ಅಪ್ಪ ಅಲ್ಲಿಗೆ ಬಂದು ಬಿಡುವುದೇ!

ಸುಮ್ಮನೆ ಅವರನ್ನ ಒಮ್ಮೆ ನೋಡಿದ ಅವಳ ಅಪ್ಪ ಮರುಮಾತನಾಡದೇ ಅಲ್ಲಿಂದ ಹೊರಡಲು, ಗೀತಾ "ನಾನ್ ಬರ್ತೀನಿ ಕಣೋ..." ಅಂತ ಅಲ್ಲಿಂದ ಎದ್ದು ಹೊರಟಳು. ಸಂಜಯ್ ಗೆ ತನ್ನ ತಲೆ ಕೆರೆದುಕೊಂಡು ಸುಮ್ಮನೆ ಕೂರದೇ ಬೇರೇನು ಉಳಿದಿರಲಿಲ್ಲ!!!

ಅಲ್ಲಿಂದ ಮನೆಗೆ ಬಂದ ಅವನಿಗೆ ತನ್ನ "ಎದುರು ಮನೆಯಲ್ಲಿ" ( ಐ ಮೀನ್ ಗೀತಾಳ ಮನೆಯಲ್ಲಿ...) ರಂಪ ರಾಮಾಯಣ ಸುಮಾರು ಹೊತ್ತು ಕೇಳುತ್ತಲೇ ಇತ್ತು. ಇಲ್ಲಿ ಇವನು ರೇಡಿಯೋ ಆನ್ ಮಾಡಿದರೆ "ಏನಿದಿ ಗ್ರಹಚಾರವೋ, ಏನಿದಿ ವನವಾಸವೋ.." ಅಂತ ಹಾಡತೊಡಗಿತು. ಇವನಿಗೆ ತಲೆ ಕೆಟ್ಟು ರೇಡಿಯೋ ಆಫ್ ಮಾಡಿ ಬೆಡ್ ಮೇಲೆ ತಲೆಯವರೆಗೂ ರಗ್ ಎಳೆದು ಮಲಗಲು ಯತ್ನಿಸಿದನು (ನಿದ್ದೆ ಎಲ್ಲಿ ಬರುತ್ತದೆ ಅವನಿಗೆ..!)

ಇತ್ತ ನಮ್ಮ ಗೀತಾ ಕಿಟಕಿಯ ಹತ್ತಿರ ಬರುವುದನ್ನ ನಿಲ್ಲಿಸಿ ಸುಮಾರು ದಿನಗಳಾಗತೊಡಗಿತು. ಹೊರಗೆ ಸಿಕ್ಕರೂ ಮಾತನಾಡುವ ಸುಳಿವಿಲ್ಲ...! ಇತ್ತ ನಮ್ಮ ಸಂಜಯ್ ಗೆ ಅಲ್ಲಿ ಕೆಲಸದಲ್ಲಿ ಆಸಕ್ತಿ ಇಲ್ಲ. ಇತ್ತ ಮನೆಗೆ ಬಂದು ಕುಳಿತರೂ ಅವನ ರೇಡಿಯೋ ಅವನನ್ನೇ ಅಣಕಿಸುವಂತೆ "ಗೀತಾ, ಸಂಗೀತಾ... ಏಕೆ ಹೀಗೆ ದೂರವಾದೆ, ಎಲ್ಲಿ ಹೋದೆ...?" ಅಂತ ಹಾಡತೊಡಗಿದರೆ ಅವನಿಗೆ ಆ ರೇಡಿಯೋ ಅನ್ನೇ ಎತ್ತಿ ಹೊರಗೆಸೆಯುವಷ್ಟು ಕೋಪ..! ಮತ್ತೇನು ಮಾಡುವುದು, ತನ್ನ ಕರ್ಮ ಎಂದು ತಾನೇ ತೆಪ್ಪಗೆ ಕುಳಿತುಬಿಡುತ್ತಿದ್ದ...

ಅಂತೂ ಒಂದು ದಿನ ಹೇಗೊ ನಮ್ಮ ಸಂಜಯ್ ಗೀತಾಳನ್ನು ಒಪ್ಪಿಸಿ, ನಾವು ಇಲ್ಲಿಂದ ಬೇರೆ ಊರಿಗೆ ಹೋಗಿಬಿಡೋಣ, ಇಲ್ಲಾ ಅಂದರೆ ನಾನು ನಿನ್ನ ಬಿಟ್ಟು ಇರಲಾರೆ ಅಂತ ಕಾಡಿ-ಬೇಡಿ ಕೋರಿದನು. ಇಬ್ಬರು ರೆಡಿಯಾಗಿ ರೈಲ್ವೆ ಸ್ಟೇಷನ್ ಗೆ ಬಂದು ಇನ್ನೇನು ರೈಲು ಹತ್ತಬೇಕು ಅಷ್ಟರಲ್ಲಿ ಮತ್ತೆ ಗೀತಾಳ ಅಪ್ಪ ಅಲ್ಲೂ ಪ್ರತ್ಯಕ್ಷವಾಗಿ ಬಿಡುವುದೇ...!?!

ಸಂಜಯ್ ಗೆ ಈಗ ಹುಚ್ಚು ಹಿಡಿಯುವುದೊಂದೇ ಬಾಕಿ...!

ಇನ್ನೇನು ಅವನು ಅವರ ಕಾಲು ಹಿಡಿದು "ಸರ್, ತಪ್ಪಾಯಿತು... ಕ್ಷಮಿಸಿ ಬಿಡಿ, ಈ ಜನ್ಮದಲ್ಲಿ ಮತ್ತೆ ಈ ಕೆಲಸ ಮಾಡುವುದಿಲ್ಲಾ..." ಅಂತ ಹೇಳುವ ಮೊದಲೇ ಅವಳ ಅಪ್ಪ...:

"ನೋಡಪ್ಪಾ, ನೀನು ಎಲ್ಲಾ ಬಿಟ್ಟು ಈ ರೀತಿ ಓಡಿಹೋದರೆ ಮುಂದೆ ಆರಾಮಾಗಿರಬಹುದು ಅನ್ಕೊಂಡಿದ್ದಿಯೇನು? ಅಲ್ಲಯ್ಯ, ಲವ್ ಮಾಡೋಕೆ ಧೈರ್ಯ ಇರುತ್ತೆ, ಅದರೆ ಎಲ್ಲರನ್ನು ಓಪ್ಪಿಸಿ ಮದುವೆಯಾಗೋಕೆ ಎನ್ ಭಯ ನಾ...? ನೀವ್ ಹೋಗೋದಲ್ದೆ ನಿಮ್ಮ ಮನೆಯವರಿಗೂ ತಲೆ ನೋವು ತರ್ಸ್ತಿರಲ್ಲಾ ಕಣಯ್ಯಾ...!" ಅಂತ ಹೇಳಿದಾಗ ನಮ್ಮ ಸಂಜಯ್ ತನ್ನ ಮೈ ಚಿವುಟಿಕೊಂಡು ತಾನು ಕನಸು ಕಾಣುತಿಲ್ಲಾ ತಾನೇ ಅಂತ ತನ್ನನ್ನು "ಚೆಕ್" ಮಾಡಿಕೊಂಡ!! ಅವನಿಗೆ ಈ ವಿಷಯ ಇಷ್ಟು ಸುಲಭವಾಗಿ "ಸಾಲ್ವ್" ಆಗುತ್ತೆ ಅಂತಾ ಕನಸಿನಲ್ಲಿ ಅಂದುಕೊಂಡಿರಲಿಲ್ಲವೇನೋ! "ರೋಗಿ ಬಯಸಿದ್ದು ಹಾಲು ಅನ್ನ, ಡಾಕ್ಟರ್ ಹೇಳಿದ್ದು ಹಾಲು ಅನ್ನ..." ಅಂತೆ ತನ್ನ "ಡೊಡ್ಡ ಸಮಸ್ಯೆ" ಸಾಲ್ವ್ ಅಯ್ತು ಎಂಬ ಸಂಭ್ರಮದಲ್ಲಿ ಮನೆಗೆ ಬಂದು ಗೀತಳ ತಂದೆಯ ಜೊತೆಗೂಡಿ ತನ್ನ ತಂದೆ-ತಾಯಿಯ ಹತ್ತಿರ ಮದುವೆಯ ವಿಷಯದ ಮಾತನಾಡಲು ಹೋದನು. ಸಂಜಯ್ ಯ ತಂದೆ-ತಾಯಿ ಇವನ ಪ್ರೇಮ ಕಥಾ ಮತ್ತು "ಎಸ್ಕೇಪ್" ಕಥಾ ತಿಳಿದು ಸಲ್ಪ "ಶಾಕ್" ಹೊಡೆದರೂ ಮುಂದೆ ಇನ್ನೇನಾದರೂ "ಡೊಡ್ಡ ಕೆಲಸ" ಮಾಡಿಬಿಟ್ಟರೆ ನಮಗೇನು ಗತಿ ಅಂತ ಹೆದರಿ ತನ್ನ ಮಗ ಸುಖವಾಗಿದ್ದರೆ ಸಾಕು ಎಂಬ ಅಸೆಯೊಂದಿಗೆ ಮದುವೆಗೆ ಓಪ್ಪಿದರು. ಅಂತೂ ಆಗಸ್ಟ್ ೧೫ ರಂದು ಸಂಜಯ್ ತನ್ನ "ಬ್ಯಾಚಲರ್" ಡಿಗ್ರಿ ಕಳೆದುಕೊಂಡು "ಮ್ಯಾರೇಜ್" ಎಂಬ "ಮಾಸ್ಟರ್" ಡಿಗ್ರಿ ಪಡೆದ ( ಸಂಸಾರ ಬಂಧನದ ಜೈಲಿಗೆ ಹೋದದ್ದು ಅವನಿಗೆ ಮರೆತುಹೋಯಿತು ಅನಿಸುತ್ತೆ..!).

ಅದರೆ ಅವನ ಮದುವೆಯ ದಿನ ವಾಲಗದವರು ಒಂದು ಹಾಡು ನುಡಿಸಿದ್ದು, ಆ ಹಾಡನ್ನು ಕೇಳಿದ ಸಂಜಯ್ ಗೀತಾಳ ಜೋಡಿಗೆ ಕಾಕತಳೀಯ ಅನಿಸಲಿಲ್ಲವೇನೋ...!! ಎಕೆಂದರೆ ಆ ಹಾಡು:

"ಜೊತೆಯಲಿ, ಜೊತೆ-ಜೊತೆಯಲಿ ಇರುವೆನು ಹೀಗೆ ಎಂದೂ..."

ಆಗಿತ್ತು!!!!
0 Responses

Post a Comment