ವಿನಯ್ ...
ನಾ ಕೇಳಿದ/ಓದಿದ ಕೆಲವು ನೀತಿ ಕಥೆಗಳು -- ೩

ಇಲ್ಲಿಯವರೆಗೂ ನೀವು ಕೂರ್ಮನ ಕಥೆಯ ಓದಿದಿರಿ, ಬನ್ನಿ ಮುಂದಿನ ಭಾಗವಾದ ಕಪ್ಪೆ ಮತ್ತು ಸುಂದರ ಮಹಿಳೆಯ ನೀತಿ ಕಥೆಯನ್ನು ಓದೋಣ...

ಕಪ್ಪೆಗಳು...

ಒಬ್ಬ ರೈತನು ತನ್ನೂರಿನಿಂದ ಪಟ್ಟಣಕ್ಕೆ ಬಂದು ಅಲ್ಲಿದ್ದ ಒಂದು ಉಪಹಾರ ಗೃಹದ ಮಾಲೀಕನ ಹತ್ತಿರ: "ನಾನು ನಿಮಗೆ ನೂರಾರು ಕಪ್ಪೆಯ ಕಾಲನ್ನು ಕೊಡುವೆನು... ನೀವು ಅದನ್ನು ಕೊಳ್ಳುವಿರಾ?" ಅನ್ನಲು, ಅದನ್ನು ಕೇಳಿದ ಉಪಹಾರ ಗೃಹದ ಮಾಲೀಕನಿಗೆ ಅಘಾತ! ತನ್ನನ್ನು ತಾನೇ ಸವರಿಸಿಕೊಂಡು "ನೀನು ಅಷ್ಟು ಕಪ್ಪೆಯ ಕಾಲನ್ನು ಎಲ್ಲಿಂದ ತರುವೆ?" ಎಂದು ಆ ರೈತನನ್ನು ಕೇಳಲು, ರೈತನು ಹೀಗೆ ಉತ್ತರಿಸಿದನು: "ನನ್ನ ಮನೆಯ ಹತ್ತಿರ ಒಂದು ಕೊಳವಿದೆ, ಅದರಲ್ಲಿ ಲಕ್ಷಾಂತರ ಕಪ್ಪೆಗಳಿವೆ... ಅವು ರಾತ್ರಿಯೆಲ್ಲಾ ಕೂಗುವುದರಿಂದ ನನ್ನ ನಿದ್ದೆ/ನೆಮ್ಮದಿ ಹಾಳಾಗಿದೆ.., ಅದಕ್ಕೆ ನಾ ಅವುಗಳನ್ನ ಹಿಡಿದು ತಂದು ನಿಮಗೆ ಮಾರುವೆ, ನೀವು ಯೋಗ್ಯ ಬೆಲೆ ನೀಡಿ ಕೊಂಡುಕೊಳ್ಳಿ..." ಎಂದನು. ಉಪಹಾರ ಗೃಹದ ಮಾಲೀಕನಿಗೆ ಆ ರೈತ ಹೇಳಿದ್ದು ಸರಿಯೆನಿಸಿ ೫೦೦ ರ ಲೆಕ್ಕದಲ್ಲಿ ಮುಂದಿನ ಹಲವು ವಾರಗಳ ಕಾಲ ತನ್ನ ಉಪಹಾರ ಗೃಹಕ್ಕೆ ಕಪ್ಪೆಗಳನ್ನು ಸರಬರಾಜು ಮಾಡಬೇಕು ಎಂಬ ಕರಾರು ಇಟ್ಟನು. ರೈತನು ಮಾಲೀಕನ ಮಾತಿಗೆ ಒಪ್ಪಿ ತನ್ನ ಊರಿಗೆ ಮರುಳಿದನು.


ಮುಂದಿನ ವಾರ ಮತ್ತೆ ಆ ಉಪಹಾರ ಗೃಹದ ಬಳಿ ಬಂದ ರೈತನ ಮುಖ ತೀರಾ ಸೆಪ್ಪಗಾಗಿತ್ತು. ನೂರಾರು ಕಪ್ಪೆಗಳನ್ನು ಹೊತ್ತು ತರುವೆ ಎಂದು ಹೇಳಿಹೋಗಿದ್ದ ಅವನ ಕೈಯಲ್ಲಿ ಕೇವಲ ಎರಡು "ಸೊಣಕಲು" ಕಪ್ಪೆಗಳು ಮಾತ್ರ ಇದ್ದವು. ಆ ಉಪಹಾರ ಗೃಹದ ಮಾಲೀಕನು ಕೂತುಹಲದಿಂದ "ಎನಪ್ಪಾ, ಏನೋ ರಾಶಿ-ರಾಶಿ ಕಪ್ಪೆಗಳನ್ನು ತರುತ್ತೇನೆ ಅಂದೆಯೆಲ್ಲಾ... ಎಲ್ಲಿ ನಿನ್ನ ಕಪ್ಪೆಗಳು..?" ಅಂತ ಕೇಳಲು, ರೈತನು "ಇಲ್ಲ ಸ್ವಾಮಿ, ನನ್ನ ಲೆಕ್ಕಚಾರ ತಪ್ಪಾಗಿತ್ತು, ಕೇವಲ ಎರಡು ಕಪ್ಪೆಯ ಶಬ್ದವನ್ನು ನಾನು ನೂರಾರು ಕಪ್ಪೆಗೆ ಹೋಲಿಸಿಬಿಟ್ಟಿದ್ದೆ.." ಎಂದು ಪೆಚ್ಚಾಗಿ ಹೇಳಿದನು....!


[ನೀತಿ: ನಿಮ್ಮ ಬಗ್ಗೆ ಹಲವು ಜನರು ಕೊಂಕು ಮಾತು ಅಥವಾ ನಿಂದನೆ/ಜರಿಯುವ ಕೆಲಸ ಮಾಡುತ್ತಿದ್ದರೆ, ಬಹುಶ: ಮೇಲಿನಂತೆ ಅವರು ಕೇವಲ "ಕೆಲವು" ಒಟಗುಟ್ಟುವ ಕಪ್ಪೆಗಳಾಗಿರಬಹುದು...!!!. ನಿಮ್ಮಲ್ಲಿರುವ ಕಷ್ಟಗಳನ್ನು ಸ್ವತ: ಹೋಲಿಕೆ ಮಾಡತೊಡಗಿದರೆ ಅದು ಒಂದು ಕತ್ತಲೆ ಕೋಣೆಯ ಮಧ್ಯದಲ್ಲಿ ಏನು ಕಾಣದೆ ನಿಂತಿರುವಂತೆ ನಿಮಗೆ ಭಾಸವಾಗಬಹುದು... ಕತ್ತಲು ಕೇವಲ ಆ ಕೋಣೆಯ ಭಾಗವಾದರೂ ಆ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಆದರ ಸ್ಪಷ್ಠತೆ ಹೇಗೆ ಗೊತ್ತಾಗುವುದಿಲ್ಲವೋ ಹಾಗೆಯೇ ನಮ್ಮ ಮನದ ಯೋಚನೆ ನಮ್ಮನ್ನು ನಿಂದಿಸುವ ಆ ನಿಂದಕರ ಮೇಲೆ ಇರುತ್ತದೆ.. ನಾವು ಮಾನಸಿಕವಾಗಿ ಅದರಲ್ಲಿ ಎಷ್ಟು ಬೆರೆತುಹೋಗಿರುತ್ತೇವೆ ಅಂದರೆ ಅದು ನಮ್ಮ ದಿನನಿತ್ಯದ ಕಾರ್ಯ, ಕೆಲವೊಮ್ಮೆ ನಮ್ಮ ನಿದ್ದೆಯನ್ನು ಸಹ ಬಿಡುವುದಿಲ್ಲ!!!. ಕೇವಲ ಕತ್ತಲಲ್ಲಿದ್ದೇ ಎಲ್ಲಾ ವಿರ್ಮರ್ಶಿಸುವ ನಾವು ಆ ಕತ್ತಲಿನಿಂದಾಚೆ ಬೆಳಕಿನ ಅಸ್ತಿತ್ವ ಇದೆ ಎಂಬುದನ್ನು ಮರೆತುಬಿಡುತ್ತೇವಲ್ಲಾ, ಎಂತಹ ವಿಪರ್ಯಾಸ ನೋಡಿ!!. ಕತ್ತಲಲ್ಲಿ ಇಜ್ಜಲಿಗೆ ಹುಡುಕಾಡುವ ನಾವು ನಮ್ಮ ನಿಂದಕರ ವಿಷಯದಲ್ಲೂ ಹಾಗೇ ಮಾಡದೇ ಬೆಳಕಿನ ಹಾಗೆ ನಿಜ ವಿಷಯ ಅರಿತು ಅದಕ್ಕೆಲ್ಲಾ ಕಿವಿಗೊಡದಿದ್ದರೆ ಎಷ್ಟು ಚೆನ್ನ ಅಲ್ಲವೇ..?]


----------------------------------------


ಸುಂದರ ಮಹಿಳೆ

ಒಮ್ಮೆ ಬೌದ್ಧ ಧರ್ಮದ ಭಿಕ್ಷುಗಳಿಬ್ಬರು ನೆಡೆಯುತ್ತ ಸಾಗುತ್ತಿರಲು, ಅವರು ನೆಡೆಯುತ್ತಿದ್ದ ಹಾದಿಯಲ್ಲಿ ಒಂದು ಒಡೆದುಹೋದ ಸೇತುವೆ ಕಾಣಿಸಿತು. ತಮ್ಮ ಮುಂದಿನ ಹಾದಿ ಆ ಸೇತುವೆ ದಾಟಿಯೇ ಹೋಗಬೇಕಾಗಿದ್ದರಿಂದ ಅವರು ಮೆಲ್ಲನೆ ಅದರ ಮೇಲೆ ಸಾಗುತ್ತಿರಲು ಮಧ್ಯದಲ್ಲಿ ಅವರಿಗೆ ಒಬ್ಬ ಸುಂದರ ಮಹಿಳೆ ಕಾಣಿಸಿದಳು. ಅವಳು ಸಹ ಆ ಸೇತುವೆಯ ದಾಟಲು ಪ್ರಯತ್ನಪಡುತ್ತಿರಲು, ಅದು ಸಾಧ್ಯವಾಗದೆ ಮಧ್ಯದಲ್ಲೇ ಸಿಲುಕಿಬಿಟ್ಟಿದ್ದಳು... ಆ ಭಿಕ್ಷುಗಳಲ್ಲಿ ಒಬ್ಬರಾದ ಹಿರಿಯ ಭಿಕ್ಷುವು ಅವಳನ್ನು ಸ್ವತ: ಹೊತ್ತುಕೊಂಡೊಯ್ಯುವುದಾಗಿ ವಿನಂತಿಸಲು ಅವಳು ಸಮ್ಮತಿಸಿ, ಆ ಹಿರಿಯ ಭಿಕ್ಷುವು ಅವಳನ್ನು ಸುರಕ್ಷಿತವಾಗಿ ಇನ್ನೊಂದು ದಡ ಸೇರಿಸಿದರು. ಇದನ್ನು ನೋಡಿದ ಕಿರಿಯ ಭಿಕ್ಷುವಿಗೆ ಮನದಲ್ಲೇ ಉರಿಯ ಅನುಭವವಾಯಿತು. ತನ್ನ ಧರ್ಮದಲ್ಲಿ ಪರಸ್ತ್ರೀಯರನ್ನು ಮುಟ್ಟುವುದನ್ನ, ಸ್ನೇಹ ಬೆಳೆಸುವುದನ್ನ ವಿರೋಧಿಸಿರುವಾಗ ಈ ಹಿರಿಯ ಭಿಕ್ಷುವು ಅವಳನ್ನ ಹೊತ್ತೊಯ್ಯುವುದಾಗಿ ಕೇಳಿದ್ದಲ್ಲದೇ ಅವಳನ್ನು ಸ್ಪರ್ಶಿಸಿ, ಮುಟ್ಟಿ, ತನ್ನ ದೇಹದ ಮೇಲೆ ಹೊತ್ತು ಇನ್ನೊಂದು ದಡ ಸೇರಿಸಿದ್ದು ಏಕೆ ಎಂಬ ಪ್ರಶ್ನೆ ಮನದಲ್ಲಿ ಕಾಡುತ್ತಿದ್ದರೂ ಹಿರಿಯ ಭಿಕ್ಷುವಿಗೆ ಗೌರವ ನೀಡಬೇಕು ಎಂಬ ನಿಯಮದಲ್ಲಿ ಮರುಮಾತನಾಡದೆ ಸುಮ್ಮನೆ ಅವರೊಂದಿಗೆ ಹೊರಟನು. ಆ ಮಹಿಳೆ ಅವರಿಗೆ ಧನ್ಯವಾದ ಹೇಳಿ ತನ್ನ ಪಯಣ ಮುಂದುವರಿಸಲು, ಈ ಕಿರಿಯ ಭಿಕ್ಷುವಿನ ಮನ ಆಗಲೇ ಕುದಿಯಲು ಪ್ರಾರಂಭಿಸಿಯಾಗಿತ್ತು. ಅವನ ಮನವು ಈ ಹಿರಿಯ ಭಿಕ್ಷುವಿನ ಬಗ್ಗೆ ಇಲ್ಲದ ಕಲ್ಪನೆ ಮಾಡತೊಡಗಿತು, ಬೇಡದ ಭಾವನೆಗಳು ಬರತೊಡಗಿದವು... ಇವೆಲ್ಲದರ ನಡುವೆ ಆ ಹಿರಿಯ ಭಿಕ್ಷುವು ಸುಮ್ಮನೆ ನೆಡೆಯುತ್ತಿರಲು, ಇತ್ತ ಸಹನೆಯ ಕಟ್ಟೆಯೊಡೆದ ಕಿರಿಯ ಭಿಕ್ಷುವು "ನೀವು ನನಗೆ ಅಷ್ಟೆಲ್ಲಾ ಉಪದೇಶ ಮಾಡುತ್ತಿರಲ್ಲಾ, ಅದೇ ನಿಮಗೆ ಒಂದು ಸುಂದರ ಮಹಿಳೆ ಕಾಣಿಸಿದಾಗ ತಮ್ಮ ಧರ್ಮದ ತತ್ವವೆಲ್ಲಾ ಬಿಟ್ಟು, ತಾವೇ ಮೊದಲು ಹೋಗಿ ಅವಳನ್ನು ಮುಟ್ಟಿ, ಹೊತ್ತೊಯ್ದು ಆ ದಡ ಸೇರಿಸಿದರಲ್ಲ..., ಎಲ್ಲೊಯ್ತು ನಿಮ್ಮ ನಿಷ್ಠೆ, ಧರ್ಮ, ಅಚಾರಗಳೆಲ್ಲಾ...? ನಿಮ್ಮಿಂದ ಕಲಿಯಬೇಕಾದದ್ದು ಇದನ್ನೇನಾ...?" ಎಂದು ಹೇಳಲು, ಹಿರಿಯ ಭಿಕ್ಷುವು ಅದೇ ಸೌಮ್ಯಭಾವದಿಂದ ಈ ಕಿರಿಯ ಭಿಕ್ಷುವನ್ನು ಕೇಳಿದರು: "ನಾನೇನೋ ಹಲವು ಗಂಟೆಗಳ ಹಿಂದೆಯೇ ಅವಳನ್ನು ಇನ್ನೊಂದು ದಡ ಸೇರಿಸಿಬಿಟ್ಟು ಬಂದಿದ್ದೆ. ಆದರೆ ಅವಳು ಅಲ್ಲಿಂದ ನಿನ್ನ ಹೆಗಲ ಮೇಲೆ ಇನ್ನೂ ಪ್ರಯಾಣ ಮುಂದುವರಿಸಿರುವಂತೆ ಕಾಣಿಸುತ್ತಿದೆಯಲ್ಲಾ...?!!"


[ನೀತಿ: ಚೀನಾ ದೇಶದ ಹಳೆಯ ನೀತಿ ಕಥೆಯಾದ ಇದು ಪ್ರಸ್ತುತ ಕಾಲದಲ್ಲಿನ ನಮ್ಮ ಯೋಚನಾ ಲಹರಿಗಳ ಬಗ್ಗೆ (ಅಯಾ ಸಂದರ್ಭಕ್ಕನುಗುಣವಾಗಿ...) ಸವಿವರವಾಗಿ ಹೇಳುತ್ತಿದೆ. ನಾವು ಅನೇಕ ಸಲ ಕಿರಿಕಿರಿ ಮತ್ತು ಮನದ ನೆಮ್ಮದಿ ಕೆಡಿಸುವ ಸಂದರ್ಭಗಳನ್ನು/ಜನರನ್ನು ನೋಡುತ್ತಲೇ ಇರುತ್ತೇವೆ. ಒಮ್ಮೆ ಅವರು ನಮ್ಮ ನೆಮ್ಮದಿ ಕೆಡಿಸಿದರೆ, ಮತ್ತೊಮ್ಮೆ ನಮ್ಮ ಮನದಲ್ಲಿ ದ್ವೇಷ-ಅಸೂಯೆ ತರುವ ಮಟ್ಟಕ್ಕೂ ಹೋಗುತ್ತಾರೆ. ಆದರೆ ಈ ಕಥೆಯಲ್ಲಿ ಆ ಕಿರಿಯ ಭಿಕ್ಷು ಮಾಡಿದಂತೆ ನಾವು ಸಹ ಅ ಬೇಡದ ವಿಷಯ/ಯೋಚನೆಯನ್ನು ಮರೆಯದೇ/ಅಲ್ಲಿಯೇ ಬಿಟ್ಟುಬಿಡದೆ "ಸುಂದರ ಮಹಿಳೆ" ಯನ್ನು ಅವನು ಹೊತ್ತಂತೆ ನಾವು ಸಹ ನಮ್ಮ ಹೆಗಲ ಮೇಲೆ ಹೊತ್ತು ಕೊಂಡೊಯ್ಯುತ್ತಿರುತ್ತೇವೆ...!!!. ನಮ್ಮನ್ನು ಅವರು ಅನೇಕ ಸಲ ಅವಮಾನಿಸಿದರೂ, ಮಾನಸಿಕವಾಗಿ ಹಿಂಸಿಸಿದರೂ ಅದರಿಂದ ಹುಟ್ಟುವ ದ್ವೇಷ-ಅಸೂಯೆಯಂಬ "ಸುಂದರ ಮಹಿಳೆ" ಯ ಭಾರವನ್ನು ಹೆಗಲ ಮೇಲೆಯೇ ಕುಳಿಸಿಕೊಂಡಿರುತ್ತೇವೆ...! ಕಾರಣವೆನೆಂದರೆ ನಮಗೆ ಆ "ಸುಂದರ ಮಹಿಳೆ" ಯ ಭಾರವನ್ನು ಕೆಳಗೆ ಇಳಿಬಿಡುವ ಮನಸ್ಸು ಆ ಹೊತ್ತಿನಲ್ಲಿ ಬಂದಿರುವುದಿಲ್ಲವೇನೋ...!!. ನಮ್ಮ ಮನದಲ್ಲಿರುವ ಆ ದ್ವೇಷ-ಅಸೂಯೆ-ಕೋಪಕಾರಕ ವಸ್ತುವನ್ನ ನಾವು ಇನ್ನೊಂದು ದಡದಲ್ಲಿ ಇಳಿಸಿ ನಮ್ಮ ಜೀವನದ ಪಯಣ ಮುಂದುವರಿಸಿದರೆ ನಮ್ಮ ಮನ ಆ ನಿರುಪಯುಕ್ತ ಭಾರವ ಸುಮ್ಮನೆ ಹೊರುವುದನ್ನ ತಪ್ಪಿಸಬಹುದಲ್ಲವೇ...! ನಿಂದನೆ, ದ್ವೇಷ..., ಅವು ಸಮಯ ಮೀರಿದ ಮೇಲೂ ಮನದಲ್ಲಿ ಪೋಷಿಸುವುದರಿಂದ ಯಾರಿಗೆ ತಾನೇ ಲಾಭ ಹೇಳಿ...! ವಿನ: ಕಾರಣ ತಲೆಬಿಸಿ ಮಾಡಿಕೊಂಡಿದ್ದ ಬಿಟ್ಟು..!!]
ವಿಭಾಗ: edit post
0 Responses

Post a Comment