ವಿನಯ್ ...
ರೂಟ್: ಮೆಜೆಸ್ಟಿಕ್ ನಿಂದ ಹೊಸಕೋಟೆ...

ಎಮ್.ಜಿ ರೋಡ್ ಗೆ ಕಾರ್ಯನಿಮಿತ್ತವಾಗಿ ಹೋಗಬೇಕಿದ್ದ ನಾನು ಪ್ಲಾಟ್ ಫಾರ್ಮ್ ನಂ: 17 ಕ್ಕೆ ಬಂದು ಬಸ್ಸಿಗೆ ಕಾಯುತ್ತಲಿದ್ದೆ. 20 ನಿಮಿಷವಾದರೂ ಬಸ್ಸಿನ ಸುಳಿವಿಲ್ಲ...! ಸರಿ, ಸುಮಾರು ಹೊತ್ತಿನ ನಂತರ ಒಂದು ಬ್ಲಾಕ್ ಬೋರ್ಡ್ ಬಸ್ ಅಂತೂ ನಿಧಾನವಾಗಿ ಅಗಮಿಸಿತು. ಅಷ್ಟರಲ್ಲಾಗಲೇ ಹಿಡಿಶಾಪ ಹಾಕುತ್ತಿದ್ದ ಜನ ಆ ಬಸ್ ಕಂಡ ಕೂಡಲೇ ಎಲ್ಲಾ ಮರೆತು "ಸೀಟ್ ರಿಸರ್ವೇಷನ್" ಮಾಡಲು ನುಗ್ಗ ತೊಡಗಿದರು ( ಹ:, ಅವರಲ್ಲಿ ನಾನು ಸೇರಿದ್ದೆ...!). ಕಿಟಕಿ ಪಕ್ಕದ ಸೀಟಲ್ಲಿ ಕುಳಿತಿದ್ದ ನನಗೆ, ಇಚೆ ಪ್ಲಾಟ್ ಫಾರ್ಮ್ ಹತ್ತಿರ ಒಬ್ಬ ವಯಸ್ಸದ ವ್ಯಕ್ತಿ ( 65-70 ರ ನಡುವಿನ ವಯಸ್ಸಿನವರು ಇರಬಹುದು..) "ಏನ್ ಸ್ವಾಮಿ... ಈ ಬಸ್ ರಿಚ್ಮಂಡ್ ಸರ್ಕಲ್ ಸ್ಟಾಪ್ ಗೆ ಹೋಗುತ್ತಾ?" ಅಂತ ಅಲ್ಲಿದ್ದ ಇತರ ಜನರನ್ನ ಕೇಳುತ್ತಿದ್ದನ್ನು ಕಾಣಿಸಿತು. ಅಲ್ಲಿದ್ದ ಒಬ್ಬ ವ್ಯಕ್ತಿ "ನೋಡ್ರಿ... ನಿಮ್ಮ್ ಏದುರಿಗೆ ನಿಂತಿರೋ ಬಸ್ ಹೋಗುತ್ತೆ ನೋಡಿ" ಎನಲು, ಸೀದಾ ಮೆಟ್ಟಿಲು ಹತ್ತಿ ಒಳಬಂದು, ಕಂಡಕ್ಟರ್ ಹತ್ತಿರವೇ ನೇರವಾಗಿ ಹೋಗಿ "ರೀ ಸ್ವಾಮಿ, ರಿಚ್ಮಂಡ್ ಸರ್ಕಲ್ ಸ್ಟಾಪ್ ಕೊಡ್ತಿರೇನ್ರಿ..?" ಅಂತ ಮತ್ತೆ ಅದನ್ನೇ ಕೇಳಿದರು. ಕಂಡಕ್ಟರ್ "ರೀ ಯಜಮಾನ್ರೇ, ಇದು ಬಿಷಪ್ ಕಾಟನ್ ಸ್ಕೂಲ್ ಹತ್ರ ಮಾತ್ರ ನಿಲ್ಲೋದು... ಬೇಕಾದ್ರೆ ಅಲ್ಲಿ ಇಳ್ಕೊಳ್ಳಿ" ಅಂತ ಉತ್ತರಿಸಿದನು. ಗೊಣಗುತ್ತ ಇತ್ತ ಹಿಂದಿನ ಸಾಲಿನ ಹತ್ತಿರ ಬಂದ ಅವರು ಮೊದಲು ನೋಡಿದ್ದೆ "ಹಿರಿಯ ನಾಗರಿಕರ" ಸೀಟನ್ನು...!. ಅಗಲೇ ಅಲ್ಲಿ ಒಬ್ಬ ಹಿರಿಯ ಮಹಿಳೆಯೊಬ್ಬರು ಕುಳಿತಿದ್ದರಿಂದ ಅವರಿಗೆ ಎನು ಹೇಳದೆ ಅವರ ಪಕ್ಕ ಕುಳಿತಿದ್ದ ಯುವಕನ ಕಡೆ ಗಮನ ಹರಿಯಿತು... ಯುವಕ ಬಹಳ ಕಷ್ಟಪಟ್ಟು (!!!) ಸೀಟ್ ಹಿಡಿದಿದ್ದ ಕಾರಣ ಇವರು ಮಾಡಿದ ಮನವಿಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ. "ಈಗಿನ ಕಾಲದ ಹುಡುಗರು ಡೊಡ್ಡೋರ ಕಂಡರೆ ಮರ್ಯಾದಿನೇ ಕೊಡೋಲ್ಲಾ..." ಅಂತ ಆ ಹಿರಿಯ ಮಹಿಳಾ ಪ್ರಯಾಣಿಕರಿಗೆ ಗೊಣಗುತ್ತ ಶುರು ಮಾಡಿದರು ನೋಡಿ ಪುರಾಣ.... ನಂತರ 20 ನಿಮಿಷ ನೆಡೆದ ವಾದ- ವಾಗ್ವಾದಗಳೇ ಈ ಕೆಳಗಿನ ಸಾಲುಗಳು...:

"ನೋಡಿ ಮೇಡಮ್, ನಾನ್ ಕೇಳಿದ್ದು ರಿಚ್ಮಂಡ್ ಸರ್ಕಲ್ ಹತ್ರ ಸ್ಟಾಪ್ ಕೊಡ್ತೀರಾ ಅಂತ... ಅವನು ನೋಡಿದ್ರೆ ಅಲ್ಲೇಲ್ಲೋ ನಿಲ್ಸ್ತಾನಂತೆ... ಇವರನ್ನ ಯಾರು ಕೇಳೋರೆ ಇಲ್ಲಾ ಇಲ್ಲಿ... ಅದೇ, ಬಸ್ ಚಾರ್ಜ್ ಜಾಸ್ತಿ ಮಾಡ್ಬೇಕಾದ್ರೆ ಕಣ್ಮುಚ್ಕೊಂಡು 2 ರೂ. ಹಾಕ್ತಾರಲ್ರೀ ಈ ಜನ...? ಇವರಗೆಲ್ಲಿಗ್ರೀ ಗೊತ್ತಾಗುತ್ತೆ ನಮ್ಮ್ ಕಷ್ಟ?" ಅಂತ ಹೇಳಲು, ಆ ಮಹಿಳೆ ಇವರ ಮಾತಿಗೆ ಕಾಯುತ್ತಿದ್ದರೋ ಏನೋ ಎಂಬುವಂತೆ " ಹೌದ್ ಕಣ್ರೀ, ಇವರೆಲ್ಲಾ ಬರಿ ಇದೇ ಕೆಲಸಕ್ಕೆ ಲಾಯಕ್ಕು, ಹತ್ತ್-ಹದಿನೈದು ಸಾವಿರ (???) ತಿನ್ನೋರಿಗೆ ಏನ್ ಗೊತ್ತಾಗುತ್ತೆ ಬಿಡಿ...!"

ಈ ಕಡೆ ಇವರು "ನಾವ್ ಜಾತಿ ಬ್ರಾಹ್ಮಣ್ರು ( ಈ ವಿಷಯ ಮಧ್ಯದಲ್ಲಿ ಎಕೆ ಬಂತೋ ನಾ ಕಾಣೆ..!) ಏಲ್ಲದಕ್ಕೂ ಸುಮ್ನಿದ್ದೇ ಕಣ್ರೀ ಇವತ್ತು ನಮಗೆ ಹೀಗಾಗಿರೋದು... ಎಲ್ಲಾ ಬರಿ ಆ ಜಾತಿ-ಈ ಜಾತಿ ( ವಿಷಯ ದಾರಿ ಬಿಟ್ಟು ಬೇರೆಡೆ ಸಾಗಿತ್ತು...) ಅಂದ್ಕೊಂಡೇ ಎಲೆಕ್ಷನ್ ಗೆದ್ದು ನಂತರ ತಮ್ಮ್ ಜನಕ್ಕೆ ಮಾತ್ರ ಉದ್ಧಾರ ಮಾಡ್ತಾರ್ರಿ ಅವರು..." (ಇನ್ನೊಂದಿಷ್ಟು ಬೈಗುಳ ಸೇರಿಸಿ...) ಅನ್ನಲು, ಹಿಂದಿನಿಂದ ಕಂಡಕ್ಟರ್ "ಯಜಮಾನ್ರೇ, ಟಿಕೆಟ್ ತಗೋಳ್ರಿ" ಅಂತ ಕೂಗಿದ... "ಏ, ನನ್ದು ಪಾಸ್ ಕಣಯ್ಯ..." ಅಂತ ಇವರು ಹೇಳಲು, "ರೀ ಸ್ವಾಮಿ, ಪಾಸ್ ಅಂತ ಬಾಯಲ್ಲಿ ಹೇಳದ್ರೆ ಆಯ್ತೇನ್ರಿ, ಪಾಸ್ ತೋರ್ಸಿ" ಅಂತ ಕಂಡಕ್ಟರನ ಉತ್ತರ ಬಂತು. ಮುಂಚೆಯೇ ತಮ್ಮ ಮಾತುಗಾರಿಕೆಯಲ್ಲೇ ಆವೇಶಗೊಂಡಿದ್ದ ಇವರು " ಹೋಗಯ್ಯ ತೋರ್ಸೊದಿಲ್ಲಾ... ಏನು ಪಾಸ್ ಇರೋದಕ್ಕೆ ಪ್ರೂಫ್ ಬೇಕಾ? ಬಾಯಲ್ಲಿ ಹೇಳದ್ರೆ ಸಾಲೋಲ್ವೇನು?. ನೀನು ಕಂಡಕ್ಟರ್ ಅನೋದಕ್ಕೆ ನಾವ್ ಏನಾದ್ರು ಪ್ರೂಫ್ ಕೇಳುದ್ರಾ.." ಅಂತ ದಬಯಿಸಿ ಬಿಡುವುದೇ..! ಕಂಡಕ್ಟರ್ ಸಹ ತಾನೇನು ಕಮ್ಮಿ ಅಂತ "ಸರಿ ಕಣಯ್ಯ ನೀನು ಪಾಸ್ ತೋರ್ಸ್ಲಿಲ್ಲ ಅಂದ್ರೆ ಈ ಬಸ್ ಮುಂದೆ ಹೇಗೆ ಹೋಗುತ್ತೆ ಅಂತ ನಾನು ನೋಡ್ತೇನೆ" ಅಂತ ಹಠ ಹಿಡಿದು ಡ್ರೈವರ್ ಗೆ "ಲೇ, ಬಸ್ ನ ಸಲ್ಪ ಸೈಡ್ ಗೆ ಹಾಕಪ್ಪ... ಇಲ್ಲಿ ಇವನಿಗೆ ಎನೋ ತೊಂದರೆಯಂತೆ..." ಅಂತ ಕೂಗಿದ. ಅಗಲೇ ಬಹಳಷ್ಟು ಸಮಯವಾಗಿದ್ದರಿಂದ ಉಳಿದ ಪ್ರಯಾಣಿಕರು ಅವರಿಗೆ "ರಿ ಸ್ವಾಮಿ, ನಿಮಗೆ ಪಾಸ್ ತೋರ್ಸೊಕೆ ಇಷ್ಟ ಇಲ್ಲ ಅಂದರೆ ಬಸ್ಸಿಂದ ಇಳಿದು ಆಟೋ ನಲ್ಲಿ ಹೋಗ್ರಿ, ಇಲ್ಲ್ ಯಾಕೆ ನಿಂತ್ಕೊಂಡಿದ್ದೀರಾ?" ಅಂತ ದಬಾಯಿಸತೊಡಗಿದರು. ಇದುವರೆಗೆ ತಮ್ಮ ವಾಕ್-ಚಾತುರ್ಯವನ್ನು ಹೊಗಳುತ್ತಾರೆ(?!?) ಎಂದು ಕಾಯುತ್ತಿದ್ದ ಅವರಿಗೆ ಇದರಿಂದ ಸಲ್ಪ ಶಾಕ್ ಅದಂತಾಯಿತು ಅನಿಸುತ್ತೆ...! ಮುಖವನ್ನು ಸಣ್ಣಗೆ ಮಾಡಿಕೊಂಡು ಬೇರೇನು ಮಾತನಾಡದೆ ಸುಮ್ಮನಾದರು. ಅಂತು ಬಸ್ ಹೊರಡಲು ಅಣಿಯಾಗುತ್ತಿದ್ದಂತೆ ಈ ಕಡೆ ಕೆಲ ಹೊತ್ತು ಸುಮ್ಮನಿದ್ದ ನಮ್ಮ ಮಹಾಶಯರು ಈಗ ಹೊಸ ಸಮಾಚಾರ ಹೊರ ತಗೆದರು. ಈಗ ಅವರ ಗಮನ ವಿಧಾನ ಸೌಧದ ಮೇಲೆ ಹೋಯಿತು. ಅವರ ಮಾತು ಕೇಳುವ ಟಾರ್ಗೆಟ್ ಮತ್ತೆ ಅದೇ ಹಿರಿಯ ಮಹಿಳೆ...! "ನೋಡಿ ಮೇಡಮ್, ಈ ರಾಜಕೀಯದವರು ತಮ್ಮ ಖರ್ಚಿಗೆ ಬೇಕಂದರೆ ಅದು-ಇದು ಹೇಳಿ ಜಾಸ್ತಿ ಮಾಡ್ಕೋಳ್ತಾರೆ (ಇದು ಇತ್ತೀಚಿಗಷ್ಟೆ ನೆಡೆದಿದ್ದ ಮಂತ್ರಿಗಳ ವಿವಿಧ ಭತ್ಯಗಳ ಏರಿಕೆ ಬಗ್ಗೆ ಅವರಿಗಿದ್ದ ಕೋಪ ಇಂದು ಹೊರಬಂದಿತ್ತು ಅನಿಸುತ್ತೆ...). ಡೀಸಲ್ ಬೆಲೆ ಒಂದ್ಚೂರು ಜಾಸ್ತಿಯಾಯಿತು ಅಂದ್ರೆ 2-3 ರೂ ಜಾಸ್ತಿ ಮಾಡ್ತರಲ್ಲಾ..., ಅದೇ ಕಮ್ಮಿ ಆದ್ರೆ ಏಲ್ಲಿ..., ಬೆಲೆ ಇಳಿಸ್ತಾರೇನು...? ಇವರ ಮನೆಗೆ(... ಹಾಗೆ ಇನ್ನುಳಿದ ವಸ್ತುಗಳ ಮೇಲೆ, ಕಾಣದ ಅವರ ಕುಟುಂಬದವರಿಗೂ...!) ಬೆಂಕಿ ಹಾಕಾ.." ಅಂತ ಬೈಗುಳದ ಸುರಿಮಳೆ... ಆ ಹಿರಿಯ ಮಹಿಳೆಯೂ ಸಹ ಅವರ ವಾದದಲ್ಲಿ ಬಾಯಿ ತೂರಿಸಿ " ಹೌದು ಯಜಮಾನ್ರೇ, ಬರಿ ತಿನ್ತಾನೇ ಇರ್ತಾರೆ ಇವರು" ಅಂತ ಹೇಳಲು, ಇತ್ತ ಇವರಿಗೆ ಇನ್ನಷ್ಟು ಹುರುಪು...! ಸರಿ ಮತ್ತೆ ಮಾತಿನ ಹರಿವು "ಮಹಾತ್ಮ ಗಾಂಧಿ" ಯವರ ಬಳಿ ಸಾಗಿತು. " ಮೇಡಮ್, ಮೊನ್ನೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ... ಅಲ್ಲಿ ಯಾವೊನೋ ತಲೆ ಕೆಟ್ಟವನು " ಸಂಜಯ್ ಗಾಂಧಿ ಗಾಂಧಿ ಮಗ ಅಂತೆ.." ಅಂತ ಅಲ್ಲಿ ನೆರೆದಿದ್ದ ನಮ್ಮೆಲ್ಲರಿಗೆ ಶಾಕ್ ನೀಡಿದರು. ಕೆಲವರು ಇದನ್ನು ಕೇಳಿ ಮುಸಿ-ಮುಸಿ ನಗಲು ಪ್ರಾರಂಭಿಸಿದರು. ಗಾಂಧಿ ಸ್ಪೆಲ್ಲಿಂಗ್ ಅನ್ನು ಬಿಡಿಸಿ ಹೇಳುತ್ತಾ ಅಲ್ಲಿದ್ದ ಸಮಸ್ತರ "ಇಂಗ್ಲೀಷ್ ಭಾಷ ಪಾಂಡಿತ್ಯ" ವನ್ನ ಇನ್ನೂ ಹೆಚ್ಚಿಸಿದರು...! (ಹಾಗ್ ಅಂದ್ಕೋಳ್ತೀನಿ.. ಎಕೆಂದರೆ ಅಲ್ಲಿದ್ದ ಕೆಲ ಹುಡುಗರು ಇವರು ಸ್ಟ್ರೆಸ್ ಮಾಡಿ ಹೇಳುತ್ತಿದ್ದನ್ನ ನೋಡಿ "ಬೊಂಬಾಟ್ ಇಂಗ್ಲೀಷ್ ಮಗಾ" ಅಂತ ಹೇಳಿ ನಗತೊಡಗಿದರು..). ಬಸ್ ಅಗಲೇ ಕಂಠೀರವ ಒಳಾಂಗಣ ಕ್ರೀಡಾಂಗಣ ಬಳಿ ತಲುಪಿತ್ತು. ಆ ಹಿರಿಯ ಮಹಿಳೆ " ಸ್ವಾಮಿ, ನಿಮ್ಮ ಸ್ಟಾಪ್ ಹತ್ರ ಬಂತು ನೋಡಿ, ವಿಟ್ಟಲ ಮಲ್ಯ ಅಸ್ಪತ್ರೆ ಹತ್ರ ಇಳ್ಕೊಳ್ತಿರೇನು?" ಅಂತ ಕೇಳಲು, ಇವರು "ಇಲ್ಲ, ಅಲ್ಲಿಂದ ದೂರ ಅಗುತ್ತೆ ಕಣ್ರೀ.., ಸರ್ಕಲ್ ಹತ್ರಾನೇ ಇಳಿಬೇಕು.." ಅಂದರು.

ಅಶ್ಚರ್ಯದ ವಿಷಯವೆನೆಂದರೆ ಆಟೋಮೆಟಿಕ್ ಡೋರ್ ಸೌಲಭ್ಯ ಹೊಂದಿದ್ದ ಆ ಬಸ್ಸಿನಲ್ಲಿ ಇವರು ಇಷ್ಟ ಬಂದಲ್ಲಿ ಹೇಗೆ ಇಳಿಯಲು ಸಾಧ್ಯ ಅಂತ ನನಗೆ ಅನಿಸತೊಡಗಿದ್ದು...! ಬಸ್ ವಿಟ್ಟಲ ಮಲ್ಯ ಅಸ್ಪತ್ರೆ ಸ್ಟಾಪ್ ದಾಟಿದರೂ ಇನ್ನೂ ಸುಮ್ಮನಿದ್ದ ಈ ಮಹಾಶಯರು ಅದು ರಿಚ್ಮಂಡ್ ಸರ್ಕಲ್ ದಾಟುತ್ತಿದ್ದಂತೆ ಗಟ್ಟಿಯಾಗಿ " ಲೇ ಡ್ರೈವರ್ರೂ, ಸಲ್ಪ ಬಸ್ ನಿಲ್ಸಪ್ಪಾ..." ಅಂತ ಕೂಗಲು ತೊಡಗಿದರು. ಈ ಹಿಂದೆ ಅವರ ಭಾಷಣವನ್ನು ಅನ್ಯ ದಾರಿ ಇಲ್ಲದೇ ಕೇಳುತ್ತಿದ್ದ ಜನರು ಈಗ ಗೊಳ್ಳನೆ ನಗಲು ಪ್ರಾರಂಭಿಸಿದರು. ಡ್ರೈವರು ಸಹ ಈ ಮಹನೀಯರ ಮಾತನ್ನು ಕೇಳು-ಕೇಳಿಸದಂತೆ ಮಾಡಿ ಬಸ್ಸನ್ನು ಸಲ್ಪ ಜೋರಾಗಿಯೇ ಓಡಿಸಲು ಪ್ರಾರಂಭಿಸಿದರು. ಎರಡು-ಮೂರು ಬಾರಿ ಹಾಗೇ ಗಟ್ಟಿಯಾಗಿ ಕೂಗಿದರೂ ಅಷ್ಟರಲ್ಲೇ ಬಸ್ ಬಿಷಪ್ ಕಾಟನ್ ಸ್ಟಾಪ್ ತಲುಪಿಯಾಗಿತ್ತು. ಡೋರ್ ಓಪನ್ ಆಗುತ್ತಿದ್ದಂತೆ ದಗ್ಗನೆ ಇಳಿದು "ಲೇ ಡ್ರೈವರ್ರು, ನಿನ್ನನ್ನು ಮತ್ತೆ ಬಸ್ನಲ್ಲಿ ಬಂದಾಗ ನೋಡ್ಕೊಳ್ಳ್ತೀನೋ.." ಅನ್ನಲು ಹಿಂದಿನಿಂದ ಒಬ್ಬನು "ನೀವ್ ಮತ್ತೆ ಬಂದರೆ ಈ ಬಸ್ ಮುಂದೆ ಹೋಗೋಲ್ರಿ..!" ಅಂತ ಕಿಚಾಯಿಸಿದ. ಮತ್ತೆ ಏಲ್ಲಾರು ನಗತೊಡಗಿದರು. ಇದರಿಂದ ಸಲ್ಪವು ತಲೆಕೆಡಿಸಿಕೊಂಡಂತೆ ಕಾಣದಿದ್ದ ಅವರು (ಅವನು ಹೇಳಿದ್ದನ್ನು ಕೇಳಿಸಿ ಕೊಂಡರೋ, ಇಲ್ಲವೋ!) ಮತ್ತೆ ಆ ಡ್ರೈವರಿಗೆ " ನೀನೊಬ್ಬ ದಾರಿ ತಪ್ಪಿದ ಮಗ ಕಣೋ" ಅಂದು ರಸ್ತೆಯ ಆ ಬದಿಗೆ ತೆರಳಲು, ಮತ್ತೆ ಬಸ್ಸಿನಲ್ಲಿ ನಗುವಿನ ಕಲರವ.... ಅಂತೂ ಆ ದಿನ ಬೆಳಗ್ಗೆ ನಮಗೆ ಅವರಿಂದ ಒಂದು ನಗೆಯ ಔತಣ ಸಿಕ್ಕಿತೆನ್ನಿ...
ವಿಭಾಗ: edit post
0 Responses

Post a Comment