ವಿನಯ್ ...
ಚೆನ್ನೈಯಲ್ಲಿನ ಐ.ಟಿ ಕಂಪನಿಯೊಂದರ ಒಂದು ಸುಂದರ ದಿನ. ಸೂರ್ಯನ ಪ್ರಖಾರ ಬೆಳಕು ಪಾರದರ್ಶ ಗಾಜನ್ನು ದಾಟಿ ಬರುತ್ತ ಅಲ್ಲಿನ ಟೈಲ್ಸ್ ನೆಲವನ್ನ ಹೊಳೆಯುವಂತೆ ಮಾಡಿತ್ತು. ಕಂಪನಿಯ ಉದ್ಯೋಗಿಗಳು ಒಬ್ಬೊಬರಾಗಿ ಸ್ವೈಪ್ ಮಾಡುತ್ತ ಅಲ್ಲೇ ಹತ್ತಿರದಲ್ಲಿ ಇದ್ದ ಉಪಹಾರ ಮಂದಿರದ ಹತ್ತಿರ ಜಮೆಯಾಗತೊಡಗಿದರು. ನಿಶಬ್ಧವಾಗಿದ್ದ ಹಾಲಿನಲ್ಲಿ ಈಗ ಉದ್ಯೋಗಿಗಳ ಮಾತಿನ ಕಲರವ...

ಇದೆಲ್ಲರ ನಡುವೆ ನಮ್ಮ ರಾಜಾ ತನ್ನ ಪಾಡಿಗೆ ತನ್ನ ಕಾರ್ಯ ಮಾಡುತ್ತಿದ್ದನು. ಸುಮಾರು ಮೂವತ್ತರ ಹತ್ತಿರದ ವಯಸ್ಸು..., ಅದೇ ನೀಲಿ ಮತ್ತು ಬಿಳಿ ಸಮವಸ್ತ್ರ... ಸುತ್ತಲಿನ ವಾತಾವರ್ಣ ಉಲ್ಲಾಸಮಯವಾಗಿದ್ದರೂ ಇವನಿಗೆ ಬರಿ ತನ್ನ ಕಾರ್ಯದಲ್ಲಿ ಮಾತ್ರ ಧ್ಯಾನ... ಹೌದು.., ಇವನು ಅಲ್ಲಿ "ಹೌಸ್ ಕೀಪರ್"...! ಎಲ್ಲಾ ದಿನಗಳಂತೆ ತನಗೆ ಕೊಟ್ಟ ಕಾರ್ಯವನ್ನು -- ಅಂದರೆ ನೆಲವನ್ನು ಸ್ವಚ್ಚವಾಗಿ ಒರಿಸುವುದು.., ಕಿಟಕಿ ಗಾಜು ಮತ್ತು ಕುರ್ಚಿ-ಟೇಬಲ್ ಅನ್ನು ಒರಿಸುವುದು.., ನೀರಿನ ಗ್ಲಾಸನ್ನು ಸ್ವಚ್ಚವಾಗಿ ತೊಳೆಯುವುದು... ಮತ್ತು ಊಟ ಮುಗಿದ ಮೇಲೆ ಎಲ್ಲಾ ಕುರ್ಚಿ-ಟೇಬಲ್ ಗಳನ್ನು ಒಂದು ಮೂಲೆಯಲ್ಲಿ ಒಪ್ಪವಾಗಿ ಜೋಡಿಸಿಡುವುದು.. ಈ ಎಲ್ಲಾ ಕಾರ್ಯಗಳನ್ನು ಚಾಚು ತಪ್ಪದೇ ನಿರ್ವಹಿಸುವುದು ಅವನ ದಿನದ ಕೆಲಸವಾಗಿತ್ತು. ಅವನು ತನ್ನ ಕೆಲಸವನ್ನು ದೇವರಷ್ಟೇ ಪೂಜಿಸುತ್ತಿದ್ದನು. ಆ ಕಂಪನಿಯಲ್ಲಿ ಸಿಗುತ್ತಿದ್ದ ಅಲ್ಪ ಸಂಬಳ... ಇಬ್ಬರು ಮಕ್ಕಳು, ಮಡದಿಯ ಸಣ್ಣ ಸಂಸಾರ... ಚೆನ್ನೈಯಲ್ಲಿ ಅದು ಅಷ್ಟು ಸುಲಭವಾಗಿರಲಿಲ್ಲ...! ಆದರೂ ಅದು ತನ್ನ ಕೆಲಸದ ಮೇಲೆ ಎಲ್ಲೂ ಪರಿಣಾಮ ಬೀರದಂತೆ ನೋಡಿಕೊಂಡಿದ್ದ ಅವನು...

ಅಂದಿನ ಒಂದು ಸುತ್ತಿನ ಕೆಲಸ ಮುಗಿಸಿ ಒಂದು ಮೂಲೆ ತಲುಪಿದ ರಾಜಾ ತನ್ನ ಮಡದಿ ತುಂಬಿ ಕಳುಹಿಸಿದ್ದ ಟಿಫನ್ ಬಾಕ್ಸ್ ಅನ್ನು ಮೆಲ್ಲನೆ ತೆರೆಯುತ್ತ ಅದರಿಂದ ಒಂದೊಂದೇ ತುತ್ತನ್ನು ಬಾಯಿಗೆ ಇಡುತ್ತಿದ್ದನು. ಅವನಿಗೆ ಅಲ್ಲಿ ತುಂಬ ಜನ ಸ್ನೇಹಿತರಿದ್ದರೂ ಊಟದ ವೇಳೆಯಲ್ಲಿ ರಾಜಾ ತಾನೊಬ್ಬನೇ ಕುಳಿತು ಊಟ ಮಾಡುವ ಪರಿಪಾಠ... ಊಟ ಮಾಡುತ್ತಿದ್ದ ರಾಜಾನ ಮನಸ್ಸು ಇಂದು ಬೆಳಗ್ಗೆ ತನ್ನ ಮನೆಯಲ್ಲಿ ನೆಡೆದ ಘಟನೆಯನ್ನು ನೆನೆಯುತ್ತ ತೇಲಿ ಹೋಯಿತು...

ಮಾಮೂಲಿನಂತೆ ಬೆಳಗ್ಗೆ ಬೇಗನೆ ಎದ್ದು, ಎಂದಿನ ಕೆಲಸ ಕಾರ್ಯ ಮುಗಿಸಿ ಆಫೀಸಿಗೆ ಹೊರಡಲು ತಯಾರಾಗುತಿರಲು.., ರೂಮಿನಲ್ಲಿ ಮಲಗಿದ್ದ ತನ್ನ ಮಗನ ಹಣೆಯ ಮೇಲೆ ಸಿಹಿ ಮುತ್ತನ್ನು ಇಡಲು ಅತ್ತ ಧಾವಿಸಿದನು. ಇದು ರಾಜಾ ದಿನ ಆಫೀಸಿಗೆ ಕೆಲಸಕ್ಕೆ ಹೋಗುವ ಮೊದಲು ಮರೆಯದೇ ಮಾಡುತ್ತಿದ್ದ ಕೆಲಸವಾಗಿತ್ತು.

ಅಂದು ಏಕೋ ತನ್ನ ಮಗ ತಾನು ರೂಮು ತಲುಪುವ ಮುಂಚೆಯೇ ಎದ್ದು ಕುಳಿತು ತನಗಾಗಿ ಕಾಯುತ್ತಿದ್ದನು. ಹಣೆಗೆ ಮುತ್ತನ್ನಿತ್ತ ರಾಜಾ ಇನ್ನೇನು ಮೇಲೇಳಬೇಕು ಅಷ್ಟರಲ್ಲಿ ಅವನ ಮಗ ಅವನ ಶರ್ಟ್ ಜಗ್ಗಿ ಕೈ ಹಿಡಿದುಕೊಂಡನು. ರಾಜಾನಿಗೆ ಇದು ಅನಿರೀಕ್ಷಿತವೆನಿಸಿದರೂ ತನ್ನ ಮಗನನ್ನು ಏನೆಂದು ಕೇಳಿದನು. ಅವನು ಮಗನು ಮುಗ್ಧವಾಗಿ ತನಗೆ ಒಂದು ಕೇಕ್ ಬೇಕೆಂದು... ಅದು ಡೊಡ್ಡ ಅಳತೆಯದ್ದೇ ಆಗಬೇಕೇಂದು ಗೋಗೊರೆಯತೊಡಗಿದನು. ಪಾಪ ರಾಜಾನಿಗೆ ಏನು ಗೊತ್ತಿತ್ತು.., ಅದರ ಹಿಂದಿನ ದಿನವಷ್ಟೇ ಅವನ ಮಗ ತನ್ನ ಪಕ್ಕದ ಮನೆಯವರ ಮಗನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದು ಮತ್ತು ಅಲ್ಲಿನ ವಿಜ್ರಂಭಣೆಯನ್ನು ಕಂಡು ತಾನು ಅಷ್ಟೇ ದೊಡ್ಡ ಕೇಕ್ ತರಿಸಿ ತಿನ್ನಬೇಕು ಅಂದಿಕೊಂಡದ್ದು..!

ತಿಂಗಳ ಕೊನೆ... ಕೈಗಡ, ಸಾಲಗಳು ಬೇರೆ...! ಆದರೂ ಮುಖದ ಮೇಲೆ ಒಂದು ಸಣ್ಣ ನೋವು ತೋರಿಸದೆ ಇಂದೇ ನಿನಗೆ ಆಫೀಸಿನಿಂದ ಮನೆಗೆ ಬರುವಾಗ ಕೇಕು ತರುತ್ತೇನೆಂಬ ಆಣೆಯೊಂದಿಗೆ ಮನೆಯಿಂದ ಹೊರಟನು....

....................

ಜೋರನೆ ಸದ್ದಾಗಲು ಕೇಕಿನ ವಿಷಯದಲ್ಲೇ ಆಳವಾಗಿ ಜಾರಿ ಹೋಗಿದ್ದ ರಾಜಾ ತನ್ನ ನಿಜಸ್ಥಿತಿಗೆ ಮರುಳಿ ಬಂದನು. ಅಲ್ಲಿ ಅವನು ಊಟಕ್ಕೆ ಕುಳಿತಿದ್ದ ಹತ್ತಿರದಲ್ಲೇ ಒಂದು ೧೦ ಜನರ ಸಣ್ಣ ಗುಂಪು... ಸ್ವಚ್ಛ ಇಂಗ್ಲೀಷಿನಲ್ಲಿ ಮಾತನಾಡುತ್ತ ಅವರವರಲ್ಲೇ ಜೋಕ್ ಸಿಡಿಸುತ್ತ ಕಾಲ ಕಳೆಯುತ್ತಿದ್ದರು. ಅಂದು ಅವರು ತಮ್ಮ ಒಬ್ಬ ಸಹೋದ್ಯೋಗಿಯ ಹುಟ್ಟುಹಬ್ಬದ ಆಚರಣೆಯ ಸಲುವಾಗಿ ಅಲ್ಲಿ ಜಮೆಯಾಗಿದ್ದರು. ಕೆಲವೇ ಹೊತ್ತಿನಲ್ಲಿ ಅಂದು ಹುಟ್ಟುಹಬ್ಬ ಅಚರಿಸಿಕೊಳ್ಳುತ್ತಿದ್ದ ಅ ಯುವಕನ ಮುಖ ಅಲ್ಲಿದ್ದ ಕೇಕಿನ ಕ್ರೀಮಿನಿಂದ ಮುಚ್ಚಿಹೋಗಿತ್ತು... ವಿವಿಧ ಕೋನಗಳಿಂದ ಅವನ ಚಿತ್ರಗಳನ್ನು ತಗೆಯಲಾಯಿತು... ಅಂತೂ ಸುಮಾರು ಒಂದು ಘಂಟೆಯ ಎಲ್ಲಾ ಆಚರಣೆಗಳು ಮುಗಿದ ನಂತರ ಎಲ್ಲರೂ ಅಲ್ಲಿಂದ ಜಾಗ ಖಾಲಿ ಮಾಡಿದರು.

ಆಗಷ್ಟೆ ಊಟ ಮುಗಿಸಿದ್ದ ರಾಜಾ ತನ್ನ ಟಿಫನ್ ಬಾಕ್ಸ್ ಮುಚ್ಚಿಟ್ಟು, ಕೈ ತೊಳೆದುಕೊಂಡು ತನ್ನ ಎಂದಿನ ಕಾರ್ಯದಂತೆ ಮೋಪ್ ಅನ್ನು ಕೈಯಲ್ಲಿ ಹಿಡಿದು ಆಗಷ್ಟೆ ಪಾರ್ಟಿ ಮುಗಿದಿದ್ದ ಆ ಟೇಬಲ್ಲಿನ ಹತ್ತಿರ ಬಂದನು. ಚಲ್ಲಿದ್ದ ಉಳಿದ ತಿಂಡಿಯ ಚೂರು.., ನೆಲದ ಪೂರ ಚದುರಿಹೋಗಿದ್ದ ಕೇಕಿನ ತುಣುಕು, ಕ್ರೀಮನ್ನು ಒರಿಸುತ್ತ - ಒರಿಸುತ್ತ ಅವನ ಕಣ್ಣು ಯಾವಾಗ ಕಣ್ಣೀರಿನಿಂದ ತುಂಬಿಹೋಯಿತೋ... ಅವನಿಗೆ ತಿಳಿಯಲೇ ಇಲ್ಲ....!

ಪ್ರೇರಣೆ: ನನ್ನ ಮಿತ್ರ ಕಳುಹಿಸಿದ್ದ "ದ ಕೇಕ್" ಎಂಬ ಇ-ಮೇಲ್ ನಿಂದ...
ವಿಭಾಗ: edit post
0 Responses

Post a Comment