ಸಾಕಷ್ಟು ಕಾಲದಿಂದ ಅದೇ "ಫಾರೀನ್ ಔಟ್ ಡೋರ್ ಲೋಕೇಶನ್" ಲವ್ ಸ್ಟೋರಿ, ಅದೇ ಮಚ್ಚು-ಲಾಂಗ್ ಗಳ ಅರ್ಭಟದಲ್ಲಿ ನಲುಗಿಹೋಗಿದ್ದ ಕನ್ನಡ ಚಿತ್ರರಂಗಕ್ಕೆ ನಾಗಶೇಖರ್ ರವರ "ಸಂಜು ವೆಡ್ಸ್ ಗೀತಾ" ಚಿತ್ರ ಒಳ್ಳೇ ಹಿತಾನುಭವ ತರಿಸಿದೆ. ೨ ಗಂಟೆ ೧೫ ನಿಮಿಷದ ಉದ್ದಕ್ಕೂ ಮುದನೀಡುವ ಕಥೆ ಪ್ರೇಕ್ಷಕರನ್ನ ಮತ್ತೆ ಚಿತ್ರಮಂದಿರಗಳತ್ತ ಬರುವಂತೆ ಮಾಡಿದೆ. ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ವಿಮರ್ಶೆ ನಿಮಗಾಗಿ...
ಇಂಜಿನಿಯರಿಂಗ್ ಪದವಿಯನ್ನ ಪಡೆದು ಆಗಷ್ಟೇ ಊರಿಗೆ ಮರಳಿರುವ ನಾಯಕ, ಹೀಗೆ ಅಂಗಡಿಯೊಂದರ ಬಳಿ ನಿಂತು ಮಾತನಾಡುತ್ತಿರುವಾಗ ನಾಯಕಿಯ ಪ್ರವೇಶ. ಮಾಮೂಲಿಗಿಂತ ಭಿನ್ನವಾದ ಇಂಟ್ರೋಡಕ್ಷನ್...(ನಾಯಕಿಯು ದಾರಿಯಲ್ಲಿ ನಿಂತಿದ್ದ ನಿರ್ಗತಿಕ ಹೆಂಗಸಿಗೆ ಬ್ರೆಡ್, ಹಣ ಕೊಡುವದು, ಯಾರೋ ಗೊತ್ತಿಲ್ಲದ ವ್ಯಕ್ತಿಯನ್ನ ಇಷ್ಟು ಪ್ರೀತಿಸುವ/ಆದರಿಸುವ ನಾಯಕಿಯ ನಡುವಳಿಕೆ ನಾಯಕನನ್ನ ಸೆಳೆಯುತ್ತದೆ... "ಬ್ಯೂಟಿ"... ಪದ ಮೆಚ್ಚುಗೆ ಸೂಸುವಂತೆ ಅವನ ಬಾಯಿಯಿಂದ ಹೊರಬರುತ್ತದೆ...). ನಂತರ ನಾಯಕನು ತನ್ನ ಮಾವನನ್ನ ಪುಸಲಾಯಿಸಿ ನಾಯಕಿಯ ಹಿಂದೆ ಹೋಗುವುದು, ಅವಳ ಮನಸನ್ನ ಗೆಲ್ಲುವುದು (ಆಟೋಪ್ರಯಾಣದ ಸಂದರ್ಭ...), ಅವಳನ್ನ ಮದುವೆಯಾಗುವಂತೆ ಒಪ್ಪಿಸುವುದು ಎಲ್ಲ ನೆಡೆಯುತ್ತದೆ. ಅದರೆ ಇಲ್ಲಿ ಟ್ವಿಸ್ಟ್ ನೀಡಿರುವ ನಿರ್ದೇಶಕರು ನಾಯಕಿಯ ಮಾವ ಬಾಲ್ಯದಲ್ಲಿ ಮಾಡಿದ ಶೋಷಣೆ ಮತ್ತು ಅದೇ ಹುಚ್ಚಿನಿಂದ ಅವನು ನಾಯಕಿಯ ಮೇಲೆ ಮಾಡುವ ಬಲತ್ಕಾರ (ನಾಯಕ-ನಾಯಕಿ ಅಂದು ಮದುವೆಯಾಗುವ ತಯಾರಿಯಲ್ಲಿರುತ್ತಾರೆ...) ಇಬ್ಬರು ಪ್ರೇಮಿಗಳ ಸುಂದರ ಕನಸನ್ನ ನುಚ್ಚುನೂರುಮಾಡಿಬಿಡುತ್ತದೆ. ನಾಯಕನು ಅವನನ್ನ ಕೊಲೆಮಾಡುವ ಸನ್ನಿವೇಶದೊಂದಿಗೆ ಚಿತ್ರ ವಿರಾಮಕ್ಕೆ ಬರುತ್ತದೆ.
ಚಿತ್ರದ ನಂತರದ ಭಾಗ ನಾಯಕನ ಹೋರಾಟ, ಮಾನಸಿಕ ಸ್ಥಿಮಿತ ಕಳೆದುಕೊಂಡ ನಾಯಕಿ ದಿಕ್ಕುತಪ್ಪಿ ಕಳೆದುಹೋಗಿ ಬೆಂಗಳೂರಿಗೆ ಬರುವುದು, ನಾಯಕ ಜೈಲಿನಿಂದ ಹೊರಬರುವ ಪ್ರಯತ್ನಕ್ಕೆ ಜೈಲಿನ ಹಳೆಯ ಕೈದಿ ಸಾಥ್ ನೀಡುವುದು, ಪರಾರಿಯಾಗುವ ಸನ್ನಿವೇಶ... ಇವೆಲ್ಲದರ ನಡುವೆ ನಾಯಕ-ನಾಯಕಿ ಮತ್ತೆ ಒಂದಾಗುವರೆ ಎಂಬುದನ್ನ ತಿಳಿಯುವುದಕ್ಕೆ ನೀವು ಈ ಚಿತ್ರವನ್ನ ನೋಡಬೇಕು..
"ಅರಮನೆ" ಚಿತ್ರದ ನಂತರ ನಾಗಶೇಖರ್ ರವರ ಪ್ರಯತ್ನ ನಿಜಕ್ಕೂ ಮೆಚ್ಚುವಂತದ್ದೆ. ಜೆಸ್ಸಿ ಗಿಫ್ಟ್ ಅವರ ಸಂಗೀತದಲ್ಲಿ ಮೂಡಿಬಂದ ಎರಡು ಹಾಡುಗಳು "ಸಂಜು ಮತ್ತು ಗೀತಾ..." ಹಾಗೂ "ಗಗನವೇ ಬಾಗಿ.." ನಿಜಕ್ಕೂ ಇಂಪಾಗಿವೆ. ಕವಿರಾಜ್ ಮತ್ತು ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಸತ್ಯರವರ ಕೊಡಗಿನ ಸೌಂದರ್ಯದ ಮನೋಹರ ಛಾಯಾಗ್ರಹಣಕ್ಕೆ ಹಾಟ್ಸ್ ಆಫ್..
ಮಳೆ ಹನಿ, ನಾಯಕ ಮತ್ತು ನಾಯಕಿಯ ಬಿಟ್ಟರೆ ಇತರ ಪೋಷಕ ಪಾತ್ರಗಳು ಪಾತ್ರಕ್ಕಣುಗುಣವಂತೆ ಬಂದು ಹೋಗುತ್ತವೆ. ಚರಣ ರವರ ನಾಯಕನ ಮಾವನ ಪಾತ್ರ ಗಮನ ಸೆಳೆಯುತ್ತದೆ. ಇನ್ನುಳಿದಂತೆ ಸುಹಾಸಿನಿ, ಜೈಜಗದೀಶ್, ಶರತ್ ಲೋಹಿತಶ್ವ, ಅರುಣ್ ಸಾಗರ್, ರಂಗಾಯಣ ರಘು ರವರ ಪಾತ್ರಗಳು ದೀರ್ಘವಲ್ಲದಿದ್ದರೂ ಸಂದರ್ಭಕ್ಕೆ ಅನುಗುಣವಾಗಿವೆ...
ಉತ್ತಮ ಚಿತ್ರಗಳ ಬರವಿರುವ ನಮ್ಮ ಸಿನೆಮಾ ರಂಗಕ್ಕೆ ನಿಜಕ್ಕೂ "ಸಂಜು ವೆಡ್ಸ್ ಗೀತಾ..." ಹೊಸಚೈತನ್ಯ ನೀಡುವ ಟಾನಿಕಿನಂತೆ ಬಂದಿದೆ. ಕನ್ನಡ ಚಿತ್ರಾಭಿಮಾನಿಗಳು ಎಂದಿನಂತೆ ತಮ್ಮ ಪ್ರೋತ್ಸಾಹ ನೀಡಿ ಚಿತ್ರದ ಯಶಸ್ಸಿಗೆ ಕಾರಣರಾಗುತ್ತಾರೆ ಎಂಬ ಅಶಯಯೊಂದಿಗೆ ಚಿತ್ರ ಶತದಿನೋತ್ಸವ ಪೂರೈಸಲಿ ಎಂದು ಈ ಕನ್ನಡಿಗನ ಬಯಕೆ...
Keyword(s): ಸಂಜು ವೆಡ್ಸ್ ಗೀತಾ ಚಿತ್ರ ವಿಮರ್ಶೆ, Sanju weds Geetha film review, Sanju weds Geetha movie review
Post a Comment