ವಿನಯ್ ...
ಅವರಿಬ್ಬರು ಒಂದು ಪುಣ್ಯಭೂಮಿಯಲ್ಲಿ ಹುಟ್ಟಿದ ಸಹೋದರರು....

ಅವರ ಭಾವನೆ, ಗುಣಗಳು... ಎಲ್ಲವು ಒಂದೇ ಆಗಿದ್ದವು....

ಬಿಡಿಸಲಾರದ ಪ್ರೀತಿ ಅವರದು...

ಆದರೆ,

ಅವರಿಬ್ಬರಲ್ಲಿ ತಮ್ಮನಿಗೆ ಸಲ್ಪ ಸಿಡುಕುಬುದ್ಧಿ..

ಇಲ್ಲ-ಸಲ್ಲದವರ ಮಾತನ್ನು ಹೆಚ್ಚು ನಂಬತೊಡಗಿದ...

ನಂತರ ಜೀವಕ್ಕೆ ಜೀವವಾದ ತನ್ನ ಸೋದರನನ್ನು ಬಿಟ್ಟು ಹೊರಟ..

ಅವನ ಪಾಲಿಗೆ ಕಂಟಕನಾಗುತ್ತಾ ಅವನ ಮನೆಗೆ ಕನ್ನ ಕೊರಯಲು ದೂರಾಲೋಚಿಸಿದ...

ಸತತ ಸೋಲುಂಡರೂ ಮತ್ತೆ-ಮತ್ತೆ ಪ್ರಯತ್ನ ಪಟ್ಟ...


.........


ಸಿನಿಮದ ಕಥೆಯಂತಿರುವ ಈ ಮೇಲಿನ ಸಾಲುಗಳು ಇಂದು ನಮ್ಮ ದೇಶವಾದ ಭಾರತ ಮತ್ತು ನಮ್ಮಿಂದಲೇ ಹುಟ್ಟಿಬಂದ ನೆರೆ ರಾಷ್ಟ್ರವಾದ ಪಾಕಿಸ್ಥಾನದ ನಡುವೆ ನೆಡೆಯುತ್ತಿರುವ ನೈಜ ಸ್ಥಿತಿಯ ದೃಶ್ಯ... ಸಿನಿಮಾ ಕೇವಲ ಎರಡುವರೆ ಗಂಟೆಗಳ ಅವಧಿಗೆ ನೆಡೆದರೆ ಈ ಎರಡು ದೇಶಗಳ ನಡುವೆ ನೆಡೆಯುತ್ತಿರುವ ಕಥಾಸಾರಾಂಶ ೬೩ ವರ್ಷಗಳಾದರೂ ನಿಲ್ಲುವ ಸೂಚನೆ ಇಲ್ಲ...! ಇಂಡಿಯನ್ ಇಂಡಿಪೆಂಡೆಂಸ್ ಆಕ್ಟ್ ೧೯೪೭ ರ ಮುಖಂತರ ಅಧಿಕೃತವಾಗಿ ವಿಭಾಜನೆಗೊಂಡ ಭಾರತ-ಪಾಕ್ ನಂತರ ಸರಿಸುಮಾರು ೫೦೦,೦೦೦ ರಿಂದ ೧,೦೦೦,೦೦೦ ಸಾವುಗಳ ನಡುವೆ ಇಲ್ಲಿನ ಮತ್ತು ಅಲ್ಲಿನ ಜನರು ತಮ್ಮ ಮೂಲನೆಲೆ ಕಳೆದುಕೊಂಡು ಬೇರೆಡೆ ಬಂದು ಇರುವಂತಾಯಿತು.

ದೇಶ ವಿಭಾಜನೆಯಾದರೂ ಇನ್ನೂ ಕಾಶ್ಮೀರ ಹಾಗೇ ಉಳಿದಿತ್ತು. ಅಲ್ಲಿ ಅನೇಕ ಮುಸ್ಲಿಮ್ ಬಾಂಧವರು ಮತ್ತು ಹಿಂದು ಬಾಂಧವರು ಸಮರಸದಿಂದ ಬಾಳ್ವೆ ಮಾಡುತ್ತಿದ್ದರು. ಪಂಜಾಬಿನ ಬಹುತೇಕ ಭಾಗವನ್ನು ಭಾರತ ವಿಭಾಜನೆಯಲ್ಲಿ ಕಳೆದುಕೊಂದರೂ ಕಾಶ್ಮೀರದ ಮೇಲಿಟ್ಟಿದ್ದ ಕಣ್ಣನ್ನು ಪಾಕ್ ಇನ್ನೂ ತಗೆದಿರಲಿಲ್ಲ... ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಕಾಶ್ಮೀರದ ರಾಜಸಂಸ್ಥಾನದವರು ಭಾರತದೊಡನೆ ಸೇರಲು ಇಶ್ಚಿಸಿದಾಗ ಅರಂಭವಾದ ಕಾಶ್ಮೀರ ಕದನ ಅಂದಿನಿಂದ ಇನ್ನೂ ಹಾಗೆ ಎಡಬಿಡದೆ ಮುಂದುವರಿದಿದೆ...

೮೦ ರ ನಂತರದ ದಶಕದವರೆಗೂ ಬೂದಿ ಮುಚ್ಚಿದ ಕೆಂಡಂತಿದ್ದ ಎರಡು ದೇಶಗಳ ನಡುವಿನ ವಾತಾವರಣ ೮೫ ರ ಹತ್ತಿರ ಬರುತ್ತಿದ್ದಂತೆ ಕಾಶ್ಮೀರ ಕಣುವೆಯ ಸೀಮಾಲೋನ್ಘನೆ ಮುಖಂತರ ಇನ್ನಷ್ಟು ಬಿಗಡಾಯಿಸತೊಡಗಿತು. ನೆರೆಯ ರಾಷ್ಟ್ರದ ಮೇಲಿನ ಗೂಮಾನಿ ಆಗಾಗ ಕಾಡುತ್ತಿದ್ದರೂ ಅದು ಆಗಷ್ಟೆ ಅಫ್ಘಾನಿಸ್ಥಾನ್ ಯುದ್ಧ ಮುಗಿಸಿದ್ದ ಮುಜಾಹಿದ್ದೀನ್ ಯೋಧರ ಕಾಶ್ಮೀರ ಗಡಿಯೊಳಗಿನ ನುಸುಳುವಿಕೆಯೊಂದಿಗೆ ತಾರಕವೇರತೊಡಗಿತು. ಇದರೊಂದಿಗೆ ಪ್ರತ್ಯೇಕತವಾದಿಗಳ ಸಮಾಗಮ ಅದಕ್ಕೆ ಇನ್ನಷ್ಟು ಬಲ ದೊರಕಿಸಿತು.

ಜಮ್ಮು ಕಾಶ್ಮೀರ ಅಸ್ಸೆಂಬ್ಲಿಯ ಅಧಿಕೃತ ಮಾಹಿತಿ ಪ್ರಕಾರ ಇವರೆಗೂ (ಜುಲೈ ೨೦೦೯ ರ ತನಕ...) ಸರಿಸುಮಾರು ೩,೪೦೦ ಕಾಣೆಯಾಗಿರುವ ಪ್ರಕರಣ ಮತ್ತು ೪೭,೦೦೦ ಜನರ ಸಾವು ಸಂಭವಿಸಿವೆ ಎಂದು ಹೇಳಿದೆ. (ಹೆಚ್ಚಿನ ಮಾಹಿತಿ: http://en.wikipedia.org/wiki/Jammu_and_Kashmir ರಲ್ಲಿ ಇದೆ...). ಭೂಲೋಕದ ಸ್ವರ್ಗದಂತಿರುವ ಕಾಶ್ಮೀರವು ಹೆಚ್ಚು-ಕಮ್ಮಿ ಆ ಕಾಲದಿಂದ ತನ್ನ ನೆಮ್ಮದಿ ಕಳೆದುಕೊಳ್ಳತೊಡಗಿತು. ಹಲವಾರು ಸಾವು-ನೋವುಗಳು ಈ ಕಣವೆಯ ಮುಖ್ಯಭಾಗವಾಗತೊಡಗಿದವು.

ನಮ್ಮ ಜನ ಹಾಗೂ ಪಾಕ್ ನ ಸಹೃದಯ ಬಂಧುಗಳು ಇವೆಲ್ಲಾ ಬಯಸದಿದ್ದರೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಜಾಹಿದ್ದೀನ್ ಮತ್ತು ಪ್ರತ್ಯೇಕತವಾದಿಗಳ ಹೂಡಿರುವ ತಂತ್ರ ಇವರಿಬ್ಬರ ನಡುವಿನಲ್ಲಿ ಬಹುದೊಡ್ಡ ಕಂದಕ ಸೃಷ್ಠಿಸಿದೆ. ಎರಡು ಗಡಿಗಳ ನಡುವೆ ನೆಡೆಯುತ್ತಿದ್ದ ವ್ಯಾಪಾರ ವಹಿವಾಟಿಗೆ ಇದು ಭಾರಿ ದಕ್ಕೆ ತಂದಿದ್ದರೂ ಇನ್ನೂ ಸಂಸ್ಕೃತಿಕ ಮತ್ತು ಕ್ರೀಡೆಯ ದಿಕ್ಕಿನಲ್ಲಿ ನೋಡಿದರೆ ಭಾರಿ ಬದಲಾವಣೆಯೇನೂ ಆಗಿಲ್ಲ. ವೀಸಾ ತೊಂದರೆ, ಪರಸ್ಪರ ವಿಚಾರವಿನಿಮಯಗಳಲ್ಲಿನ ತೊಂದರೆ, ಸಮರ್ಪಕ ಮಾಹಿತಿ ವಿನಿಮಯ ಇಲ್ಲದಿರುವುದು ಈ ಎರಡು ದೇಶದಲ್ಲಿರುವ ಪ್ರಜೆಗಳಿಗೆ ವಿನ:ಕಾರಣ ತೊಂದರೆ ಅನುಭವಿಸುವಂತೆ ಮಾಡುತ್ತಿವೆ. ಕ್ರೀಡಾ ಕಾರ್ಯಕ್ರಮಗಳು ರದ್ದಾಗುವುದು, ಸಂಸ್ಕೃತಿಕ ಕಾರ್ಯಕ್ರಮ ನೆಡೆಸುವುದಕ್ಕೆ ಪರವಾನಿಗೆ ಸಿಗದಿರುವುದು ಎಲ್ಲಾ ಇದರ ಕಾರಣವೆನ್ನಬಹುದು...

ನಾವು ಎರಡು ದೇಶಗಳ ಪ್ರಜೆಗಳ ವಿಷಯ ಬಿಟ್ಟು ಯೋಚಿಸತೊಡಗಿದರೆ ನಮಗೆ ಕಾಡುವ ಮತ್ತೊಂದು ವಿಚಾರ: ಭಯೋತ್ಪಾದನೆ. ದೇಶವಿಭಾಜನೆಯಾದ ನಂತರ ೧೯೪೭-೪೮, ೧೯೬೫ ಮತ್ತು ೧೯೭೧ ರಲ್ಲಿ ಕದನವೆರ್ಪಟ್ಟರೂ, ಜನರ ಮನಸ್ಸಿನಲ್ಲಿ ನಿರಂತರ ಭಯ ಮೂಡಿಸಲು ಭಯೋತ್ಪಾದನೆ ಎಂಬ "ಭೂತ" ಮತ್ತಷ್ಟು ಸಹಕರಿಸಿದೆ. ದೇಶದ ಅಂತರಿಕ ಭದ್ರತೆ, ವ್ಯಾಪಾರ-ಹಣಕಾಸು ಕಾರ್ಯಗಳಲ್ಲಿ ಏರು-ಪೇರು ಮಾಡಲು ಭಯೋತ್ಪಾದನ ಗುಂಪುಗಳು ಮತ್ತು ಅದರ "ಮಾಲೀಕರು" ಬಹಳಷ್ಟು ಶ್ರಮಿಸುತ್ತಲೇ ಇದ್ದಾರೆ. ಕಾಶ್ಮೀರದಿಂದ ಪ್ರಾರಂಭವಾದ ಈ "ಕಾರ್ಯ" ನಂತರ ವ್ಯವಸ್ಥಿತವಾಗಿ ಭಾರತ ದೇಶದೊಳಗೆಲ್ಲಾ ಹರಡುವಂತೆ ಮಾಡುವಲ್ಲಿ ಕೆಲಮಟ್ಟಿನ ಸಫಲತೆ ಈ ಭಯೋತ್ಪಾದನ ಸಂಘಟನೆಗಳು ಪಡೆದವು. ನಮ್ಮ ರಾಷ್ಟ್ರದ ಯುವಕರನ್ನೇ ಅಲ್ಲಿಗೆ ಕರೆದುಕೊಂಡು ಹೋಗಿ, ಯುದ್ಧ ತರಬೇತಿ ನೀಡಿ ಮತ್ತೆ ನಮ್ಮಲ್ಲಿಗೆ ಕಳುಹಿಸಿ, ನಮ್ಮ ಜನರನ್ನೇ ಸಾಯಿಸುವ "ಷಡ್ಯಂತ್ರ"...! ಎಂತಹ ದುರಾದೃಷ್ಟ ನೋಡಿ ನಮ್ಮ ತಾಯಿ ಭಾರತಮಾತೆಗೆ. ತನ್ನದೇ ಭಾಗವಾಗಿದ್ದ ನೆರೆರಾಷ್ಟ್ರದ "ಗುಂಪುಗಳು" ತನಗೆ ಬೆಂಕಿಯಿಡಲು ಬರುತ್ತಿರುವುದು ಭಾರತಕ್ಕೆ ಸಿಕ್ಕ ಶಾಪವೆನ್ನಬಹುದು.

ನಮ್ಮ ದೇಶದ ಸುರಕ್ಷತ ವ್ಯವಸ್ಥೆ ಎಷ್ಟೇ ಬಿಗಿಯಾಗಿದ್ದರೂ ಹಲವು "ಮೂಲ" ಗಳನ್ನು ಹೊಂದಿರುವ ಈ "ಗುಂಪುಗಳು" ಎಂತಹ ಚತುರತೆಯಿಂದ ಕಾರ್ಯನಿರ್ವಹಿಸುತ್ತಿದೆ ಅಂದರೆ ವರ್ಷದ ಹಿಂದೆ ನೆಡೆದ ಮುಂಬಯಿ ಉಗ್ರರ ಅಟ್ಟಹಾಸ ಮತ್ತು ಇತ್ತೀಚಿಗಿನ ಪುಣೆ ಬಾಂಬ್ ಸ್ಪೋಟಗಳೇ ಉದಾಹರಣೆ. ಮುಂಬಯಿ ಉಗ್ರರ ಅಟ್ಟಹಾಸವಂತೂ ಕೆಲವು ವರ್ಷಗಳ "ಪ್ಲಾನಿಂಗ್" ಯೊಂದಿಗೆ ಒಂದು ಬಹಳ ರಹಸ್ಯಮಯ ಕಾರ್ಯಚರಣೆಯೂ ಸಹ ಆಗಿತ್ತು. ನಮ್ಮಲ್ಲಿನ ಎನ್.ಎಸ್.ಜಿ ಕಾಮಾಂಡೋಗಳಿಗಿದ್ದ ಜಾಗದ ಮಾಹಿತಿಗಿಂತ ಹೆಚ್ಚು ಮಾಹಿತಿ ಅವರ ಬಳಿ ಅಂದು ಇತ್ತು. ಅದರ ಸಹಾಯದಿಂದ "ಕಂಟ್ರೋಲರ್ಸ್" ಹೇಗೆ ಕಾರ್ಯನಿರ್ವಹಿಸಿದೆಂದರೆ ಅವರು ಮಾಡಿದ "ಸಂಶೋಧನೆ" ಬಗ್ಗೆ ನೀವೇ ಒಮ್ಮೆ ಯೋಚಿಸಿ...!!!.


ದಿಗಿಲಾಗುತ್ತದೆಯಲ್ಲವೇ...?


ನಮ್ಮ ಭಾರತದ ಬಳಿ ಎಂತಹ ಶಕ್ತಿಯಿದ್ದರೂ "ಹೊರ ದೇಶ" ಗಳ "ಒತ್ತಡ" ದಿಂದ ಪ್ರತಿಕಾರ್ಯಚರಣೆ ಮಾಡದೆ ಸುಮ್ಮನಿರಬೇಕಾಗಿದೆ. ಇದರಿಂದ ನಮ್ಮ ಜನ ಇನ್ನಷ್ಟು ಸಾವು-ನೋವುಗಳನ್ನ ನೋಡಬೇಕಾಗಿದೆ.... ಬಾಂಧವ್ಯದ ಬಗ್ಗೆ ಅಲ್ಲದಿದ್ದರೂ ದೇಶ ರಕ್ಷಣೆಗೋಸ್ಕರವಾದರೂ ನಮ್ಮ ಭಾರತವು ಎಂದು ತಿರುಗಿ ಉತ್ತರಕೊಡುವುದೋ ಎಂಬುದು ಆ ಕಾಲವೇ ನಿರ್ಣಯಿಸಬೇಕು...! ಏಕೆಂದರೆ ದೂರದ ಅಫ್ಘಾನಿಸ್ಥಾನದಲ್ಲಿ ನೆಡೆದ ಸಂಚಿಗೆ ಅಮೆರಿಕ ಭೂಮಿ ಕದುಲಿದಾಗ ಅವರು "ತಾಲಿಬಾನಿ"ಗಳನ್ನು ಮೆಟ್ಟಿ ನಿಂತಂತೆ ನಾವು ನಮ್ಮ ನೆರೆಯ ದೇಶದಲ್ಲಿ ಬೀಡು ಬಿಟ್ಟಿರುವ ಆ "ಗುಂಪುಗಳ" ವಿರುದ್ಧ ಕಾರ್ಯಚರಣೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಅಲ್ಲಿಯವರೆಗೂ ನಾವೆಲ್ಲ ಇನ್ನೆಷ್ಟು ದಿನ ಭೀತಿಯ ನೆರಳಿನಲ್ಲಿ ಇರಬೇಕೋ ಆ ದೇವರೇ ಬಲ್ಲ...!!
ವಿನಯ್ ...
ಜೀವನವೆಂಬ ಝರಿಯಲ್ಲಿ

ಹರಿದ ನೀರೆಷ್ಟೋ...,

ಸವೆದ ಕಲ್ಲೆಷ್ಟೋ...,

ಸಾಗಿದ ದಾರಿಯೆಷ್ಟೋ...,

ನೋಡಿದ ತಿರುವೆಷ್ಟೋ...!

ತುಂಬಿ ಹರಿದಾಗ ಅನಂದಿಸಿದವರು ಹಲವರು,

ಸೊರಗಿದಾಗ ಕಂಡು ಹಲುಬಿದವರು ಇನ್ನುಳಿದವರು...

ನೀರ ಹರಿವು ನೋಡಲು ಸೊಗಸು,

ಅದರ ಝುಳು-ಝುಳು ನಾದವ ಕೇಳಲು

ಮನಕೆ ಹುರುಪು...

ನೀರು ನಿಂತರೆ ಇಲ್ಲದು ಸೊಬಗು..,

ಕಾಣಸಿಗದು ಜೀವ ವೈವಿಧ್ಯದ ಅನಂದವು...

ಹೋಲಿಸಿದರೆ ಇವರಿಬ್ಬರಿಗಿರುವ ಸೌಮ್ಯತೆ,

ಕಾಣುವುದು ಉದಾಹರಣೆ ನಮಗೆ ಹಲವೆಡೆ...

ತಾನು ಹರಿಯುತ, ಹಾದಿ ಸವಿಸುತಾ,

ಝರಿ ಸೇರುವುದು ನೀಲ ಕಡಲು...

ಹಾಗೆ ತಾನು ಸವೆಸುವ ಹಾದಿಯಲಿ,

ಮನುಜ ಕಾಣುವನು ಹಲವಾರು ತಿರುವು...

ಸ್ವಲ್ಪ ನಲಿವು, ಹೆಚ್ಚು ನೋವು...

ಕ್ಷಣ-ಕ್ಷಣಕ್ಕೂ ನಿರೀಕ್ಷಿಸದ ಕುತೂಹಲ-ನಿಗೂಢತನವು....!

ಜೀವನ ಎಷ್ಟು ದಿನ ಸಾಗಿ ಉರುಳಿತು ಎಂಬುದಕ್ಕೆ ಇರದು ಸಂಬಂಧ...,

ತಾನು ಇಲ್ಲಿ ಇದ್ದ ದಿನದೊಳು ಪರರು ತನ್ನಿಂದ ಪಡೆದ ಸುಖವ, ನೆನೆದ ಸಂತೋಷವಷ್ಟೆ ಸಾಕು..,

ಅವನ ಜೀವನವಾಗಲು ಪಾವನ...
ವಿನಯ್ ...
ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- ೩

ಇಲ್ಲಿಯವರೆಗೂ ನೀವು ಕೂರ್ಮನ ಕಥೆಯ ಓದಿದಿರಿ, ಬನ್ನಿ ಮುಂದಿನ ಭಾಗವಾದ ಕಪ್ಪೆ ಮತ್ತು ಸುಂದರ ಮಹಿಳೆಯ ನೀತಿ ಕಥೆಯನ್ನು ಓದೋಣ...

ಕಪ್ಪೆಗಳು...

ಒಬ್ಬ ರೈತನು ತನ್ನೂರಿನಿಂದ ಪಟ್ಟಣಕ್ಕೆ ಬಂದು ಅಲ್ಲಿದ್ದ ಒಂದು ಉಪಹಾರ ಗೃಹದ ಮಾಲೀಕನ ಹತ್ತಿರ: "ನಾನು ನಿಮಗೆ ನೂರಾರು ಕಪ್ಪೆಯ ಕಾಲನ್ನು ಕೊಡುವೆನು... ನೀವು ಅದನ್ನು ಕೊಳ್ಳುವಿರಾ?" ಅನ್ನಲು, ಅದನ್ನು ಕೇಳಿದ ಉಪಹಾರ ಗೃಹದ ಮಾಲೀಕನಿಗೆ ಅಘಾತ! ತನ್ನನ್ನು ತಾನೇ ಸವರಿಸಿಕೊಂಡು "ನೀನು ಅಷ್ಟು ಕಪ್ಪೆಯ ಕಾಲನ್ನು ಎಲ್ಲಿಂದ ತರುವೆ?" ಎಂದು ಆ ರೈತನನ್ನು ಕೇಳಲು, ರೈತನು ಹೀಗೆ ಉತ್ತರಿಸಿದನು: "ನನ್ನ ಮನೆಯ ಹತ್ತಿರ ಒಂದು ಕೊಳವಿದೆ, ಅದರಲ್ಲಿ ಲಕ್ಷಾಂತರ ಕಪ್ಪೆಗಳಿವೆ... ಅವು ರಾತ್ರಿಯೆಲ್ಲಾ ಕೂಗುವುದರಿಂದ ನನ್ನ ನಿದ್ದೆ/ನೆಮ್ಮದಿ ಹಾಳಾಗಿದೆ.., ಅದಕ್ಕೆ ನಾ ಅವುಗಳನ್ನ ಹಿಡಿದು ತಂದು ನಿಮಗೆ ಮಾರುವೆ, ನೀವು ಯೋಗ್ಯ ಬೆಲೆ ನೀಡಿ ಕೊಂಡುಕೊಳ್ಳಿ..." ಎಂದನು. ಉಪಹಾರ ಗೃಹದ ಮಾಲೀಕನಿಗೆ ಆ ರೈತ ಹೇಳಿದ್ದು ಸರಿಯೆನಿಸಿ ೫೦೦ ರ ಲೆಕ್ಕದಲ್ಲಿ ಮುಂದಿನ ಹಲವು ವಾರಗಳ ಕಾಲ ತನ್ನ ಉಪಹಾರ ಗೃಹಕ್ಕೆ ಕಪ್ಪೆಗಳನ್ನು ಸರಬರಾಜು ಮಾಡಬೇಕು ಎಂಬ ಕರಾರು ಇಟ್ಟನು. ರೈತನು ಮಾಲೀಕನ ಮಾತಿಗೆ ಒಪ್ಪಿ ತನ್ನ ಊರಿಗೆ ಮರುಳಿದನು.


ಮುಂದಿನ ವಾರ ಮತ್ತೆ ಆ ಉಪಹಾರ ಗೃಹದ ಬಳಿ ಬಂದ ರೈತನ ಮುಖ ತೀರಾ ಸೆಪ್ಪಗಾಗಿತ್ತು. ನೂರಾರು ಕಪ್ಪೆಗಳನ್ನು ಹೊತ್ತು ತರುವೆ ಎಂದು ಹೇಳಿಹೋಗಿದ್ದ ಅವನ ಕೈಯಲ್ಲಿ ಕೇವಲ ಎರಡು "ಸೊಣಕಲು" ಕಪ್ಪೆಗಳು ಮಾತ್ರ ಇದ್ದವು. ಆ ಉಪಹಾರ ಗೃಹದ ಮಾಲೀಕನು ಕೂತುಹಲದಿಂದ "ಎನಪ್ಪಾ, ಏನೋ ರಾಶಿ-ರಾಶಿ ಕಪ್ಪೆಗಳನ್ನು ತರುತ್ತೇನೆ ಅಂದೆಯೆಲ್ಲಾ... ಎಲ್ಲಿ ನಿನ್ನ ಕಪ್ಪೆಗಳು..?" ಅಂತ ಕೇಳಲು, ರೈತನು "ಇಲ್ಲ ಸ್ವಾಮಿ, ನನ್ನ ಲೆಕ್ಕಚಾರ ತಪ್ಪಾಗಿತ್ತು, ಕೇವಲ ಎರಡು ಕಪ್ಪೆಯ ಶಬ್ದವನ್ನು ನಾನು ನೂರಾರು ಕಪ್ಪೆಗೆ ಹೋಲಿಸಿಬಿಟ್ಟಿದ್ದೆ.." ಎಂದು ಪೆಚ್ಚಾಗಿ ಹೇಳಿದನು....!


[ನೀತಿ: ನಿಮ್ಮ ಬಗ್ಗೆ ಹಲವು ಜನರು ಕೊಂಕು ಮಾತು ಅಥವಾ ನಿಂದನೆ/ಜರಿಯುವ ಕೆಲಸ ಮಾಡುತ್ತಿದ್ದರೆ, ಬಹುಶ: ಮೇಲಿನಂತೆ ಅವರು ಕೇವಲ "ಕೆಲವು" ಒಟಗುಟ್ಟುವ ಕಪ್ಪೆಗಳಾಗಿರಬಹುದು...!!!. ನಿಮ್ಮಲ್ಲಿರುವ ಕಷ್ಟಗಳನ್ನು ಸ್ವತ: ಹೋಲಿಕೆ ಮಾಡತೊಡಗಿದರೆ ಅದು ಒಂದು ಕತ್ತಲೆ ಕೋಣೆಯ ಮಧ್ಯದಲ್ಲಿ ಏನು ಕಾಣದೆ ನಿಂತಿರುವಂತೆ ನಿಮಗೆ ಭಾಸವಾಗಬಹುದು... ಕತ್ತಲು ಕೇವಲ ಆ ಕೋಣೆಯ ಭಾಗವಾದರೂ ಆ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಆದರ ಸ್ಪಷ್ಠತೆ ಹೇಗೆ ಗೊತ್ತಾಗುವುದಿಲ್ಲವೋ ಹಾಗೆಯೇ ನಮ್ಮ ಮನದ ಯೋಚನೆ ನಮ್ಮನ್ನು ನಿಂದಿಸುವ ಆ ನಿಂದಕರ ಮೇಲೆ ಇರುತ್ತದೆ.. ನಾವು ಮಾನಸಿಕವಾಗಿ ಅದರಲ್ಲಿ ಎಷ್ಟು ಬೆರೆತುಹೋಗಿರುತ್ತೇವೆ ಅಂದರೆ ಅದು ನಮ್ಮ ದಿನನಿತ್ಯದ ಕಾರ್ಯ, ಕೆಲವೊಮ್ಮೆ ನಮ್ಮ ನಿದ್ದೆಯನ್ನು ಸಹ ಬಿಡುವುದಿಲ್ಲ!!!. ಕೇವಲ ಕತ್ತಲಲ್ಲಿದ್ದೇ ಎಲ್ಲಾ ವಿರ್ಮರ್ಶಿಸುವ ನಾವು ಆ ಕತ್ತಲಿನಿಂದಾಚೆ ಬೆಳಕಿನ ಅಸ್ತಿತ್ವ ಇದೆ ಎಂಬುದನ್ನು ಮರೆತುಬಿಡುತ್ತೇವಲ್ಲಾ, ಎಂತಹ ವಿಪರ್ಯಾಸ ನೋಡಿ!!. ಕತ್ತಲಲ್ಲಿ ಇಜ್ಜಲಿಗೆ ಹುಡುಕಾಡುವ ನಾವು ನಮ್ಮ ನಿಂದಕರ ವಿಷಯದಲ್ಲೂ ಹಾಗೇ ಮಾಡದೇ ಬೆಳಕಿನ ಹಾಗೆ ನಿಜ ವಿಷಯ ಅರಿತು ಅದಕ್ಕೆಲ್ಲಾ ಕಿವಿಗೊಡದಿದ್ದರೆ ಎಷ್ಟು ಚೆನ್ನ ಅಲ್ಲವೇ..?]


----------------------------------------


ಸುಂದರ ಮಹಿಳೆ

ಒಮ್ಮೆ ಬೌದ್ಧ ಧರ್ಮದ ಭಿಕ್ಷುಗಳಿಬ್ಬರು ನೆಡೆಯುತ್ತ ಸಾಗುತ್ತಿರಲು, ಅವರು ನೆಡೆಯುತ್ತಿದ್ದ ಹಾದಿಯಲ್ಲಿ ಒಂದು ಒಡೆದುಹೋದ ಸೇತುವೆ ಕಾಣಿಸಿತು. ತಮ್ಮ ಮುಂದಿನ ಹಾದಿ ಆ ಸೇತುವೆ ದಾಟಿಯೇ ಹೋಗಬೇಕಾಗಿದ್ದರಿಂದ ಅವರು ಮೆಲ್ಲನೆ ಅದರ ಮೇಲೆ ಸಾಗುತ್ತಿರಲು ಮಧ್ಯದಲ್ಲಿ ಅವರಿಗೆ ಒಬ್ಬ ಸುಂದರ ಮಹಿಳೆ ಕಾಣಿಸಿದಳು. ಅವಳು ಸಹ ಆ ಸೇತುವೆಯ ದಾಟಲು ಪ್ರಯತ್ನಪಡುತ್ತಿರಲು, ಅದು ಸಾಧ್ಯವಾಗದೆ ಮಧ್ಯದಲ್ಲೇ ಸಿಲುಕಿಬಿಟ್ಟಿದ್ದಳು... ಆ ಭಿಕ್ಷುಗಳಲ್ಲಿ ಒಬ್ಬರಾದ ಹಿರಿಯ ಭಿಕ್ಷುವು ಅವಳನ್ನು ಸ್ವತ: ಹೊತ್ತುಕೊಂಡೊಯ್ಯುವುದಾಗಿ ವಿನಂತಿಸಲು ಅವಳು ಸಮ್ಮತಿಸಿ, ಆ ಹಿರಿಯ ಭಿಕ್ಷುವು ಅವಳನ್ನು ಸುರಕ್ಷಿತವಾಗಿ ಇನ್ನೊಂದು ದಡ ಸೇರಿಸಿದರು. ಇದನ್ನು ನೋಡಿದ ಕಿರಿಯ ಭಿಕ್ಷುವಿಗೆ ಮನದಲ್ಲೇ ಉರಿಯ ಅನುಭವವಾಯಿತು. ತನ್ನ ಧರ್ಮದಲ್ಲಿ ಪರಸ್ತ್ರೀಯರನ್ನು ಮುಟ್ಟುವುದನ್ನ, ಸ್ನೇಹ ಬೆಳೆಸುವುದನ್ನ ವಿರೋಧಿಸಿರುವಾಗ ಈ ಹಿರಿಯ ಭಿಕ್ಷುವು ಅವಳನ್ನ ಹೊತ್ತೊಯ್ಯುವುದಾಗಿ ಕೇಳಿದ್ದಲ್ಲದೇ ಅವಳನ್ನು ಸ್ಪರ್ಶಿಸಿ, ಮುಟ್ಟಿ, ತನ್ನ ದೇಹದ ಮೇಲೆ ಹೊತ್ತು ಇನ್ನೊಂದು ದಡ ಸೇರಿಸಿದ್ದು ಏಕೆ ಎಂಬ ಪ್ರಶ್ನೆ ಮನದಲ್ಲಿ ಕಾಡುತ್ತಿದ್ದರೂ ಹಿರಿಯ ಭಿಕ್ಷುವಿಗೆ ಗೌರವ ನೀಡಬೇಕು ಎಂಬ ನಿಯಮದಲ್ಲಿ ಮರುಮಾತನಾಡದೆ ಸುಮ್ಮನೆ ಅವರೊಂದಿಗೆ ಹೊರಟನು. ಆ ಮಹಿಳೆ ಅವರಿಗೆ ಧನ್ಯವಾದ ಹೇಳಿ ತನ್ನ ಪಯಣ ಮುಂದುವರಿಸಲು, ಈ ಕಿರಿಯ ಭಿಕ್ಷುವಿನ ಮನ ಆಗಲೇ ಕುದಿಯಲು ಪ್ರಾರಂಭಿಸಿಯಾಗಿತ್ತು. ಅವನ ಮನವು ಈ ಹಿರಿಯ ಭಿಕ್ಷುವಿನ ಬಗ್ಗೆ ಇಲ್ಲದ ಕಲ್ಪನೆ ಮಾಡತೊಡಗಿತು, ಬೇಡದ ಭಾವನೆಗಳು ಬರತೊಡಗಿದವು... ಇವೆಲ್ಲದರ ನಡುವೆ ಆ ಹಿರಿಯ ಭಿಕ್ಷುವು ಸುಮ್ಮನೆ ನೆಡೆಯುತ್ತಿರಲು, ಇತ್ತ ಸಹನೆಯ ಕಟ್ಟೆಯೊಡೆದ ಕಿರಿಯ ಭಿಕ್ಷುವು "ನೀವು ನನಗೆ ಅಷ್ಟೆಲ್ಲಾ ಉಪದೇಶ ಮಾಡುತ್ತಿರಲ್ಲಾ, ಅದೇ ನಿಮಗೆ ಒಂದು ಸುಂದರ ಮಹಿಳೆ ಕಾಣಿಸಿದಾಗ ತಮ್ಮ ಧರ್ಮದ ತತ್ವವೆಲ್ಲಾ ಬಿಟ್ಟು, ತಾವೇ ಮೊದಲು ಹೋಗಿ ಅವಳನ್ನು ಮುಟ್ಟಿ, ಹೊತ್ತೊಯ್ದು ಆ ದಡ ಸೇರಿಸಿದರಲ್ಲ..., ಎಲ್ಲೊಯ್ತು ನಿಮ್ಮ ನಿಷ್ಠೆ, ಧರ್ಮ, ಅಚಾರಗಳೆಲ್ಲಾ...? ನಿಮ್ಮಿಂದ ಕಲಿಯಬೇಕಾದದ್ದು ಇದನ್ನೇನಾ...?" ಎಂದು ಹೇಳಲು, ಹಿರಿಯ ಭಿಕ್ಷುವು ಅದೇ ಸೌಮ್ಯಭಾವದಿಂದ ಈ ಕಿರಿಯ ಭಿಕ್ಷುವನ್ನು ಕೇಳಿದರು: "ನಾನೇನೋ ಹಲವು ಗಂಟೆಗಳ ಹಿಂದೆಯೇ ಅವಳನ್ನು ಇನ್ನೊಂದು ದಡ ಸೇರಿಸಿಬಿಟ್ಟು ಬಂದಿದ್ದೆ. ಆದರೆ ಅವಳು ಅಲ್ಲಿಂದ ನಿನ್ನ ಹೆಗಲ ಮೇಲೆ ಇನ್ನೂ ಪ್ರಯಾಣ ಮುಂದುವರಿಸಿರುವಂತೆ ಕಾಣಿಸುತ್ತಿದೆಯಲ್ಲಾ...?!!"


[ನೀತಿ: ಚೀನಾ ದೇಶದ ಹಳೆಯ ನೀತಿ ಕಥೆಯಾದ ಇದು ಪ್ರಸ್ತುತ ಕಾಲದಲ್ಲಿನ ನಮ್ಮ ಯೋಚನಾ ಲಹರಿಗಳ ಬಗ್ಗೆ (ಅಯಾ ಸಂದರ್ಭಕ್ಕನುಗುಣವಾಗಿ...) ಸವಿವರವಾಗಿ ಹೇಳುತ್ತಿದೆ. ನಾವು ಅನೇಕ ಸಲ ಕಿರಿಕಿರಿ ಮತ್ತು ಮನದ ನೆಮ್ಮದಿ ಕೆಡಿಸುವ ಸಂದರ್ಭಗಳನ್ನು/ಜನರನ್ನು ನೋಡುತ್ತಲೇ ಇರುತ್ತೇವೆ. ಒಮ್ಮೆ ಅವರು ನಮ್ಮ ನೆಮ್ಮದಿ ಕೆಡಿಸಿದರೆ, ಮತ್ತೊಮ್ಮೆ ನಮ್ಮ ಮನದಲ್ಲಿ ದ್ವೇಷ-ಅಸೂಯೆ ತರುವ ಮಟ್ಟಕ್ಕೂ ಹೋಗುತ್ತಾರೆ. ಆದರೆ ಈ ಕಥೆಯಲ್ಲಿ ಆ ಕಿರಿಯ ಭಿಕ್ಷು ಮಾಡಿದಂತೆ ನಾವು ಸಹ ಅ ಬೇಡದ ವಿಷಯ/ಯೋಚನೆಯನ್ನು ಮರೆಯದೇ/ಅಲ್ಲಿಯೇ ಬಿಟ್ಟುಬಿಡದೆ "ಸುಂದರ ಮಹಿಳೆ" ಯನ್ನು ಅವನು ಹೊತ್ತಂತೆ ನಾವು ಸಹ ನಮ್ಮ ಹೆಗಲ ಮೇಲೆ ಹೊತ್ತು ಕೊಂಡೊಯ್ಯುತ್ತಿರುತ್ತೇವೆ...!!!. ನಮ್ಮನ್ನು ಅವರು ಅನೇಕ ಸಲ ಅವಮಾನಿಸಿದರೂ, ಮಾನಸಿಕವಾಗಿ ಹಿಂಸಿಸಿದರೂ ಅದರಿಂದ ಹುಟ್ಟುವ ದ್ವೇಷ-ಅಸೂಯೆಯಂಬ "ಸುಂದರ ಮಹಿಳೆ" ಯ ಭಾರವನ್ನು ಹೆಗಲ ಮೇಲೆಯೇ ಕುಳಿಸಿಕೊಂಡಿರುತ್ತೇವೆ...! ಕಾರಣವೆನೆಂದರೆ ನಮಗೆ ಆ "ಸುಂದರ ಮಹಿಳೆ" ಯ ಭಾರವನ್ನು ಕೆಳಗೆ ಇಳಿಬಿಡುವ ಮನಸ್ಸು ಆ ಹೊತ್ತಿನಲ್ಲಿ ಬಂದಿರುವುದಿಲ್ಲವೇನೋ...!!. ನಮ್ಮ ಮನದಲ್ಲಿರುವ ಆ ದ್ವೇಷ-ಅಸೂಯೆ-ಕೋಪಕಾರಕ ವಸ್ತುವನ್ನ ನಾವು ಇನ್ನೊಂದು ದಡದಲ್ಲಿ ಇಳಿಸಿ ನಮ್ಮ ಜೀವನದ ಪಯಣ ಮುಂದುವರಿಸಿದರೆ ನಮ್ಮ ಮನ ಆ ನಿರುಪಯುಕ್ತ ಭಾರವ ಸುಮ್ಮನೆ ಹೊರುವುದನ್ನ ತಪ್ಪಿಸಬಹುದಲ್ಲವೇ...! ನಿಂದನೆ, ದ್ವೇಷ..., ಅವು ಸಮಯ ಮೀರಿದ ಮೇಲೂ ಮನದಲ್ಲಿ ಪೋಷಿಸುವುದರಿಂದ ಯಾರಿಗೆ ತಾನೇ ಲಾಭ ಹೇಳಿ...! ವಿನ: ಕಾರಣ ತಲೆಬಿಸಿ ಮಾಡಿಕೊಂಡಿದ್ದ ಬಿಟ್ಟು..!!]
ವಿನಯ್ ...
ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- 2

ನಾವು ನಮ್ಮ ಜೀವನವನ್ನ ಅನುಭವಗಳಿಂದಲೇ ರಚಿಸಿಕೊಳ್ಳುತ್ತೇವೆ....

ಕೂರ್ಮ, ಕಪ್ಪೆ ಮತ್ತು ಒಬ್ಬ ಸುಂದರ ಮಹಿಳೆ... ಈ ಕೆಳಗಿನ ಕಥೆಗಳ ಮೂಲಕ ನಮಗೆ ಜೀವನದ ಪಾಠ ತಿಳಿಸುತ್ತಾರೆ.

ಬನ್ನಿ, ಅವರಲ್ಲಿ ಕೂರ್ಮನ ಕಥೆಯನೊಮ್ಮೆ ಓದೋಣ...


ಕೂರ್ಮನ ಕಥೆ...

ಒಂದು ಕೂರ್ಮ ಪರಿವಾರವು ತಮ್ಮ ಎಲ್ಲಾ ಜನರೊಡಗೂಡಿ ಸಂಚಾರಕ್ಕೆ ಹೊರಟವು. ಬಹಳ ಮಂದ ಸಂಚಾರಿಗಳಾದ ಕೂರ್ಮಗಳು ಹೊರಡುವ ಸಿದ್ದತೆ ಮಾಡಿಕೊಳ್ಳೂವುದಕ್ಕೇ ೭ ವರುಷ ತೆಗೆದುಕೊಂಡವು! ಎಲ್ಲಾ ಸಿದ್ಧತೆಯಾದ ಮೇಲೆ ಕೂರ್ಮ ಪರಿವಾರವು ಸಂಚಾರಕ್ಕೆ ಹೊರಟಿತು. ಅಂತೂ ತಮ್ಮ ಸಂಚಾರದ ಎರಡನೆ ವರ್ಷದಲ್ಲಿ ಕೊನೆಗೂ ಒಂದು ಸೂಕ್ತ ಸ್ಥಳವನ್ನು ಹುಡುಕಿಕೊಂಡವು!!!

ಸುಮಾರು ೬-೭ ತಿಂಗಳು ಸ್ಥಳವನ್ನ ಸ್ವಚ್ಛಗೊಳಿಸಲು, ತಾವು ತಂದಿದ್ದ ಎಲ್ಲಾ ಸಾಮಾನು ಪೆಟ್ಟಿಗೆಯನ್ನು ತೆರೆದಿಡಲು ತಗೆದುಕೊಂಡವು. ಎಲ್ಲ ಜೋಡಿಸಿಡುತ್ತಿದ್ದ ವೇಳೆಯಲ್ಲಿ ತಾವು ಉಪ್ಪಿನ ಪೊಟ್ಟಣವ ತರುವುದನ್ನ ಮರೆತಿದ್ದನ್ನು ಆ ಕೂರ್ಮ ಗುಂಪಿನಲ್ಲಿದ್ದ ಹಿರಿಯ ಕೂರ್ಮನಿಗೆ ಹೊಳೆಯಿತು. ಮತ್ತೇನು..., ತಮ್ಮ ಸಂಚಾರವು ಆ ಉಪ್ಪಿನ ಪೊಟ್ಟಣವಿಲ್ಲದೆ ಏನು ಉಪಯೋಗವಿಲ್ಲ ಎಂದು ಅರಿತ ಆ ಪರಿವಾರವು ಬಹು ದೀರ್ಘ ಸಮಾಲೋಚನೆ ನೆಡೆಸಿ ತಮ್ಮ ಕುಟುಂಬದಲ್ಲಿದ್ದ ಸಣ್ಣ ಕೂರ್ಮ ಸದಸ್ಯನಿಗೆ ಉಪ್ಪಿನ ಪೊಟ್ಟಣವನ್ನು ತರುವ ಜವಬ್ದಾರಿಯನ್ನು ಕೊಡಲಾಯಿತು. ಆ ಸಣ್ಣ ಕೂರ್ಮನು ಆ ಪರಿವಾರದಲ್ಲೇ ಬಹುಬೇಗ ನೆಡೆಯಬಲ್ಲವನಾಗಿದ್ದರೂ ಹ್ಯಾಪು ಮೋರೆ ಹಾಕಿಕೊಂಡು, ಕಣ್ಣು ತುಂಬ ನೀರು ತುಂಬಿಸಿಕೊಂಡು, ತನ್ನ ಚಿಪ್ಪಿನೊಳಗೆ ಮುದುರಿಕೊಂಡನು. ನಂತರ ಎಲ್ಲರು ಪುಸುಲಾಯಿಸಿದ ಮೇಲೆ ಒಂದು ಷರತ್ತಿನ ಮೇಲೆ ಹೋಗಿ ಬರಲು ಆ ಸಣ್ಣ ಕೂರ್ಮನು ಒಪ್ಪಿಕೊಂಡನು. ಅದೇನೆಂದರೆ: ಅವನು ಹಿಂದಿರುಗಿ ಬರುವವರೆಗೂ ಯಾರು ಏನನ್ನು ತಿನ್ನಬಾರದು...! ಕೊನೆಗೂ ಎಲ್ಲರು ಈ ಷರತ್ತಿಗೆ ಒಪ್ಪಿದ ಮೇಲೆ ಆ ಸಣ್ಣ ಕೂರ್ಮನು ಅಲ್ಲಿಂದ ಉಪ್ಪು ತರಲು ಹೊರಟನು.

ಮೂರು ವರುಷ, ೪.., ೫.., ೬.., ಆ ಸಣ್ಣ ಕೂರ್ಮನ ಸುಳಿವೇ ಇಲ್ಲ!!! ೭ನೇ ವರ್ಷ ಅಗುತ್ತಿದ್ದಂತೆ ಕೂರ್ಮ ಪರಿವಾರದ ಹಿರಿಯ ಸದಸ್ಯನು ಹಸಿವು ತಾಳಲಾರದೇ, ಅಲ್ಲಿದ್ದ ಉಳಿದ ಸದಸ್ಯರಿಗೆ ತಾನು ಈಗ ಅಹಾರವನ್ನು ತಿನ್ನುವುದಾಗಿ ಹೇಳಿ, ಅಲ್ಲಿದ್ದ ಆಹಾರದ ಪೊಟ್ಟಣವನ್ನು ತೆರೆಯಲು, ಧಟ್ಟನೆ ಒಂದು ಮರದ ಹಿಂಬದಿಯಲ್ಲಿದ್ದ ಆ ಸಣ್ಣ ಕೂರ್ಮನು ಕಿರುಚುತ್ತ ಹೊರಬಂದು: "ನೋಡಿ, ನಾ ಹೇಳ್ಲಿಲ್ವೇನು! ನೀವ್ಯಾರೂ ನನಗೆ ಕಾಯೋದಿಲ್ಲಾ ಅಂತಾ...!. ಹೋಗಿ ನಾನು ಉಪ್ಪು ತರಲು ಹೋಗುವುದಿಲ್ಲ..." ಅಂತ ಹೇಳಿತು. ಆಗ ತಲೆ ತಿರುಗಿ ಬೀಳಬೇಕಾದ ಸ್ಥಿತಿ ಉಳಿದ ಕೂರ್ಮಗಳದಾಗಿತ್ತು!!


[ನೀತಿ: ನಮ್ಮಲ್ಲಿ ಅನೇಕರು ಇತರರು ಸಹ ನಮ್ಮಂತೆ ಇರಬೇಕು...ನಾವು ಬಯಸಿದಂತೆ ಇರಬೇಕು/ಕೇಳಬೇಕು ಎನ್ನುವ ಭಾರದಲ್ಲಿ ತಮ್ಮ ಸಮಯ/ಸಹನೆಯನ್ನು ವಿನ: ಕಾರಣ ವ್ಯರ್ಥ ಮಾಡಿಕೊಳ್ಳುತ್ತಿರುತ್ತಾರೆ. ಉಪಯೋಗವಿಲ್ಲದ ಕಾರ್ಯವಾದ ಈ ಬೇರೆಯವರ ಬಗೆಗಿನ ಆಲೋಚನೆ ನಮ್ಮ ಬಗ್ಗೆ ಸ್ವತ: ನಾವೇ ಮಾಡಿಕೊಂಡರೆ ಸ್ವಯಂ-ಉದ್ಧಾರವಾದರೂ ಆಗಬಹುದಲ್ಲವೇ...?]