ವಿನಯ್ ...
ಶ್ಯಾಮರಾಯರಿಗೆ ಇಂದು ತಮ್ಮ ಸರ್ಕಾರಿ ಕೆಲಸದಿಂದ ರಿಟಾಯ್ರ್ ಆಗುವ ದಿನ. ಮಾಮೂಲಿನಂತ ಅವರು ವಾಯು ವಿಹಾರಕ್ಕೆ ಸೌಥ್ ಎಂಡ್ ಸರ್ಕಲ್ ಬಳಿ ಇರೋ ಪಾರ್ಕಿನ ಕಲ್ಲಿನ ಬೆಂಚಿನ ಮೇಲೆ ಕೂತು ದಿನ ಬರುವ ತಮ್ಮ ಹಳೆಯ ಮಿತ್ರರಿಗಾಗಿ ಕಾಯುತ್ತ ಕುಳಿತಿದ್ದರು. ನೆನಪು ಅವರ ಕಣ್ಣ ಮುಂದೆ ಮಡುಗುಟ್ಟುತ್ತಾ ಇತ್ತು. 30 ವರ್ಷಗಳ ಸರ್ಕಾರಿ ಸೇವೆ ಇಂದು ಮುಗಿಯುತ್ತಿತ್ತಲ್ಲಾ... ಆ ಆಫೀಸ್ ನಲ್ಲಿ ಇದ್ದ ಒಂದೊಂದು ಜನ... ಅವರ ಸ್ನೇಹ ಕಳೆದು ಹೋಗಿಬಿಡುತ್ತಲ್ಲಾ ಎಂಬ ಒಂದು ಸಣ್ಣ ನೋವು... ಜೀವನದ ಪುಟಗಳೇಕೋ ನಾಳೆಯಿಂದ ಖಾಲಿ-ಖಾಲಿ... ಹಾಗೇ ಕಣ್ಮುಚ್ಚಿ ಕುಳಿತರು ರಾಯರು...

..................

ಸಣ್ಣವನಿದ್ದಾಗ ಕೆರೆಯ ಏರಿ ಮೇಲೆ ಓಡೋಡುತ್ತ ಹಾಗೇ ಜಾರಿ ಬಿದ್ದದ್ದು... ಸಣ್ಣ ವಿಷಯಕ್ಕೋಸ್ಕರ ತನ್ನ ಅಪ್ತಮಿತನಿಗೆ ಕಲ್ಲಿನಿಂದ ಬೀಸಿ ಹೊಡೆದು ಹಣೆಯಲ್ಲಿ ಗಾಯ ಮೂಡಿಸಿದ್ದು...

ಸ್ಕೂಲಿಗೆ ಹೋಗುತ್ತಿದ್ದಾಗ ಉಪಯೋಗಿಸುತ್ತಿದ್ದ ಅಪ್ಪನ ಹಳೆಯ ಸೈಕಲ್.... ನನ್ನೊಂದಿಗೆ ಬರುತ್ತಿದ್ದ ಆ ಮೂವರು ಗೆಳೆಯರು.... ದೊರದಲ್ಲಿ ನೆಡೆದು ಹೋಗುತ್ತಿದ್ದ ನಮ್ಮ ಶಾಲೆಯ ಹುಡುಗಿಯರು... ಅವ್ರಲ್ಲೊಬ್ಬ ಉದ್ದ ಜಡೆಯ ಹುಡುಗಿಯ ಜಡೆಯೆಳೆದು ದಿನಾ ಕೇಳುತ್ತಿದ್ದ ಅವಳ ಬೈಗುಳದ ಮಳೆ... ಕೆರೆಯ ಪಕ್ಕದಲ್ಲಿದ್ದ ಆ ಹಾಲುಬಿಳುಪಿನ ಹುಡುಗಿಯ ಮನೆ... ಕಣ್ಣ ನೋಟದಲೇ ಆದ ಮೊದಲ ಪ್ರೇಮ... ರಸ್ತೆಯಲ್ಲಿ ಒಟ್ಟಿಗೆ ನೆಡೆದು ಬರುತಿದ್ದ ಸವಿ-ಸಮಯ... ಇಬ್ಬರ ನಡುವೆ ಪ್ರೀತಿ ಇದ್ದರೂ ಹೇಳಿಕೊಳ್ಳಲು ಅಗದೇ ಮನದಲ್ಲೆ ಚಡಪಡಿಸಿದ್ದು... ಅನಂತರ ಒಂದು ದಿನಾ ಅವಳು ಮದುವೆಯಾಗಿ ಅವಳ ಮನೆಯಿಂದ ತನ್ನ ಗಂಡನ ಮನೆಗೆ ಹೊರಡುವಾಗ ಅದನ್ನು ಕಂಡು ನೋವಿನಿಂದ ಬಿಕ್ಕಿ-ಬಿಕ್ಕಿ ಅತ್ತದ್ದು.....

ತನಗೆ ಚಿತ್ರದಲ್ಲಿ ಒಂದು ಚಾನ್ಸ್ ಕೊಡಿಸಿ ಅಂತ ಕಂಡ-ಕಂಡ ಚಿತ್ರ ನಿರ್ದೇಶಕರಿಗೆ ಫೋಟೊ ಕಳಿಸಿ ಪತ್ರ ಬರೆದದ್ದು... ಅದಕ್ಕೆ ಎಂದೂ ಉತ್ತರ ಬರದೇ ಹೋದದ್ದು.... ಬರೆದು-ಬರೆದು ಕೇವಲ ಕನಸಿನ ಗೋಪುರವ ಕಟ್ಟಿದ್ದು...!

ಅಣ್ಣನ ಮದುವೆಗೆ ಹೋದಾಗ ಕಂಡ ಆ ಚಲುವೆ... ಅವಳ ಮುಂಗುರುಳ ವೈಯಾರ... ಕಣ್ಣಿನ ಕುಡಿನೋಟ... ಎಲ್ಲರ ನಡುವೆಯೂ ಮಿಂಚ್ತಿದ್ದ ಅವಳ ರೂಪ... ಮುಗುಳು ನಗೆಯಲ್ಲೇ ನನ್ನ ಅಹ್ವಾನಿಸಿದ್ದು... ನಾವಾಡಿದ ಕೆಲವು ಮಾತು... ನಂತರ ನಮ್ಮಿಬ್ಬರ ನಡುವೆ ಪ್ರೀತಿಯಾಗಿ ಇಬ್ಬರು ಬಾಳ ಸಂಗಾತಿಯಾದದ್ದು...

ವಿಕ್ಟೋರಿಯ ಹಾಸ್ಪಿಟಲ್ ಎದುರು ನಿಂತು ಪತ್ನಿ ಕಮಲಳ ಹೆರಿಗೆ ಮುಗಿಯಲು ಕಾದ ಸಮಯ... ಮೊದಲ ಮಗುವಿಗಾಗಿ ಕಂಡ ಆ ಸುಂದರ ಕನಸು... ಭವಿಷ್ಯಕ್ಕೆ ಮಾಡಿಟ್ಟ ತಯಾರಿ... ಹೊಸ ಜೀವಕ್ಕಾಗಿ ತಯಾರಾದ ಇಬ್ಬರ ಮನ...

ಸುಂದರ ಮನೆಯೊಂದನ್ನ ಲೋನನ್ನು ತಗೆದು ಕಟ್ಟಿದ್ದು... ಕಂತು ತೀರಿಸಲು ದಿನ ರಾತ್ರಿ ನಿದ್ದೆ ಇಲ್ಲದೆ ದುಡಿದದ್ದು... ಮನೆಯ ಎದುರಿಗಿದ್ದ ಆ ಪುಟ್ಟ ತೋಟ... ಅಲ್ಲಿ ನಟ್ಟ ಒಂದೊಂದು ಹೂವಿನ ಗಿಡ... ಮನೆಯಲ್ಲಿ ಅಡುತ್ತ ಬೆಳೆದ ಮಕ್ಕಳು... ಅವರ ಓದು... ಒಬ್ಬೊಬ್ಬರೇ ಮದುವೆಯಾಗಿ ನಮ್ಮ ಮನೆಯ ಗೂಡಿನಿಂದ ಜೋಡಿಯಾಗಿ ಹಾರಿ ಹೋದದ್ದು...

ಮಕ್ಕಳೆಲ್ಲ ಸೇರಿ ನನ್ನ ಮತ್ತು ಕಮಲಳನ್ನು ತೀರ್ಥಕ್ಷೇತ್ರದ ಪ್ರವಾಸಕ್ಕೆ ಕಳುಹಿಸಿದ್ದು... ಅಲ್ಲಿ ಒಂದೊಂದು ಸ್ಥಳ ನೋಡುತ್ತ ನಾವು ನಲಿವಿನಿಂದ ಕಾಲ ಕಳೆದುದ್ದು.. ಹಿಂದಿರುಗಿ ಬಂದ ಕೆಲವೇ ತಿಂಗಳಲ್ಲಿ ಕಮಲಳಿಗೆ ಸಣ್ಣ ಜ್ವರ ಬಂದು ಉಲ್ಭಣಿಸಿ ಮತ್ತೆ ಅದೇ ವಿಕ್ಟೋರಿಯ ಹಾಸ್ಪಿಟಲ್ ಗೆ ಸೇರಿದ್ದು.. ಮರಳಿ ಮತ್ತೆಂದು ಬರದೇ ನನ್ನು ಕಣ್ಣೇರಿನಲ್ಲಿ ಮುಳುಗಿಸಿದ್ದು... ನಂತರ ಮಕ್ಕಳ ಒತ್ತಡಕ್ಕೆ ಮಣೆದು ನನ್ನ ಮನೆಯನ್ನು ಮಾರಿ ಮಗನ ಮನೆಗೆ ಇರಲು ಹೋದದ್ದು... ಕಮಲಳ ನೆನಪು ಎಂದೂ ಬಿಡದೆ ಕಾಡಿದ್ದು...

ನನ್ನ ಜೀವನದ ಒಂದೊಂದು ಘಳಿಗೆ ಮಧುರ ಪಿಸುಮಾತಾಗಿ... ಘಂಟೆಯ ನಿನಾದವಾಗಿ ಕೇಳುತಿದೆ. ಆಳು-ನಗು ಎರಡು ಹದವಾಗಿ ಬೆರೆತ ಜೀವನ... ಎಷ್ಟೋ ಜನ ಈ ಬಾಳ ಪಯಣದಲ್ಲಿ ಬಂದರು... ಹಾಗೆಯೇ ಹೋದರು... ಅದರೂ ಅವರ ಜೊತೆಯಿರುವವೆರೆಗೂ ಎಷ್ಟು ಚನ್ನಿತ್ತು ನನ್ನ ಬಾಳ ಪಯಣ.. ಅಹ:, ಎಂತ ಸುಂದರ ಪಯಣ.....

ರಾಯರು ಹಾಗೇ ಕಣ್ಮುಚ್ಚಿ ಕುಳಿತಿದ್ದರು... ಪಾರ್ಕಿಗೆ ಬಂದ ಅವರ ಮಿತ್ರ ತಿಮ್ಮರಾಯರು ಶ್ಯಾಮರಾಯರ ಮೈ ಮುಟ್ಟಿ ಎಷ್ಟೇ ಎಬ್ಬಿಸಲು ಪ್ಯಯತ್ನಿಸಿದರೂ ಪ್ರತಿಕ್ರಿಯೆ ಇಲ್ಲ... ಇತರ ಮಿತ್ರರು ಅದೇ ಸಮಯಕ್ಕೆ ಧಾವಿಸಿ ಬರಲು.., ಅವರ ಇನ್ನೊಬ್ಬ ಮಿತ್ರರಾದ ಡಾ|| ಪಾಟೇಲರು ಶ್ಯಾಮರಾಯರ ನಾಡಿ ಪರೀಕ್ಷಿಸಿ ನೋಡಿದರು... ರಾಯರು ತಮ್ಮ ಜೀವನದ ಯಾತ್ರೆಯನ್ನು ಅದೆಂದೋ ಮುಗಿಸಿ ನೆನಪಿನ ಪಯಣದಲ್ಲಿ ಅದರೊಂದಿಗೆ ಹಾಗೇ ಮೆಲ್ಲನೆ ನೆಡೆದು ಸಾಗಿ ಹೋಗಿದ್ದರು....
ವಿಭಾಗ: edit post
0 Responses

Post a Comment