ವಿನಯ್ ...
ಐದನೆ ವರ್ಷಕ್ಕೆ ಅವನ ಕಿವಿ ಮಂದವಾಗತೊಡಗಿದವು...,

ಒಂಬತ್ತನೆ ವರ್ಷಕ್ಕೆ ಪೂರ್ತಿ ಕಿವುಡು....!

ಬಾಲಕನ ತಂದೆ-ತಾಯಿ ಇಬ್ಬರು ಅನಕ್ಷರಸ್ಥರು... ತಮ್ಮ ಮಗನಿಗೆ ಏನೂ ಮಾಡಲು ಆಗದ ಪರಿಸ್ಥಿತಿ.. ಬಾಲಕನ ಅತ್ಮಸ್ಥೈರ್ಯ ಮಾತ್ರ ಮಂಡಿಉರಲಿಲ್ಲ. ಐದು ಕಿ.ಮಿ. ದೂರದ ಶಾಲೆಯಲ್ಲಿ ಪ್ರಾಥಮಿಕ ವಿದ್ಯಭ್ಯಾಸ, ಅದೂ ಅತ್ಯುತ್ತಮ ಅಂಕಗಳೊಂದಿಗೆ ರಾಜ್ಯ ಮಂಡಳಿಯ ೭ನೇ ತರಗತಿ ಪರೀಕ್ಷೆಯಲ್ಲಿ ಐದನೇ ರಾಂಕ್. ಇನ್ನೂ ಶ್ರಮಪಟ್ಟು ಓದಿ ೧೨ನೇ ತರಗತಿಯಲ್ಲಿ ರಾಜ್ಯಕ್ಕೆ ೭ನೇ ರಾಂಕ್....

ಕಾಲೇಜಿನ ೨ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅರ್.ಪಿ.ಎಸ್.ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿ ಕ್ಲೆರ್ಕ್-ಕಮ್-ಟೈಪಿಸ್ಟ್ ಹುದ್ದೆ ಪಡೆದು ತನ್ನ ವಿದ್ಯಭ್ಯಾಸದ ಜೊತೆಗೆ ಕೆಲಸವನ್ನು ಮಾಡಿ ಫೊಲಿಟಿಕಲ್ ಸೈನ್ಸ್ ನಲ್ಲಿ ವಿಶ್ವವಿದ್ಯಾಲಕ್ಕೆ ಪ್ರಥಮ ಸ್ಥಾನ... ಮುಂದೆ ಎನ್.ಇ.ಟಿ ಪರೀಕ್ಷೆಯಲ್ಲೂ ತೇರ್ಗಡೆ....

ಪಿ.ಎಚ್.ಡಿ ಮಾಡುವ ಸಂದರ್ಭದಲ್ಲೂ ಎಮ್.ಫಿಲ್ ಮತ್ತು ಎಮ್.ಎ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕಾರ್ಯ... ಅರ್.ಎ.ಎಸ್ ನಲ್ಲಿ ಕಾರ್ಯನಿರ್ವಹಿಸುತ್ತಲೇ ಯು.ಪಿ.ಎಸ್.ಸಿ ಗೆ ಪ್ರಯತ್ನ...

೧೫ ವರ್ಷಗಳ ನಿರಂತರ ಹೋರಾಟ.., ಎಲ್ಲಾ ಅಡೆತಡೆಗಳನ್ನು ಮೀರಿ ಕೊನೆಗೂ ಸಂದಿತು ಜಯ....

ಮಣಿರಾಮ್...

ಮಣಿರಾಮ್ ಶರ್ಮ...

ಇದೇ ಗುರುವಾರ, ತಾ: ೮-೧೦-೨೦೦೯ ರಂದು ತಮ್ಮನ್ನು ರಾಷ್ಟ್ರ ಸೇವೆಗೆ ಸೇರಿಸಿಕೊಳ್ಳಲಾಗಿದೆ ಎಂಬ ವರ್ತಮಾನ ತಿಳಿದಾಗ ಅದು ಅವರೊಬ್ಬರಿಗೆ ಸಿಕ್ಕ ಜಯವಾಗಿರಲಿಲ್ಲ... ಅದು ಇಡೀ ಅಂಗವಿಕಲ ಕುಲಕ್ಕೆ ಸಂದ ಜಯ ಸಹ ಅಗಿತ್ತು... ತಮ್ಮಂತಹವರನ್ನು ಸರ್ಕಾರದ ಅತ್ಯುನ್ನತ ಸೇವೆಗಳಲ್ಲಿ ಸೇರುವ ಅವಕಾಶದಿಂದ ವಿನಾ: ಕಾರಣ ದೂರ ಇಟ್ಟಿದಕ್ಕೆ/ತಡೆದಕ್ಕೆ ಸಂದ ಜಯ...

ಪತ್ರಿಕೆಗಳಲ್ಲಿ ನಿರಂತರ ಸುದ್ಧಿಯಾಗುತ್ತಿದ್ದರೂ ಕಾಣದ ಕಾರಣಗಳಿಂದ ಅವರ ಹೆಸರು ಅಯ್ಕೆ ಪ್ರಕ್ರಿಯೆಯಲ್ಲಿ ಬರುತ್ತಿರಲಿಲ್ಲ. ಇದಕ್ಕೆ ಮೂಲ ಕಾರಣ... ಅವರ ಕಿವುಡುತನ...!

ಎಲ್ಲಾ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೂ ಇದೇ ವರ್ಷದ ಆಗಸ್ಟ್ ತಿಂಗಳ ಮಧ್ಯ ವಾರದಲ್ಲಿ ಕರೆ ಬಂದಿದ್ದರೆ, ಮಣಿರಾಮ್ ಶರ್ಮ ರವರಿಗೆ ಸೆಪ್ಟೆಂಬರನಲ್ಲಿ ಈ ಸಂತಸದ ಸುದ್ಧಿ ಬಂದಾಗ ಇನ್ನೂ ಸುಮಾರು ೧ ತಿಂಗಳ ವರೆಗೂ ನೀವು ಅಪ್ಪೊಇಂಟ್ಮೆನ್ಟ್ ಗೆ ಕಾಯಬೇಕು ಎಂಬ ಕಹಿ ಸತ್ಯ... ಅದರೂ ಮಣಿರಾಮ್ ಇದರಿಂದ ನಿರಾಶರಾಗಿಲ್ಲ.

೧೯೯೫ ರಲ್ಲೇ ಅವರ ಐ.ಎ.ಎಸ್ ಪಯಣ ಪ್ರಾರಂಭವಾದರೂ, ಸೀಟ್ ಅಲಾಟ್ಮೆಂಟ್ ಅಗದಿರಲು ಒಂದೇ ಕಾರಣ... ಅವರ ಅಂಗವಿಕಲತೆಃ ಕಿವುಡುತನ... ಭಾಗಶ: ಕಿವುಡುತನ ಇದ್ದವರಿಗೆ ಮಾತ್ರ ಅವಕಾಶ ಇತ್ತೇ ಹೊರತು ಇವರಂತೆ ಪೂರ್ಣ ಕಿವುಡುತನ ಇದ್ದವರಿಗೆ ಅಲ್ಲಿ ಪ್ರಮುಖ್ಯತೆ ಇರಲಿಲ್ಲ..

ಅಂತೂ ಸುಮಾರು ೭.೫ ಲಕ್ಷ ರೂ. ವೆಚ್ಚದ ಶಸ್ತ್ರಚಿಕಿತ್ಸೆಯ ಸಹಾಯದಿಂದ ಅವರ ಕಿವಿಗಳು ಭಾಗಶ: ಕೇಳತೊಡಗಿದಾಗ ಇದರ ಸಹಾಯದಿಂದಲೇ ಅವರು ಒರಲ್ ಪ್ರಶ್ನೆ-ಉತ್ತರಗಳ ಸಂದರ್ಶನ ಎದುರಿಸಿದರು.

ಕೊನೆಗೂ ಜಯ ದಕ್ಕಿಸಿಕೊಂಡಿರುವ ಮಣಿರಾಮ್ ಶರ್ಮರವರು ನಮಗೆ ಒಂದಲ್ಲಾ ಒಂದು ರೀತಿಯಲ್ಲಿ ಸ್ಫೂರ್ತಿಯ ಸೆಲೆಯಾಗುತ್ತಾರೆ. ಅವರ ನಿಶ್ಚಲವಾದ ಪ್ರಯತ್ನದ ಫಲವೇ ಇಂದು ಅವರ ಐ.ಎ.ಎಸ್ ನಲ್ಲಿ ಇಂತಹ ಮಹತ್ತರವಾದ ಸಾಧನೆ ಮಾಡಲು ಸಾಧ್ಯವಾಗಿದ್ದು. ಸಾಧನೆ ಎಲ್ಲರಿಂದಲೂ ಸಾಧ್ಯ ಎಂಬುದೇ ನಾವು ಶರ್ಮರವರಿಂದ ಕಲಿಯಬೇಕಾದ ಸಾರಂಶ... ದೈಹಿಕ ವಿಕಲತೆ ಇದ್ದರೂ ತಮ್ಮ ಅತ್ಮಬಲದಿಂದಲೇ ಮಹತ್ಕಾರ್ಯಗಳಲ್ಲಿ ವಿಜಯಿಸುವ ಬಲ ಮಣಿರಾಮ್ ಶರ್ಮರವರಿಗೆ ಇರಬೇಕಾದರೆ ನಾವೇಕೆ ಹಿಂದುಳಿಯಬೇಕು...?

ಅದಕ್ಕೆ ಹೇಳುವುದಲ್ಲವೇ - "ಕೈ ಕೆಸರಾದರೆ ಬಾಯಿ ಮೊಸರು" ಅಂತ...
ವಿನಯ್ ...
ಚೆನ್ನೈಯಲ್ಲಿನ ಐ.ಟಿ ಕಂಪನಿಯೊಂದರ ಒಂದು ಸುಂದರ ದಿನ. ಸೂರ್ಯನ ಪ್ರಖಾರ ಬೆಳಕು ಪಾರದರ್ಶ ಗಾಜನ್ನು ದಾಟಿ ಬರುತ್ತ ಅಲ್ಲಿನ ಟೈಲ್ಸ್ ನೆಲವನ್ನ ಹೊಳೆಯುವಂತೆ ಮಾಡಿತ್ತು. ಕಂಪನಿಯ ಉದ್ಯೋಗಿಗಳು ಒಬ್ಬೊಬರಾಗಿ ಸ್ವೈಪ್ ಮಾಡುತ್ತ ಅಲ್ಲೇ ಹತ್ತಿರದಲ್ಲಿ ಇದ್ದ ಉಪಹಾರ ಮಂದಿರದ ಹತ್ತಿರ ಜಮೆಯಾಗತೊಡಗಿದರು. ನಿಶಬ್ಧವಾಗಿದ್ದ ಹಾಲಿನಲ್ಲಿ ಈಗ ಉದ್ಯೋಗಿಗಳ ಮಾತಿನ ಕಲರವ...

ಇದೆಲ್ಲರ ನಡುವೆ ನಮ್ಮ ರಾಜಾ ತನ್ನ ಪಾಡಿಗೆ ತನ್ನ ಕಾರ್ಯ ಮಾಡುತ್ತಿದ್ದನು. ಸುಮಾರು ಮೂವತ್ತರ ಹತ್ತಿರದ ವಯಸ್ಸು..., ಅದೇ ನೀಲಿ ಮತ್ತು ಬಿಳಿ ಸಮವಸ್ತ್ರ... ಸುತ್ತಲಿನ ವಾತಾವರ್ಣ ಉಲ್ಲಾಸಮಯವಾಗಿದ್ದರೂ ಇವನಿಗೆ ಬರಿ ತನ್ನ ಕಾರ್ಯದಲ್ಲಿ ಮಾತ್ರ ಧ್ಯಾನ... ಹೌದು.., ಇವನು ಅಲ್ಲಿ "ಹೌಸ್ ಕೀಪರ್"...! ಎಲ್ಲಾ ದಿನಗಳಂತೆ ತನಗೆ ಕೊಟ್ಟ ಕಾರ್ಯವನ್ನು -- ಅಂದರೆ ನೆಲವನ್ನು ಸ್ವಚ್ಚವಾಗಿ ಒರಿಸುವುದು.., ಕಿಟಕಿ ಗಾಜು ಮತ್ತು ಕುರ್ಚಿ-ಟೇಬಲ್ ಅನ್ನು ಒರಿಸುವುದು.., ನೀರಿನ ಗ್ಲಾಸನ್ನು ಸ್ವಚ್ಚವಾಗಿ ತೊಳೆಯುವುದು... ಮತ್ತು ಊಟ ಮುಗಿದ ಮೇಲೆ ಎಲ್ಲಾ ಕುರ್ಚಿ-ಟೇಬಲ್ ಗಳನ್ನು ಒಂದು ಮೂಲೆಯಲ್ಲಿ ಒಪ್ಪವಾಗಿ ಜೋಡಿಸಿಡುವುದು.. ಈ ಎಲ್ಲಾ ಕಾರ್ಯಗಳನ್ನು ಚಾಚು ತಪ್ಪದೇ ನಿರ್ವಹಿಸುವುದು ಅವನ ದಿನದ ಕೆಲಸವಾಗಿತ್ತು. ಅವನು ತನ್ನ ಕೆಲಸವನ್ನು ದೇವರಷ್ಟೇ ಪೂಜಿಸುತ್ತಿದ್ದನು. ಆ ಕಂಪನಿಯಲ್ಲಿ ಸಿಗುತ್ತಿದ್ದ ಅಲ್ಪ ಸಂಬಳ... ಇಬ್ಬರು ಮಕ್ಕಳು, ಮಡದಿಯ ಸಣ್ಣ ಸಂಸಾರ... ಚೆನ್ನೈಯಲ್ಲಿ ಅದು ಅಷ್ಟು ಸುಲಭವಾಗಿರಲಿಲ್ಲ...! ಆದರೂ ಅದು ತನ್ನ ಕೆಲಸದ ಮೇಲೆ ಎಲ್ಲೂ ಪರಿಣಾಮ ಬೀರದಂತೆ ನೋಡಿಕೊಂಡಿದ್ದ ಅವನು...

ಅಂದಿನ ಒಂದು ಸುತ್ತಿನ ಕೆಲಸ ಮುಗಿಸಿ ಒಂದು ಮೂಲೆ ತಲುಪಿದ ರಾಜಾ ತನ್ನ ಮಡದಿ ತುಂಬಿ ಕಳುಹಿಸಿದ್ದ ಟಿಫನ್ ಬಾಕ್ಸ್ ಅನ್ನು ಮೆಲ್ಲನೆ ತೆರೆಯುತ್ತ ಅದರಿಂದ ಒಂದೊಂದೇ ತುತ್ತನ್ನು ಬಾಯಿಗೆ ಇಡುತ್ತಿದ್ದನು. ಅವನಿಗೆ ಅಲ್ಲಿ ತುಂಬ ಜನ ಸ್ನೇಹಿತರಿದ್ದರೂ ಊಟದ ವೇಳೆಯಲ್ಲಿ ರಾಜಾ ತಾನೊಬ್ಬನೇ ಕುಳಿತು ಊಟ ಮಾಡುವ ಪರಿಪಾಠ... ಊಟ ಮಾಡುತ್ತಿದ್ದ ರಾಜಾನ ಮನಸ್ಸು ಇಂದು ಬೆಳಗ್ಗೆ ತನ್ನ ಮನೆಯಲ್ಲಿ ನೆಡೆದ ಘಟನೆಯನ್ನು ನೆನೆಯುತ್ತ ತೇಲಿ ಹೋಯಿತು...

ಮಾಮೂಲಿನಂತೆ ಬೆಳಗ್ಗೆ ಬೇಗನೆ ಎದ್ದು, ಎಂದಿನ ಕೆಲಸ ಕಾರ್ಯ ಮುಗಿಸಿ ಆಫೀಸಿಗೆ ಹೊರಡಲು ತಯಾರಾಗುತಿರಲು.., ರೂಮಿನಲ್ಲಿ ಮಲಗಿದ್ದ ತನ್ನ ಮಗನ ಹಣೆಯ ಮೇಲೆ ಸಿಹಿ ಮುತ್ತನ್ನು ಇಡಲು ಅತ್ತ ಧಾವಿಸಿದನು. ಇದು ರಾಜಾ ದಿನ ಆಫೀಸಿಗೆ ಕೆಲಸಕ್ಕೆ ಹೋಗುವ ಮೊದಲು ಮರೆಯದೇ ಮಾಡುತ್ತಿದ್ದ ಕೆಲಸವಾಗಿತ್ತು.

ಅಂದು ಏಕೋ ತನ್ನ ಮಗ ತಾನು ರೂಮು ತಲುಪುವ ಮುಂಚೆಯೇ ಎದ್ದು ಕುಳಿತು ತನಗಾಗಿ ಕಾಯುತ್ತಿದ್ದನು. ಹಣೆಗೆ ಮುತ್ತನ್ನಿತ್ತ ರಾಜಾ ಇನ್ನೇನು ಮೇಲೇಳಬೇಕು ಅಷ್ಟರಲ್ಲಿ ಅವನ ಮಗ ಅವನ ಶರ್ಟ್ ಜಗ್ಗಿ ಕೈ ಹಿಡಿದುಕೊಂಡನು. ರಾಜಾನಿಗೆ ಇದು ಅನಿರೀಕ್ಷಿತವೆನಿಸಿದರೂ ತನ್ನ ಮಗನನ್ನು ಏನೆಂದು ಕೇಳಿದನು. ಅವನು ಮಗನು ಮುಗ್ಧವಾಗಿ ತನಗೆ ಒಂದು ಕೇಕ್ ಬೇಕೆಂದು... ಅದು ಡೊಡ್ಡ ಅಳತೆಯದ್ದೇ ಆಗಬೇಕೇಂದು ಗೋಗೊರೆಯತೊಡಗಿದನು. ಪಾಪ ರಾಜಾನಿಗೆ ಏನು ಗೊತ್ತಿತ್ತು.., ಅದರ ಹಿಂದಿನ ದಿನವಷ್ಟೇ ಅವನ ಮಗ ತನ್ನ ಪಕ್ಕದ ಮನೆಯವರ ಮಗನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದು ಮತ್ತು ಅಲ್ಲಿನ ವಿಜ್ರಂಭಣೆಯನ್ನು ಕಂಡು ತಾನು ಅಷ್ಟೇ ದೊಡ್ಡ ಕೇಕ್ ತರಿಸಿ ತಿನ್ನಬೇಕು ಅಂದಿಕೊಂಡದ್ದು..!

ತಿಂಗಳ ಕೊನೆ... ಕೈಗಡ, ಸಾಲಗಳು ಬೇರೆ...! ಆದರೂ ಮುಖದ ಮೇಲೆ ಒಂದು ಸಣ್ಣ ನೋವು ತೋರಿಸದೆ ಇಂದೇ ನಿನಗೆ ಆಫೀಸಿನಿಂದ ಮನೆಗೆ ಬರುವಾಗ ಕೇಕು ತರುತ್ತೇನೆಂಬ ಆಣೆಯೊಂದಿಗೆ ಮನೆಯಿಂದ ಹೊರಟನು....

....................

ಜೋರನೆ ಸದ್ದಾಗಲು ಕೇಕಿನ ವಿಷಯದಲ್ಲೇ ಆಳವಾಗಿ ಜಾರಿ ಹೋಗಿದ್ದ ರಾಜಾ ತನ್ನ ನಿಜಸ್ಥಿತಿಗೆ ಮರುಳಿ ಬಂದನು. ಅಲ್ಲಿ ಅವನು ಊಟಕ್ಕೆ ಕುಳಿತಿದ್ದ ಹತ್ತಿರದಲ್ಲೇ ಒಂದು ೧೦ ಜನರ ಸಣ್ಣ ಗುಂಪು... ಸ್ವಚ್ಛ ಇಂಗ್ಲೀಷಿನಲ್ಲಿ ಮಾತನಾಡುತ್ತ ಅವರವರಲ್ಲೇ ಜೋಕ್ ಸಿಡಿಸುತ್ತ ಕಾಲ ಕಳೆಯುತ್ತಿದ್ದರು. ಅಂದು ಅವರು ತಮ್ಮ ಒಬ್ಬ ಸಹೋದ್ಯೋಗಿಯ ಹುಟ್ಟುಹಬ್ಬದ ಆಚರಣೆಯ ಸಲುವಾಗಿ ಅಲ್ಲಿ ಜಮೆಯಾಗಿದ್ದರು. ಕೆಲವೇ ಹೊತ್ತಿನಲ್ಲಿ ಅಂದು ಹುಟ್ಟುಹಬ್ಬ ಅಚರಿಸಿಕೊಳ್ಳುತ್ತಿದ್ದ ಅ ಯುವಕನ ಮುಖ ಅಲ್ಲಿದ್ದ ಕೇಕಿನ ಕ್ರೀಮಿನಿಂದ ಮುಚ್ಚಿಹೋಗಿತ್ತು... ವಿವಿಧ ಕೋನಗಳಿಂದ ಅವನ ಚಿತ್ರಗಳನ್ನು ತಗೆಯಲಾಯಿತು... ಅಂತೂ ಸುಮಾರು ಒಂದು ಘಂಟೆಯ ಎಲ್ಲಾ ಆಚರಣೆಗಳು ಮುಗಿದ ನಂತರ ಎಲ್ಲರೂ ಅಲ್ಲಿಂದ ಜಾಗ ಖಾಲಿ ಮಾಡಿದರು.

ಆಗಷ್ಟೆ ಊಟ ಮುಗಿಸಿದ್ದ ರಾಜಾ ತನ್ನ ಟಿಫನ್ ಬಾಕ್ಸ್ ಮುಚ್ಚಿಟ್ಟು, ಕೈ ತೊಳೆದುಕೊಂಡು ತನ್ನ ಎಂದಿನ ಕಾರ್ಯದಂತೆ ಮೋಪ್ ಅನ್ನು ಕೈಯಲ್ಲಿ ಹಿಡಿದು ಆಗಷ್ಟೆ ಪಾರ್ಟಿ ಮುಗಿದಿದ್ದ ಆ ಟೇಬಲ್ಲಿನ ಹತ್ತಿರ ಬಂದನು. ಚಲ್ಲಿದ್ದ ಉಳಿದ ತಿಂಡಿಯ ಚೂರು.., ನೆಲದ ಪೂರ ಚದುರಿಹೋಗಿದ್ದ ಕೇಕಿನ ತುಣುಕು, ಕ್ರೀಮನ್ನು ಒರಿಸುತ್ತ - ಒರಿಸುತ್ತ ಅವನ ಕಣ್ಣು ಯಾವಾಗ ಕಣ್ಣೀರಿನಿಂದ ತುಂಬಿಹೋಯಿತೋ... ಅವನಿಗೆ ತಿಳಿಯಲೇ ಇಲ್ಲ....!

ಪ್ರೇರಣೆ: ನನ್ನ ಮಿತ್ರ ಕಳುಹಿಸಿದ್ದ "ದ ಕೇಕ್" ಎಂಬ ಇ-ಮೇಲ್ ನಿಂದ...
ವಿನಯ್ ...
ರೂಟ್: ಮೆಜೆಸ್ಟಿಕ್ ನಿಂದ ಹೊಸಕೋಟೆ...

ಎಮ್.ಜಿ ರೋಡ್ ಗೆ ಕಾರ್ಯನಿಮಿತ್ತವಾಗಿ ಹೋಗಬೇಕಿದ್ದ ನಾನು ಪ್ಲಾಟ್ ಫಾರ್ಮ್ ನಂ: 17 ಕ್ಕೆ ಬಂದು ಬಸ್ಸಿಗೆ ಕಾಯುತ್ತಲಿದ್ದೆ. 20 ನಿಮಿಷವಾದರೂ ಬಸ್ಸಿನ ಸುಳಿವಿಲ್ಲ...! ಸರಿ, ಸುಮಾರು ಹೊತ್ತಿನ ನಂತರ ಒಂದು ಬ್ಲಾಕ್ ಬೋರ್ಡ್ ಬಸ್ ಅಂತೂ ನಿಧಾನವಾಗಿ ಅಗಮಿಸಿತು. ಅಷ್ಟರಲ್ಲಾಗಲೇ ಹಿಡಿಶಾಪ ಹಾಕುತ್ತಿದ್ದ ಜನ ಆ ಬಸ್ ಕಂಡ ಕೂಡಲೇ ಎಲ್ಲಾ ಮರೆತು "ಸೀಟ್ ರಿಸರ್ವೇಷನ್" ಮಾಡಲು ನುಗ್ಗ ತೊಡಗಿದರು ( ಹ:, ಅವರಲ್ಲಿ ನಾನು ಸೇರಿದ್ದೆ...!). ಕಿಟಕಿ ಪಕ್ಕದ ಸೀಟಲ್ಲಿ ಕುಳಿತಿದ್ದ ನನಗೆ, ಇಚೆ ಪ್ಲಾಟ್ ಫಾರ್ಮ್ ಹತ್ತಿರ ಒಬ್ಬ ವಯಸ್ಸದ ವ್ಯಕ್ತಿ ( 65-70 ರ ನಡುವಿನ ವಯಸ್ಸಿನವರು ಇರಬಹುದು..) "ಏನ್ ಸ್ವಾಮಿ... ಈ ಬಸ್ ರಿಚ್ಮಂಡ್ ಸರ್ಕಲ್ ಸ್ಟಾಪ್ ಗೆ ಹೋಗುತ್ತಾ?" ಅಂತ ಅಲ್ಲಿದ್ದ ಇತರ ಜನರನ್ನ ಕೇಳುತ್ತಿದ್ದನ್ನು ಕಾಣಿಸಿತು. ಅಲ್ಲಿದ್ದ ಒಬ್ಬ ವ್ಯಕ್ತಿ "ನೋಡ್ರಿ... ನಿಮ್ಮ್ ಏದುರಿಗೆ ನಿಂತಿರೋ ಬಸ್ ಹೋಗುತ್ತೆ ನೋಡಿ" ಎನಲು, ಸೀದಾ ಮೆಟ್ಟಿಲು ಹತ್ತಿ ಒಳಬಂದು, ಕಂಡಕ್ಟರ್ ಹತ್ತಿರವೇ ನೇರವಾಗಿ ಹೋಗಿ "ರೀ ಸ್ವಾಮಿ, ರಿಚ್ಮಂಡ್ ಸರ್ಕಲ್ ಸ್ಟಾಪ್ ಕೊಡ್ತಿರೇನ್ರಿ..?" ಅಂತ ಮತ್ತೆ ಅದನ್ನೇ ಕೇಳಿದರು. ಕಂಡಕ್ಟರ್ "ರೀ ಯಜಮಾನ್ರೇ, ಇದು ಬಿಷಪ್ ಕಾಟನ್ ಸ್ಕೂಲ್ ಹತ್ರ ಮಾತ್ರ ನಿಲ್ಲೋದು... ಬೇಕಾದ್ರೆ ಅಲ್ಲಿ ಇಳ್ಕೊಳ್ಳಿ" ಅಂತ ಉತ್ತರಿಸಿದನು. ಗೊಣಗುತ್ತ ಇತ್ತ ಹಿಂದಿನ ಸಾಲಿನ ಹತ್ತಿರ ಬಂದ ಅವರು ಮೊದಲು ನೋಡಿದ್ದೆ "ಹಿರಿಯ ನಾಗರಿಕರ" ಸೀಟನ್ನು...!. ಅಗಲೇ ಅಲ್ಲಿ ಒಬ್ಬ ಹಿರಿಯ ಮಹಿಳೆಯೊಬ್ಬರು ಕುಳಿತಿದ್ದರಿಂದ ಅವರಿಗೆ ಎನು ಹೇಳದೆ ಅವರ ಪಕ್ಕ ಕುಳಿತಿದ್ದ ಯುವಕನ ಕಡೆ ಗಮನ ಹರಿಯಿತು... ಯುವಕ ಬಹಳ ಕಷ್ಟಪಟ್ಟು (!!!) ಸೀಟ್ ಹಿಡಿದಿದ್ದ ಕಾರಣ ಇವರು ಮಾಡಿದ ಮನವಿಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ. "ಈಗಿನ ಕಾಲದ ಹುಡುಗರು ಡೊಡ್ಡೋರ ಕಂಡರೆ ಮರ್ಯಾದಿನೇ ಕೊಡೋಲ್ಲಾ..." ಅಂತ ಆ ಹಿರಿಯ ಮಹಿಳಾ ಪ್ರಯಾಣಿಕರಿಗೆ ಗೊಣಗುತ್ತ ಶುರು ಮಾಡಿದರು ನೋಡಿ ಪುರಾಣ.... ನಂತರ 20 ನಿಮಿಷ ನೆಡೆದ ವಾದ- ವಾಗ್ವಾದಗಳೇ ಈ ಕೆಳಗಿನ ಸಾಲುಗಳು...:

"ನೋಡಿ ಮೇಡಮ್, ನಾನ್ ಕೇಳಿದ್ದು ರಿಚ್ಮಂಡ್ ಸರ್ಕಲ್ ಹತ್ರ ಸ್ಟಾಪ್ ಕೊಡ್ತೀರಾ ಅಂತ... ಅವನು ನೋಡಿದ್ರೆ ಅಲ್ಲೇಲ್ಲೋ ನಿಲ್ಸ್ತಾನಂತೆ... ಇವರನ್ನ ಯಾರು ಕೇಳೋರೆ ಇಲ್ಲಾ ಇಲ್ಲಿ... ಅದೇ, ಬಸ್ ಚಾರ್ಜ್ ಜಾಸ್ತಿ ಮಾಡ್ಬೇಕಾದ್ರೆ ಕಣ್ಮುಚ್ಕೊಂಡು 2 ರೂ. ಹಾಕ್ತಾರಲ್ರೀ ಈ ಜನ...? ಇವರಗೆಲ್ಲಿಗ್ರೀ ಗೊತ್ತಾಗುತ್ತೆ ನಮ್ಮ್ ಕಷ್ಟ?" ಅಂತ ಹೇಳಲು, ಆ ಮಹಿಳೆ ಇವರ ಮಾತಿಗೆ ಕಾಯುತ್ತಿದ್ದರೋ ಏನೋ ಎಂಬುವಂತೆ " ಹೌದ್ ಕಣ್ರೀ, ಇವರೆಲ್ಲಾ ಬರಿ ಇದೇ ಕೆಲಸಕ್ಕೆ ಲಾಯಕ್ಕು, ಹತ್ತ್-ಹದಿನೈದು ಸಾವಿರ (???) ತಿನ್ನೋರಿಗೆ ಏನ್ ಗೊತ್ತಾಗುತ್ತೆ ಬಿಡಿ...!"

ಈ ಕಡೆ ಇವರು "ನಾವ್ ಜಾತಿ ಬ್ರಾಹ್ಮಣ್ರು ( ಈ ವಿಷಯ ಮಧ್ಯದಲ್ಲಿ ಎಕೆ ಬಂತೋ ನಾ ಕಾಣೆ..!) ಏಲ್ಲದಕ್ಕೂ ಸುಮ್ನಿದ್ದೇ ಕಣ್ರೀ ಇವತ್ತು ನಮಗೆ ಹೀಗಾಗಿರೋದು... ಎಲ್ಲಾ ಬರಿ ಆ ಜಾತಿ-ಈ ಜಾತಿ ( ವಿಷಯ ದಾರಿ ಬಿಟ್ಟು ಬೇರೆಡೆ ಸಾಗಿತ್ತು...) ಅಂದ್ಕೊಂಡೇ ಎಲೆಕ್ಷನ್ ಗೆದ್ದು ನಂತರ ತಮ್ಮ್ ಜನಕ್ಕೆ ಮಾತ್ರ ಉದ್ಧಾರ ಮಾಡ್ತಾರ್ರಿ ಅವರು..." (ಇನ್ನೊಂದಿಷ್ಟು ಬೈಗುಳ ಸೇರಿಸಿ...) ಅನ್ನಲು, ಹಿಂದಿನಿಂದ ಕಂಡಕ್ಟರ್ "ಯಜಮಾನ್ರೇ, ಟಿಕೆಟ್ ತಗೋಳ್ರಿ" ಅಂತ ಕೂಗಿದ... "ಏ, ನನ್ದು ಪಾಸ್ ಕಣಯ್ಯ..." ಅಂತ ಇವರು ಹೇಳಲು, "ರೀ ಸ್ವಾಮಿ, ಪಾಸ್ ಅಂತ ಬಾಯಲ್ಲಿ ಹೇಳದ್ರೆ ಆಯ್ತೇನ್ರಿ, ಪಾಸ್ ತೋರ್ಸಿ" ಅಂತ ಕಂಡಕ್ಟರನ ಉತ್ತರ ಬಂತು. ಮುಂಚೆಯೇ ತಮ್ಮ ಮಾತುಗಾರಿಕೆಯಲ್ಲೇ ಆವೇಶಗೊಂಡಿದ್ದ ಇವರು " ಹೋಗಯ್ಯ ತೋರ್ಸೊದಿಲ್ಲಾ... ಏನು ಪಾಸ್ ಇರೋದಕ್ಕೆ ಪ್ರೂಫ್ ಬೇಕಾ? ಬಾಯಲ್ಲಿ ಹೇಳದ್ರೆ ಸಾಲೋಲ್ವೇನು?. ನೀನು ಕಂಡಕ್ಟರ್ ಅನೋದಕ್ಕೆ ನಾವ್ ಏನಾದ್ರು ಪ್ರೂಫ್ ಕೇಳುದ್ರಾ.." ಅಂತ ದಬಯಿಸಿ ಬಿಡುವುದೇ..! ಕಂಡಕ್ಟರ್ ಸಹ ತಾನೇನು ಕಮ್ಮಿ ಅಂತ "ಸರಿ ಕಣಯ್ಯ ನೀನು ಪಾಸ್ ತೋರ್ಸ್ಲಿಲ್ಲ ಅಂದ್ರೆ ಈ ಬಸ್ ಮುಂದೆ ಹೇಗೆ ಹೋಗುತ್ತೆ ಅಂತ ನಾನು ನೋಡ್ತೇನೆ" ಅಂತ ಹಠ ಹಿಡಿದು ಡ್ರೈವರ್ ಗೆ "ಲೇ, ಬಸ್ ನ ಸಲ್ಪ ಸೈಡ್ ಗೆ ಹಾಕಪ್ಪ... ಇಲ್ಲಿ ಇವನಿಗೆ ಎನೋ ತೊಂದರೆಯಂತೆ..." ಅಂತ ಕೂಗಿದ. ಅಗಲೇ ಬಹಳಷ್ಟು ಸಮಯವಾಗಿದ್ದರಿಂದ ಉಳಿದ ಪ್ರಯಾಣಿಕರು ಅವರಿಗೆ "ರಿ ಸ್ವಾಮಿ, ನಿಮಗೆ ಪಾಸ್ ತೋರ್ಸೊಕೆ ಇಷ್ಟ ಇಲ್ಲ ಅಂದರೆ ಬಸ್ಸಿಂದ ಇಳಿದು ಆಟೋ ನಲ್ಲಿ ಹೋಗ್ರಿ, ಇಲ್ಲ್ ಯಾಕೆ ನಿಂತ್ಕೊಂಡಿದ್ದೀರಾ?" ಅಂತ ದಬಾಯಿಸತೊಡಗಿದರು. ಇದುವರೆಗೆ ತಮ್ಮ ವಾಕ್-ಚಾತುರ್ಯವನ್ನು ಹೊಗಳುತ್ತಾರೆ(?!?) ಎಂದು ಕಾಯುತ್ತಿದ್ದ ಅವರಿಗೆ ಇದರಿಂದ ಸಲ್ಪ ಶಾಕ್ ಅದಂತಾಯಿತು ಅನಿಸುತ್ತೆ...! ಮುಖವನ್ನು ಸಣ್ಣಗೆ ಮಾಡಿಕೊಂಡು ಬೇರೇನು ಮಾತನಾಡದೆ ಸುಮ್ಮನಾದರು. ಅಂತು ಬಸ್ ಹೊರಡಲು ಅಣಿಯಾಗುತ್ತಿದ್ದಂತೆ ಈ ಕಡೆ ಕೆಲ ಹೊತ್ತು ಸುಮ್ಮನಿದ್ದ ನಮ್ಮ ಮಹಾಶಯರು ಈಗ ಹೊಸ ಸಮಾಚಾರ ಹೊರ ತಗೆದರು. ಈಗ ಅವರ ಗಮನ ವಿಧಾನ ಸೌಧದ ಮೇಲೆ ಹೋಯಿತು. ಅವರ ಮಾತು ಕೇಳುವ ಟಾರ್ಗೆಟ್ ಮತ್ತೆ ಅದೇ ಹಿರಿಯ ಮಹಿಳೆ...! "ನೋಡಿ ಮೇಡಮ್, ಈ ರಾಜಕೀಯದವರು ತಮ್ಮ ಖರ್ಚಿಗೆ ಬೇಕಂದರೆ ಅದು-ಇದು ಹೇಳಿ ಜಾಸ್ತಿ ಮಾಡ್ಕೋಳ್ತಾರೆ (ಇದು ಇತ್ತೀಚಿಗಷ್ಟೆ ನೆಡೆದಿದ್ದ ಮಂತ್ರಿಗಳ ವಿವಿಧ ಭತ್ಯಗಳ ಏರಿಕೆ ಬಗ್ಗೆ ಅವರಿಗಿದ್ದ ಕೋಪ ಇಂದು ಹೊರಬಂದಿತ್ತು ಅನಿಸುತ್ತೆ...). ಡೀಸಲ್ ಬೆಲೆ ಒಂದ್ಚೂರು ಜಾಸ್ತಿಯಾಯಿತು ಅಂದ್ರೆ 2-3 ರೂ ಜಾಸ್ತಿ ಮಾಡ್ತರಲ್ಲಾ..., ಅದೇ ಕಮ್ಮಿ ಆದ್ರೆ ಏಲ್ಲಿ..., ಬೆಲೆ ಇಳಿಸ್ತಾರೇನು...? ಇವರ ಮನೆಗೆ(... ಹಾಗೆ ಇನ್ನುಳಿದ ವಸ್ತುಗಳ ಮೇಲೆ, ಕಾಣದ ಅವರ ಕುಟುಂಬದವರಿಗೂ...!) ಬೆಂಕಿ ಹಾಕಾ.." ಅಂತ ಬೈಗುಳದ ಸುರಿಮಳೆ... ಆ ಹಿರಿಯ ಮಹಿಳೆಯೂ ಸಹ ಅವರ ವಾದದಲ್ಲಿ ಬಾಯಿ ತೂರಿಸಿ " ಹೌದು ಯಜಮಾನ್ರೇ, ಬರಿ ತಿನ್ತಾನೇ ಇರ್ತಾರೆ ಇವರು" ಅಂತ ಹೇಳಲು, ಇತ್ತ ಇವರಿಗೆ ಇನ್ನಷ್ಟು ಹುರುಪು...! ಸರಿ ಮತ್ತೆ ಮಾತಿನ ಹರಿವು "ಮಹಾತ್ಮ ಗಾಂಧಿ" ಯವರ ಬಳಿ ಸಾಗಿತು. " ಮೇಡಮ್, ಮೊನ್ನೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ... ಅಲ್ಲಿ ಯಾವೊನೋ ತಲೆ ಕೆಟ್ಟವನು " ಸಂಜಯ್ ಗಾಂಧಿ ಗಾಂಧಿ ಮಗ ಅಂತೆ.." ಅಂತ ಅಲ್ಲಿ ನೆರೆದಿದ್ದ ನಮ್ಮೆಲ್ಲರಿಗೆ ಶಾಕ್ ನೀಡಿದರು. ಕೆಲವರು ಇದನ್ನು ಕೇಳಿ ಮುಸಿ-ಮುಸಿ ನಗಲು ಪ್ರಾರಂಭಿಸಿದರು. ಗಾಂಧಿ ಸ್ಪೆಲ್ಲಿಂಗ್ ಅನ್ನು ಬಿಡಿಸಿ ಹೇಳುತ್ತಾ ಅಲ್ಲಿದ್ದ ಸಮಸ್ತರ "ಇಂಗ್ಲೀಷ್ ಭಾಷ ಪಾಂಡಿತ್ಯ" ವನ್ನ ಇನ್ನೂ ಹೆಚ್ಚಿಸಿದರು...! (ಹಾಗ್ ಅಂದ್ಕೋಳ್ತೀನಿ.. ಎಕೆಂದರೆ ಅಲ್ಲಿದ್ದ ಕೆಲ ಹುಡುಗರು ಇವರು ಸ್ಟ್ರೆಸ್ ಮಾಡಿ ಹೇಳುತ್ತಿದ್ದನ್ನ ನೋಡಿ "ಬೊಂಬಾಟ್ ಇಂಗ್ಲೀಷ್ ಮಗಾ" ಅಂತ ಹೇಳಿ ನಗತೊಡಗಿದರು..). ಬಸ್ ಅಗಲೇ ಕಂಠೀರವ ಒಳಾಂಗಣ ಕ್ರೀಡಾಂಗಣ ಬಳಿ ತಲುಪಿತ್ತು. ಆ ಹಿರಿಯ ಮಹಿಳೆ " ಸ್ವಾಮಿ, ನಿಮ್ಮ ಸ್ಟಾಪ್ ಹತ್ರ ಬಂತು ನೋಡಿ, ವಿಟ್ಟಲ ಮಲ್ಯ ಅಸ್ಪತ್ರೆ ಹತ್ರ ಇಳ್ಕೊಳ್ತಿರೇನು?" ಅಂತ ಕೇಳಲು, ಇವರು "ಇಲ್ಲ, ಅಲ್ಲಿಂದ ದೂರ ಅಗುತ್ತೆ ಕಣ್ರೀ.., ಸರ್ಕಲ್ ಹತ್ರಾನೇ ಇಳಿಬೇಕು.." ಅಂದರು.

ಅಶ್ಚರ್ಯದ ವಿಷಯವೆನೆಂದರೆ ಆಟೋಮೆಟಿಕ್ ಡೋರ್ ಸೌಲಭ್ಯ ಹೊಂದಿದ್ದ ಆ ಬಸ್ಸಿನಲ್ಲಿ ಇವರು ಇಷ್ಟ ಬಂದಲ್ಲಿ ಹೇಗೆ ಇಳಿಯಲು ಸಾಧ್ಯ ಅಂತ ನನಗೆ ಅನಿಸತೊಡಗಿದ್ದು...! ಬಸ್ ವಿಟ್ಟಲ ಮಲ್ಯ ಅಸ್ಪತ್ರೆ ಸ್ಟಾಪ್ ದಾಟಿದರೂ ಇನ್ನೂ ಸುಮ್ಮನಿದ್ದ ಈ ಮಹಾಶಯರು ಅದು ರಿಚ್ಮಂಡ್ ಸರ್ಕಲ್ ದಾಟುತ್ತಿದ್ದಂತೆ ಗಟ್ಟಿಯಾಗಿ " ಲೇ ಡ್ರೈವರ್ರೂ, ಸಲ್ಪ ಬಸ್ ನಿಲ್ಸಪ್ಪಾ..." ಅಂತ ಕೂಗಲು ತೊಡಗಿದರು. ಈ ಹಿಂದೆ ಅವರ ಭಾಷಣವನ್ನು ಅನ್ಯ ದಾರಿ ಇಲ್ಲದೇ ಕೇಳುತ್ತಿದ್ದ ಜನರು ಈಗ ಗೊಳ್ಳನೆ ನಗಲು ಪ್ರಾರಂಭಿಸಿದರು. ಡ್ರೈವರು ಸಹ ಈ ಮಹನೀಯರ ಮಾತನ್ನು ಕೇಳು-ಕೇಳಿಸದಂತೆ ಮಾಡಿ ಬಸ್ಸನ್ನು ಸಲ್ಪ ಜೋರಾಗಿಯೇ ಓಡಿಸಲು ಪ್ರಾರಂಭಿಸಿದರು. ಎರಡು-ಮೂರು ಬಾರಿ ಹಾಗೇ ಗಟ್ಟಿಯಾಗಿ ಕೂಗಿದರೂ ಅಷ್ಟರಲ್ಲೇ ಬಸ್ ಬಿಷಪ್ ಕಾಟನ್ ಸ್ಟಾಪ್ ತಲುಪಿಯಾಗಿತ್ತು. ಡೋರ್ ಓಪನ್ ಆಗುತ್ತಿದ್ದಂತೆ ದಗ್ಗನೆ ಇಳಿದು "ಲೇ ಡ್ರೈವರ್ರು, ನಿನ್ನನ್ನು ಮತ್ತೆ ಬಸ್ನಲ್ಲಿ ಬಂದಾಗ ನೋಡ್ಕೊಳ್ಳ್ತೀನೋ.." ಅನ್ನಲು ಹಿಂದಿನಿಂದ ಒಬ್ಬನು "ನೀವ್ ಮತ್ತೆ ಬಂದರೆ ಈ ಬಸ್ ಮುಂದೆ ಹೋಗೋಲ್ರಿ..!" ಅಂತ ಕಿಚಾಯಿಸಿದ. ಮತ್ತೆ ಏಲ್ಲಾರು ನಗತೊಡಗಿದರು. ಇದರಿಂದ ಸಲ್ಪವು ತಲೆಕೆಡಿಸಿಕೊಂಡಂತೆ ಕಾಣದಿದ್ದ ಅವರು (ಅವನು ಹೇಳಿದ್ದನ್ನು ಕೇಳಿಸಿ ಕೊಂಡರೋ, ಇಲ್ಲವೋ!) ಮತ್ತೆ ಆ ಡ್ರೈವರಿಗೆ " ನೀನೊಬ್ಬ ದಾರಿ ತಪ್ಪಿದ ಮಗ ಕಣೋ" ಅಂದು ರಸ್ತೆಯ ಆ ಬದಿಗೆ ತೆರಳಲು, ಮತ್ತೆ ಬಸ್ಸಿನಲ್ಲಿ ನಗುವಿನ ಕಲರವ.... ಅಂತೂ ಆ ದಿನ ಬೆಳಗ್ಗೆ ನಮಗೆ ಅವರಿಂದ ಒಂದು ನಗೆಯ ಔತಣ ಸಿಕ್ಕಿತೆನ್ನಿ...
ವಿನಯ್ ...
ಸ್ಮಿತ ತನ್ನ ಜಿ-ಮೇಲ್ ಐಡಿಗೆ ಲಾಗಿನ್ ಆಗಿ ತನಗೆ ಬಂದ ಇಮೇಲ್ಸ್ ಚೆಕ್ ಮಾಡುತ್ತಿದ್ದಳು. ಮಾಟ್ರಿಮೋನಿ, ಜಾಬ್-ಪ್ರೊಫೈಲ್ ಮೇಲ್ಸ್ ನ ಒಂದೊಂದಾಗಿ ಡಿಲೀಟ್ ಮಾಡುತ್ತ ಮುಂದುವರಿಯುತ್ತಿದ್ದಳು. ಫ್ರೆಂಡ್ಸ್ ಫಾರ್ವರ್ಡ್ ಮಾಡಿದ್ದ ಮೇಲ್ಸ್ ಗಳನ್ನ ಫೋಲ್ಡರ್ ಗೆ ಹಾಕುತ್ತಾ ಉಳಿದ ಮೇಲ್ ಗಳ ಮೇಲೆ ಕಣ್ಣಾಡಿಸುತ್ತಿದ್ದಾಗ ಕಾಣಿಸಿತು ಸಂಜಯನ ಮೇಲ್ಸ್. ಅವನು ಸ್ಮಿತಳಿಗೆ ಮಾಮೂಲಿಯಾಗಿ ಮೇಲ್ ಫಾರ್ವರ್ಡ್ ಮಾಡುತ್ತಿದ್ದನಾದರೂ ಸ್ಮಿತಳಿಗೆ ಅವನ ಮೇಲ್ಸ್ ಓದುವುದು ಅಚ್ಚುಮೆಚ್ಚು... ಓದಲು ತುಂಬ ಚೆನ್ನಾಗಿರುತ್ತಿದ್ದವು. ಅವಳಿಗೆ ಅಶ್ಚರ್ಯವೆನೆಂದರೆ ಇಷ್ಟು ಚೆನ್ನಾಗಿರುವ ಮೇಲ್ಸ್ ಎಲ್ಲಿಂದ ಹುಡುಕಿ ಕಳುಹಿಸುತ್ತಿದ್ದ ಎಂದು....! ಕೆಲವು ಇಮೇಲ್ಸ್ ಎಷ್ಟು ಬಾರಿ ಓದಿದರೂ ಸಾಲದು ಎನ್ನುವಂತಿದ್ದವು. ಅಂತಹವನ್ನ ಪ್ರಿಂಟ್-ಓಟ್ ತೆಗೆದಿರಿಸಿಕೊಂಡಿರುತ್ತಿದ್ದಳು ಸ್ಮಿತ. ಸಂಜಯ್ ಅವಳು ಪ್ರೀತಿಸುತ್ತಿದ್ದ ಹುಡುಗ....

ಇಂದು ಮೇಲ್ ಚೆಕ್ ಮಾಡುತಿರಬೇಕಾದರೆ ಒಂದು ಸಣ್ಣ ಲವ್ ಸ್ಟೋರಿ ಅಂತ ಹೆಸರಿದ್ದ, ಸಂಜಯ್ ಕಳುಹಿಸಿದ್ದ ಮೇಲ್ ಕಂಡಳು... ಕ್ಲಿಕ್ ಮಾಡಿ ಅದನ್ನು ಓದಲು ಪ್ರಾರಂಭಿಸಿದಳು. ಮನಮುಟ್ಟುವಂತಿತ್ತು ಅದರ ಸಾರಾಂಶ. ಏಕೋ ಆ ಎರಡು ಸಾಲು:

"The girl butterfly had died inside the flower.....

She stayed there all night......so that early in the morning......as
soon as she sees him.......she can fly to him and tell him how much she
loved him........ "


ಅವಳಿಗೆ ಅದು ತುಂಬ ಹಿಡಿಸಿಬಿಟ್ಟಿತು. ಅದನ್ನೆ ಹಾಗೆ ಓದುತ್ತ ಕುಳಿತಿದ್ದಾಗ ಜಿ-ಟಾಲ್ಕ್ ನಲ್ಲಿ ಸಂಜಯನ ಐಡಿ ಅಕ್ಟಿವೇಟ್ ಅಗಿದ್ದನ್ನು ಕಂಡಳು... ಜಿ-ಟಾಲ್ಕ್ ಓಪನ್ ಮಾಡಿ "ಹಾಯ್.." ಎಂದು ತಾನೇ ಚಾಟ್ ಶುರುಮಾಡಿದಳು....

ಅತ್ತ ಕಡೆಯಿಂದ ಬಂದಿತು ಉತ್ತರ: "ಹೆಲೋ.."

"ಆ ಲವ್ ಸ್ಟೋರಿ ಮೇಲ್ ಚೆನ್ನಾಗಿತ್ತು ಕಣೋ.."

"ಹೌದಾ, ಓಕೆ...." ಆ ಕಡೆಯಿಂದ...

"ಅದರಲ್ಲೂ ಲಾಸ್ಟ್ ಎರಡು ಲೈನ್ ತುಂಬ ಚೆನ್ನಾಗಿತ್ತು ಕಣೋ, ಓದಿ ತುಂಬ ಬೇಜಾರಾಯ್ತು...!"


"ಪೆದ್ದಿ, ಅದಕೆಲ್ಲಾ ಬೇಜಾರ್ ಮಾಡ್ಕೋಳ್ತಾರೇನು.... ಮೇಲ್ ನ ಸುಮ್ಮನೆ ಓಂದ್ ಸಲ ಓದಿ ಬಿಡ್ಬೇಕು ಅಷ್ಟೆ, ತಲೆಗೆಲ್ಲಾ ಹಚ್ಕೊಳ್ಳೋಕೆ ಹೊಗ್ಬಾರ್ದು ಹುಚ್ಚಿ...!" ಅಲ್ಲಿಂದ ಉತ್ತರ ಬಂದಿತು...

"ಅದರೂ ಕಣೋ, ಆ ಹೆಣ್ಣು ಚಿಟ್ಟೆ ನೋಡು, ತನ್ನ ಪ್ರಿಯಕರಿನಿಗಾಗಿ ಆ ಹೂವಲ್ಲಿ ಮೊದಲು ಹೋಗಿ ಸೇರಿಕೊಂಡು ಅದರಲ್ಲೇ ತನ್ನ ಪ್ರಾಣ ಬಿಟ್ಟಿತು ನೋಡು... ಪಾಪ ಕಣೋ...."

"ಲೇ, ಹುಚ್ಚು ಹುಡುಗಿ... ಬೇರೇನು ಕೆಲಸ ಇಲ್ಲವೇನೇ ನಿನಗೆ... ಇದೇ ಎಲ್ಲಾನ ತಲೇಲಿ ತುಂಬಿಸಿಕೊಂಡು ಟೈಮ್ ವೇಸ್ಟ್ ಮಾಡು ನೀನು...ನನಗನಿಸುತ್ತೆ ನಿನಗೆ ಬೇರೆ ಕೆಲಸ ಇಲ್ಲ ಅಂತಾ?"

"ಸಂಜಯ್... ಅದೆಲ್ಲ ನಿನಗೆ ಅರ್ಥ ಅಗೋಲ್ಲಾ ಕಣೋ... ಪ್ರೀತಿಗೆ ಅಷ್ಟು ಶಕ್ತಿ ಇಲ್ಲ ಅಂದ್ಕೊಂಡ್ಯ ನೀನು...! ಒಂದ್ ದಿನ ನಿನಗೂ ಎಲ್ಲಾ ಗೊತ್ತಾಗುತ್ತೆ ಬಿಡು..."


"ಸರಿ, ನಿನ್ ಫೀಲಿಂಗ್ಸ್ ನ ನಿನ್ನ್ ಹತ್ರಾ ನೆ ಹಿಡ್ಕೋ... ಅದನೆಲ್ಲಾ ನಾ ನಂಬೋಲ್ಲಾ..." ಆ ಕಡೆಯಿಂದ ಬಂದಿತು ಉತ್ತರ...

"ಸರಿ ಕಣೋ, ನಾ ಸಾಬೀತು ಮಾಡಿತೊರ್ಸ್ತೀನಿ ಪ್ರೀತಿ ಅಂದ್ರೆ ಏನಂತಾ... "

ಸಂಜಯನ ಉತ್ತರಕ್ಕೂ ಕಾಯದೇ ಲಾಗ್-ಓಟ್ ಆದಳು ಸ್ಮಿತ. ಅವಳಿಗೆ ಅವನ ಈ ಅಸಡ್ಡೆಯೇ ಕೆಲವೊಮ್ಮೆ ಮನಸ್ಸಿಗೆ ನೋವು ತರುತಿತ್ತು. ಆದರೆ ಎನು ಮಾಡೋದು, ಅವನು ತಾನೇ ಇಷ್ಟ ಪಟ್ಟ ಹುಡುಗ ಅಲ್ಲವೇ... ಮನಸ್ಸು ಇದನ ನೆನೆದು ಸುಮ್ಮನಾಗುತ್ತಿತ್ತು....

..................

ಸಂಜಯ್ ಸ್ಮಿತಳ ಪರಿಚಯ ಅಗಿದ್ದು ಜಯನಗರದ ಬಳಿಯಿರುವ ಪಾರ್ಕಿನಲ್ಲಿ. ಅಂದು ಅಲ್ಲಿ ಜೋರು ಗಾಳಿ ಬೀಸುತಿತ್ತು... ಮಳೆ ಬರುವ ಸಮಯ... ಸ್ಮಿತ ಯಾರಿಗೋ ಕಾಯುತ್ತಾ ಕುಳಿತಿದ್ದಳು... ಅಗಲೇ ಮಳೆ ಪ್ರಾರಂಭವಾಗಬೇಕೇ...? ಕೈಯಲ್ಲಿದ್ದ ಹಾಳೆಗಳು ಹಾರ ತೊಡಗಿದವು... ಗಾಬರಿಯಿಂದ ಅವುಗಳನ್ನು ಆರಿಸಲು ಮುಂದಾದಾಗ.. ಒಂದು ಅಪರಿಚಿತ ವ್ಯಕ್ತಿ... ಅಲ್ಲಿದ್ದ ಪೇಪರ್ ಗಳನ್ನು ಅವನು ಹೆಕ್ಕಲು ಶುರು ಮಾಡಿದ. ಮುಖದ ಮೇಲೆ ಮುಗುಳುನಗೆ. ಸ್ಮಿತ ತಾನು ಒಂದು ಬಲವಂತದ ನಗೆ ತೋರಿಸಿದಳು. ಅಂತೂ ಪೇಪರ್ ಎತ್ತಿ ಕೊಟ್ಟ ಆ ವ್ಯಕ್ತಿ ಸ್ಮಿತಳನ್ನ ಮಾತನಾಡಿಸಿದ: "ಹಾಯ್, ನನ್ನ್ ಹೆಸರು ಸಂಜಯ್ ಅಂತ, ಇಫ್ ಯೂ ಡೋಂಟ್ ಮೈಂಡ್, ನಾ ನಿಮಗೆ ಡ್ರಾಪ್ ಕೊಡಬಹುದಾ??. ನನ್ನ ಕಾರ್ ಇಲ್ಲೆ ಹತ್ರದಲ್ಲೇ ಇದೆ. ನಿಮ್ಮ ಅಭ್ಯಂತರ ಇಲ್ದಿದ್ದ್ರೆ...!". ಅಶ್ಛರ್ಯವಾದರೂ ಸ್ಮಿತಳಿಗೂ ಆ ಕ್ಷಣಕ್ಕೆ ಅಲ್ಲಿಂದ ತುರ್ತಾಗಿ ಹೋಗುವ ಅಗತ್ಯವಿತ್ತು..., ಅದಕ್ಕೆ ಅವನಿಗೆ ಹು: ಅಂದು ಕಾರ್ ಹತ್ತಿದಳು. ಅಂದು ಶುರುವಾದ ಒಂದು ಸಣ್ಣ ಪರಿಚಯ... ಪ್ರೇಮಾಂಕುರವಾಗಿ ಎರಡು ವರ್ಷವಾಯಿತು. ಅವರಿಬ್ಬರ ಡೈಲಿ ಮೀಟಿಂಗ್ ಸ್ಪಾಟ್ -- ಆದೇ ಪಾರ್ಕ್ ನ ಬೇಂಚ್...! ಯಾವುದೇ ಕಾರಣಕ್ಕೂ, ಒಂದು ದಿನವೂ ತಪ್ಪುತ್ತಿರಲಿಲ್ಲ ಅವರ ಭೇಟಿ...

......................

ಕೆಲ ದಿನಗಳಿಂದ ಸ್ಮಿತಳಿಗೆ ಜ್ವರ ಕಾಡುತ್ತಲೇ ಇತ್ತು... ಮಾತ್ರೆ ತಗೆದುಕೊಂಡರೂ ಜ್ವರ ಇಳಿದಂತೆ ಕಾಣುತಿರಲಿಲ್ಲ. ಇಷ್ಟೆಲ್ಲಾ ಇದ್ದರೂ ದಿನ ಅವಳ ಸಂಜಯನ ಭೇಟಿ ಜಯನಗರಕ್ಕೆ ಸಾಗುವ ರಸ್ತೆಯ ಬದಿಯಲ್ಲಿದ್ದ ಪಾರ್ಕ್ ನಲ್ಲಿ ಆಗದೇ ಹೋಗುತ್ತಿರಲಿಲ್ಲ. ಕೆಲ ಹೊತ್ತಿನ ಮಾತು... ಒಂದು ಸಣ್ಣ ಕಪ್ಪಿನ ಟೀ..., ಮಾಮೂಲಿ ಇರುತಿತ್ತು ಇದು ಅವರ ದಿನಚರಿಯಲ್ಲಿ...

ಇಂದು ಅದೇ ಮೋಡ ಮುಸುಕಿದ ವಾತಾವರಣ....

ಏಕೋ ಇಂದು ಸಂಜಯ್ ಬರುತ್ತೀನಿ ಅಂದವನು ಎಷ್ಟು ಹೊತ್ತಾದರೂ ಬರೆಲೇ ಇಲ್ಲ... ಫೋನ್ ಟ್ರೈ ಮಾಡಿದರೆ ಬ್ಯೂಸಿ ಟೋನ್ ಬರುತಿತ್ತು... ಮೆಸ್ಸೇಜ್ ಮಾಡಿದರೆ ಬಹಳ ಹೊತ್ತಿನ ನಂತರ "ಇನ್ನೂ ಸಲ್ಪ ಹೊತ್ತಿನಲ್ಲಿ ಬರುತ್ತೇನೆ ಚಿನ್ನೂ... " ಅಂತ ಬಂತು ಅವನ ಉತ್ತರ. ಸಾಲದಕ್ಕೆ ಕಾಡುತಿರುವ ಜ್ವರ... "ಓಕ್ ಡಿಯರ್, ನೀನು ಬರುವರೆಗೂ ಕಾಯುತ್ತೇನೆ... ಈ ವಾಂಟ್ ಟು ಟೆಲ್ ಊ ಸಂಥಿಂಗ್... ವೆರಿ ಸ್ಪೇಷಲ್.." ಅಂತ ರಿಪ್ಲೈ ಮಾಡಿ ಅವನ ಆಗಮನಕ್ಕಾಗಿ ಕಾಯುತ್ತಿದ್ದಳು ಸ್ಮಿತ....

ಕೈಯಲ್ಲಿ ಒಂದು ಹೂ ಗುಚ್ಚ.., ಸಂಜಯನ ಅಗಮನಕ್ಕಾಗಿ ಕಾಯುತ್ತಾ ಕುಳಿತಿತ್ತು ಸ್ಮಿತಳ ಮನ... ಈ ಎರಡು ವರ್ಷಗಳಲ್ಲಿ ಸಂಜಯ್ ಅವಳಿಗೆ ತುಂಬ ಕ್ಲೋಸ್ ಅಗಿದ್ದರೂ ಅವಳು ಅವನಿಗೆ ತನ್ನ ಪ್ರೀತಿಯ ಬಗ್ಗೆ ಹೇಳಿರಲಿಲ್ಲ... ಅದರೆ ಇಂದು ಹೇಳಿಯೇ ಬಿಡೋಣ ಎಂಬ ಕಾತರದೊಂದಿಗೆ ಬಂದಿದ್ದಳು ಅವಳು....

.......................

ರಾತ್ರಿ 10 ಗಂಟೆ... ಸಂಜಯ್ ತನ್ನ ಕ್ಯಾಬಿನಿನ ಕಿಟಕಿಯಿಂದ ಹೊರ ನೋಡಿದ... ಜೋರು ಮಳೆ ಸುರಿಯುತ್ತಲೇ ಇತ್ತು, ತಕ್ಷಣ ನೆನಪಿಗೆ ಬಂತು... ಛೇ, ಸ್ಮಿತಗೆ ನಾ ಬರುತ್ತೇನೆ ಅಂತ ಹೇಳಿದ್ದನಲ್ಲಾ!!! ದಡಬಡನೆ ಮೊಬೈಲ್ ಎತ್ತಿ ಕಾಲ್ ಮಾಡಿದ ಅವಳಿಗೆ... ರಿಂಗ್ ಆಗುತ್ತಿದ್ದರೂ ರಿಸೀವ್ ಮಾಡ್ತಾ ಇಲ್ಲ... 1, 2... ಸುಮಾರು ಟ್ರೈ ಆಯ್ತು... ಉಹು: ರಿಸೀವ್ ಮಾಡುವ ಲಕ್ಷಣಗಳೇ ಕಾಣುತಿಲ್ಲಾ!!! ಅವನ ಮನಸ್ಸು ಗಾಬರಿಗೆ ಬಿದ್ದಿತು. ಎಂದೂ ಹೀಗೆ ಮಾಡಿದವಳಲ್ಲಾ ಸ್ಮಿತ. ಕಾರಿನ ಕೀ ಎತ್ತಿಕೊಂಡು ಕೂಡಲೆ ತನ್ನ ಆಫೀಸ್ ಬೇಸ್ಮೆಂಟ್ ಗೆ ಓಡಿದ ಸಂಜಯ್...

..................

ಜೋರು ಮಳೆ... ಕಾರಿನ ವಿಂಡ್ ಸ್ಕ್ರೀನ್ ಎದುರು ಕಾಣದಷ್ಟು ಮಬ್ಬು... ಸ್ಪೀಡ್ 80-100 ರಲ್ಲಿ ಚಲಿಸುತಲ್ಲಿತ್ತು ಗಾಡಿ. ಮಧ್ಯ ಸ್ಮಿತಳ ಮೊಬೈಲ್ ಗೆ ರೇಚ್ ಆಗಲು ಟ್ರೈ ಮಾಡುತಲೇ ಇದ್ದ ಸಂಜಯ್. ಅದರೆ ಆ ಕಡೆಯಿಂದ ರಿಸೀವ್ ಆಗ್ತಾಯಿಲ್ಲ... ಅಂತೂ ಹೇಗೋ ಪಾರ್ಕ್ ತಲುಪಿದಾಗ ಅವನು ಕಂಡ ದೃಶ್ಯ ಅವನ ಪಾದದ ಕೆಳಗಿನ ನೆಲವೇ ಬಿರಿದಂತಾಯಿತು.... ಸ್ಮಿತ ಒಂದು ಮರದ ಕೆಳಗೆ ನಡುಗುತ್ತ ಹಾಗೆ ಕುಳಿತಿದ್ದಳು. ಸಂಜಯನ ಕಂಡಾಗ ಸ್ಮಿತ ತನ್ನ ಬ್ಯಾಗಿನಲ್ಲಿದ್ದ ಚಿಕ್ಕ ಕವರನ್ನು ತಗೆದು, ಅವನ ಕೈಗಿತ್ತು "ಸಂಜಯ್...ಐ ಲವ್...", ತನ್ನ ಮಾತನ್ನು ಪೂರ್ಣಗೊಳಿಸಲಾಗದೆ ಹಾಗೇ ಮೂರ್ಛೆ ತಪ್ಪಿ ಅವನ ಕೈ ತಕ್ಕೆಯಲ್ಲಿ ಬಿದ್ದುಹೋದಳು...!

ಕೂಡಲೇ ಅವಳನ್ನು ಕಾರಿನಲ್ಲಿ ಮಲಗಿಸಿ ಬೇಗನೆ ಡ್ರೈವ್ ಮಾಡುತ್ತಾ ಹತ್ತಿರದಲ್ಲೇ ಇದ್ದ "ಬೆಂಗಳೂರು ಹೊಸ್ಪಿಟಲ್" ತಲುಪಿದ. ಐ.ಸಿ.ಯು ಗೆ ಕರೆದುಕೊಂಡು ಹೋಗಬೇಕಾದರೆ ಅವನ ಮನಸ್ಸಿನಲ್ಲಿ ಸಣ್ಣ ಭಯ, ದುಗುಡ... ಎನೋ ಒಂದು ಆಶುಭ ಸೂಚನೆ....!

ಅಲ್ಲಿ ಅವಳ ಚಿಕಿತ್ಸೆ ನೆಡೆಯುತ್ತಿದ್ದಾಗ ಇತ್ತ ಹೊರಗಡೆ ಅವನು ಸ್ಮಿತ ಕೊಟ್ಟ ಕವರನ್ನು ಬಿಚ್ಚಿ ನೋಡಿದ.... ಅದರಲ್ಲಿ ಬರೆದಿತ್ತು ಅವಳ ಹೃದಯದ ಸಾಲುಗಳು...

" ಪ್ರೀತಿಯ ಸಂಜಯ್...

ನಾ ನಿನ್ನ ಬಳಿ ಇಷ್ಟು ದಿನ ಕೇಳದ ಒಂದು ಕೋರಿಕೆ ನಿನ್ನ ಬಳಿ ಇಂದು ಪತ್ರದ ಮುಖಂತರ ನಿನಗೆ ಹೇಳಲು ಬಯಸುತ್ತೇನೆ. ಈ ನನ್ನ ಹ್ರದಯ ನಿನ್ನ ಪ್ರೀತಿಗಾಗಿ ಕಾಯುತಿದೆ... ನಿನ್ನ ಸಾಮೀಪ್ಯದಿಂದ ಸಿಗುತಿರುವ ಸಂತೋಷಕ್ಕೆ ಮನಸ್ಸು ಇನ್ನೂ ಹಾತೊರೆಯುತಿದೆ... ನಿನ್ನವಳಾಗಬೇಕೆಂದು ಕೂಗಿ-ಕೂಗಿ ಹೇಳುತಿದೆ... ಇದಕೆ ಅನುಮತಿ ಕೊಡುವೆಯಾ. ಅಂದು ಆ ಚಾಟ್ ನಲ್ಲಿ ಹೇಳಿದ್ದೆಯಲ್ಲಾ ಪ್ರೀತಿ ಯಲ್ಲಾ ಬರಿ ಬೊಗಳೆ, ಅದು ಮಾತಿನಲ್ಲಿಯೇ ಸರಿ ಅಂತ... ಸೀ, ಐ ವಿಲ್ ಶೋ ಯು ವಾಟ್ ದ್ ಲವ್ ಇಸ್...!!. ನಿನಗಾಗೇ ಕಾಯುತಲಿರುತೇನೆ

ನಿನ್ನ- ಸ್ಮಿತ"


ಅದನ್ನು ಓದುತ್ತಲೇ ಸಂಜಯ್ ಕಣ್ಣಿನಿಂದ ಧಾರಾಕಾರ ನೀರು..., ನನ್ನನ್ನು ಇಷ್ಟು ಪ್ರೀತಿಸುತ್ತಿದ್ದಳಾ ಅವಳು? ಮನಸ್ಸು ನೋವಿನಿಂದ ಕುಗ್ಗಿ ಹೋಯಿತು...

ಡಾಕ್ಟರ್ ಐ.ಸಿ.ಯು ಯಿಂದ ಹೊರ ಬಂದರು. ಸಂಜಯ್ ನ ಬಳಿ ಬಂದು ಅವನ ಕಣ್ಣಲ್ಲಿ ನೋಡುತ್ತ...

"ಮಿಸ್ಟರ್ ಸಂಜಯ್, ಐ ಯಮ್ ಸಾರಿ, ಶಿ ಇಸ್ಸ್ ನೋ ಮೋರ್... ಅವರ ಅರೋಗ್ಯ ಮುಂಚೆಯಿಂದಲೇ ಸರಿ ಇರ್ಲಿಲ್ಲಾ ಅನ್ಸ್ತಿತ್ತು, ಶಿ ವಾಸ್ ವೆರಿ ವೀಕ್ ವಿತ್ ದಟ್, ಶಿ ಹಾಡ್ ಎಕ್ಸ್ಪೈರ್ಡ್ ಅನ್ ದ ವೇ ಬಿಫೋರ್ ಕಮ್ಮಿಂಗ್ ಹಿಯರ್..."

ಅವನ ನಲ್ಮೆಯ ಹೂ..., ಅವನ ಎದುರಿನಲ್ಲೇ.., ಅಸ್ಪತ್ರೆಯ ಸ್ಟ್ರೇಚರ್ ಮೇಲೆ ಜೀವವಿಲ್ಲದೆ ಮುಡಡಿಹೋಗಿತ್ತು.....
ವಿನಯ್ ...
ಶ್ಯಾಮರಾಯರಿಗೆ ಇಂದು ತಮ್ಮ ಸರ್ಕಾರಿ ಕೆಲಸದಿಂದ ರಿಟಾಯ್ರ್ ಆಗುವ ದಿನ. ಮಾಮೂಲಿನಂತ ಅವರು ವಾಯು ವಿಹಾರಕ್ಕೆ ಸೌಥ್ ಎಂಡ್ ಸರ್ಕಲ್ ಬಳಿ ಇರೋ ಪಾರ್ಕಿನ ಕಲ್ಲಿನ ಬೆಂಚಿನ ಮೇಲೆ ಕೂತು ದಿನ ಬರುವ ತಮ್ಮ ಹಳೆಯ ಮಿತ್ರರಿಗಾಗಿ ಕಾಯುತ್ತ ಕುಳಿತಿದ್ದರು. ನೆನಪು ಅವರ ಕಣ್ಣ ಮುಂದೆ ಮಡುಗುಟ್ಟುತ್ತಾ ಇತ್ತು. 30 ವರ್ಷಗಳ ಸರ್ಕಾರಿ ಸೇವೆ ಇಂದು ಮುಗಿಯುತ್ತಿತ್ತಲ್ಲಾ... ಆ ಆಫೀಸ್ ನಲ್ಲಿ ಇದ್ದ ಒಂದೊಂದು ಜನ... ಅವರ ಸ್ನೇಹ ಕಳೆದು ಹೋಗಿಬಿಡುತ್ತಲ್ಲಾ ಎಂಬ ಒಂದು ಸಣ್ಣ ನೋವು... ಜೀವನದ ಪುಟಗಳೇಕೋ ನಾಳೆಯಿಂದ ಖಾಲಿ-ಖಾಲಿ... ಹಾಗೇ ಕಣ್ಮುಚ್ಚಿ ಕುಳಿತರು ರಾಯರು...

..................

ಸಣ್ಣವನಿದ್ದಾಗ ಕೆರೆಯ ಏರಿ ಮೇಲೆ ಓಡೋಡುತ್ತ ಹಾಗೇ ಜಾರಿ ಬಿದ್ದದ್ದು... ಸಣ್ಣ ವಿಷಯಕ್ಕೋಸ್ಕರ ತನ್ನ ಅಪ್ತಮಿತನಿಗೆ ಕಲ್ಲಿನಿಂದ ಬೀಸಿ ಹೊಡೆದು ಹಣೆಯಲ್ಲಿ ಗಾಯ ಮೂಡಿಸಿದ್ದು...

ಸ್ಕೂಲಿಗೆ ಹೋಗುತ್ತಿದ್ದಾಗ ಉಪಯೋಗಿಸುತ್ತಿದ್ದ ಅಪ್ಪನ ಹಳೆಯ ಸೈಕಲ್.... ನನ್ನೊಂದಿಗೆ ಬರುತ್ತಿದ್ದ ಆ ಮೂವರು ಗೆಳೆಯರು.... ದೊರದಲ್ಲಿ ನೆಡೆದು ಹೋಗುತ್ತಿದ್ದ ನಮ್ಮ ಶಾಲೆಯ ಹುಡುಗಿಯರು... ಅವ್ರಲ್ಲೊಬ್ಬ ಉದ್ದ ಜಡೆಯ ಹುಡುಗಿಯ ಜಡೆಯೆಳೆದು ದಿನಾ ಕೇಳುತ್ತಿದ್ದ ಅವಳ ಬೈಗುಳದ ಮಳೆ... ಕೆರೆಯ ಪಕ್ಕದಲ್ಲಿದ್ದ ಆ ಹಾಲುಬಿಳುಪಿನ ಹುಡುಗಿಯ ಮನೆ... ಕಣ್ಣ ನೋಟದಲೇ ಆದ ಮೊದಲ ಪ್ರೇಮ... ರಸ್ತೆಯಲ್ಲಿ ಒಟ್ಟಿಗೆ ನೆಡೆದು ಬರುತಿದ್ದ ಸವಿ-ಸಮಯ... ಇಬ್ಬರ ನಡುವೆ ಪ್ರೀತಿ ಇದ್ದರೂ ಹೇಳಿಕೊಳ್ಳಲು ಅಗದೇ ಮನದಲ್ಲೆ ಚಡಪಡಿಸಿದ್ದು... ಅನಂತರ ಒಂದು ದಿನಾ ಅವಳು ಮದುವೆಯಾಗಿ ಅವಳ ಮನೆಯಿಂದ ತನ್ನ ಗಂಡನ ಮನೆಗೆ ಹೊರಡುವಾಗ ಅದನ್ನು ಕಂಡು ನೋವಿನಿಂದ ಬಿಕ್ಕಿ-ಬಿಕ್ಕಿ ಅತ್ತದ್ದು.....

ತನಗೆ ಚಿತ್ರದಲ್ಲಿ ಒಂದು ಚಾನ್ಸ್ ಕೊಡಿಸಿ ಅಂತ ಕಂಡ-ಕಂಡ ಚಿತ್ರ ನಿರ್ದೇಶಕರಿಗೆ ಫೋಟೊ ಕಳಿಸಿ ಪತ್ರ ಬರೆದದ್ದು... ಅದಕ್ಕೆ ಎಂದೂ ಉತ್ತರ ಬರದೇ ಹೋದದ್ದು.... ಬರೆದು-ಬರೆದು ಕೇವಲ ಕನಸಿನ ಗೋಪುರವ ಕಟ್ಟಿದ್ದು...!

ಅಣ್ಣನ ಮದುವೆಗೆ ಹೋದಾಗ ಕಂಡ ಆ ಚಲುವೆ... ಅವಳ ಮುಂಗುರುಳ ವೈಯಾರ... ಕಣ್ಣಿನ ಕುಡಿನೋಟ... ಎಲ್ಲರ ನಡುವೆಯೂ ಮಿಂಚ್ತಿದ್ದ ಅವಳ ರೂಪ... ಮುಗುಳು ನಗೆಯಲ್ಲೇ ನನ್ನ ಅಹ್ವಾನಿಸಿದ್ದು... ನಾವಾಡಿದ ಕೆಲವು ಮಾತು... ನಂತರ ನಮ್ಮಿಬ್ಬರ ನಡುವೆ ಪ್ರೀತಿಯಾಗಿ ಇಬ್ಬರು ಬಾಳ ಸಂಗಾತಿಯಾದದ್ದು...

ವಿಕ್ಟೋರಿಯ ಹಾಸ್ಪಿಟಲ್ ಎದುರು ನಿಂತು ಪತ್ನಿ ಕಮಲಳ ಹೆರಿಗೆ ಮುಗಿಯಲು ಕಾದ ಸಮಯ... ಮೊದಲ ಮಗುವಿಗಾಗಿ ಕಂಡ ಆ ಸುಂದರ ಕನಸು... ಭವಿಷ್ಯಕ್ಕೆ ಮಾಡಿಟ್ಟ ತಯಾರಿ... ಹೊಸ ಜೀವಕ್ಕಾಗಿ ತಯಾರಾದ ಇಬ್ಬರ ಮನ...

ಸುಂದರ ಮನೆಯೊಂದನ್ನ ಲೋನನ್ನು ತಗೆದು ಕಟ್ಟಿದ್ದು... ಕಂತು ತೀರಿಸಲು ದಿನ ರಾತ್ರಿ ನಿದ್ದೆ ಇಲ್ಲದೆ ದುಡಿದದ್ದು... ಮನೆಯ ಎದುರಿಗಿದ್ದ ಆ ಪುಟ್ಟ ತೋಟ... ಅಲ್ಲಿ ನಟ್ಟ ಒಂದೊಂದು ಹೂವಿನ ಗಿಡ... ಮನೆಯಲ್ಲಿ ಅಡುತ್ತ ಬೆಳೆದ ಮಕ್ಕಳು... ಅವರ ಓದು... ಒಬ್ಬೊಬ್ಬರೇ ಮದುವೆಯಾಗಿ ನಮ್ಮ ಮನೆಯ ಗೂಡಿನಿಂದ ಜೋಡಿಯಾಗಿ ಹಾರಿ ಹೋದದ್ದು...

ಮಕ್ಕಳೆಲ್ಲ ಸೇರಿ ನನ್ನ ಮತ್ತು ಕಮಲಳನ್ನು ತೀರ್ಥಕ್ಷೇತ್ರದ ಪ್ರವಾಸಕ್ಕೆ ಕಳುಹಿಸಿದ್ದು... ಅಲ್ಲಿ ಒಂದೊಂದು ಸ್ಥಳ ನೋಡುತ್ತ ನಾವು ನಲಿವಿನಿಂದ ಕಾಲ ಕಳೆದುದ್ದು.. ಹಿಂದಿರುಗಿ ಬಂದ ಕೆಲವೇ ತಿಂಗಳಲ್ಲಿ ಕಮಲಳಿಗೆ ಸಣ್ಣ ಜ್ವರ ಬಂದು ಉಲ್ಭಣಿಸಿ ಮತ್ತೆ ಅದೇ ವಿಕ್ಟೋರಿಯ ಹಾಸ್ಪಿಟಲ್ ಗೆ ಸೇರಿದ್ದು.. ಮರಳಿ ಮತ್ತೆಂದು ಬರದೇ ನನ್ನು ಕಣ್ಣೇರಿನಲ್ಲಿ ಮುಳುಗಿಸಿದ್ದು... ನಂತರ ಮಕ್ಕಳ ಒತ್ತಡಕ್ಕೆ ಮಣೆದು ನನ್ನ ಮನೆಯನ್ನು ಮಾರಿ ಮಗನ ಮನೆಗೆ ಇರಲು ಹೋದದ್ದು... ಕಮಲಳ ನೆನಪು ಎಂದೂ ಬಿಡದೆ ಕಾಡಿದ್ದು...

ನನ್ನ ಜೀವನದ ಒಂದೊಂದು ಘಳಿಗೆ ಮಧುರ ಪಿಸುಮಾತಾಗಿ... ಘಂಟೆಯ ನಿನಾದವಾಗಿ ಕೇಳುತಿದೆ. ಆಳು-ನಗು ಎರಡು ಹದವಾಗಿ ಬೆರೆತ ಜೀವನ... ಎಷ್ಟೋ ಜನ ಈ ಬಾಳ ಪಯಣದಲ್ಲಿ ಬಂದರು... ಹಾಗೆಯೇ ಹೋದರು... ಅದರೂ ಅವರ ಜೊತೆಯಿರುವವೆರೆಗೂ ಎಷ್ಟು ಚನ್ನಿತ್ತು ನನ್ನ ಬಾಳ ಪಯಣ.. ಅಹ:, ಎಂತ ಸುಂದರ ಪಯಣ.....

ರಾಯರು ಹಾಗೇ ಕಣ್ಮುಚ್ಚಿ ಕುಳಿತಿದ್ದರು... ಪಾರ್ಕಿಗೆ ಬಂದ ಅವರ ಮಿತ್ರ ತಿಮ್ಮರಾಯರು ಶ್ಯಾಮರಾಯರ ಮೈ ಮುಟ್ಟಿ ಎಷ್ಟೇ ಎಬ್ಬಿಸಲು ಪ್ಯಯತ್ನಿಸಿದರೂ ಪ್ರತಿಕ್ರಿಯೆ ಇಲ್ಲ... ಇತರ ಮಿತ್ರರು ಅದೇ ಸಮಯಕ್ಕೆ ಧಾವಿಸಿ ಬರಲು.., ಅವರ ಇನ್ನೊಬ್ಬ ಮಿತ್ರರಾದ ಡಾ|| ಪಾಟೇಲರು ಶ್ಯಾಮರಾಯರ ನಾಡಿ ಪರೀಕ್ಷಿಸಿ ನೋಡಿದರು... ರಾಯರು ತಮ್ಮ ಜೀವನದ ಯಾತ್ರೆಯನ್ನು ಅದೆಂದೋ ಮುಗಿಸಿ ನೆನಪಿನ ಪಯಣದಲ್ಲಿ ಅದರೊಂದಿಗೆ ಹಾಗೇ ಮೆಲ್ಲನೆ ನೆಡೆದು ಸಾಗಿ ಹೋಗಿದ್ದರು....