ವಿನಯ್ ...
"ಸವಿ ಸವಿ ನೆನಪು ಸಾವಿರ ನೆನಪುಸಾವಿರ ಕಾಲಕೂ ಸವೆಯದ ನೆನಪುಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೂರೊಂದು ನೆನಪುಏನೋ ಒಂದು ತೊರೆದ ಹಾಗೆ, ಯಾವುದೊ ಒಂದು ಪಡೆದ ಹಾಗೆ,ಅಮ್ಮನ ಮಡಿಲ ಅಪ್ಪಿದ ಹಾಗೆ, ಕಣ್ಣಂಚಲ್ಲಿ ಕಣ್ಣೀರ ನೆನಪು...."

ಚಿತ್ರ: ಮೈ ಅಟೋಗ್ರಾಫ್, ಭಾರಧ್ವಜ್ ರವರು ಸಂಗೀತ ಕೊಟ್ಟು, ಕಲ್ಯಾಣ್ ಬರೆದ ಈ ಇಂಪಾದ ಸಾಲುಗಳು.... ನೆನಪಿನ ಆ ವರ್ಣನೆಯನ್ನು ಮಧುರವಾಗಿ ನಮ್ಮ ಮನಸ್ಸಿನ ಆಳದಿಂದ ಕಣ್ಗಳ ಮುಂದಿಳಿಸುವ ಪರಿ... ಅಹಾ! ಎಂತಾ ಮಧುರ ಅನುಭವ ಅಲ್ಲವೇ? ಯಾರಿದ್ದಾರೆ ಹೇಳಿ ನೆನಪಿನ ದೋಣಿಯಲ್ಲಿ ತಮ್ಮ ಜೀವನವನ್ನ ತೇಲದೆ ಸಾಗಿಸದವರು? ನೆನಪು ನಾವು ಆಡುತ್ತಿರುವ ಉಸಿರಿನಷ್ಟೇ ಸತ್ಯ... ಅದು ಸೂರ್ಯನ ಬೆಳಕಿನಷ್ಟೆ ನಿಜವಲ್ಲವೇ?
....
...................................................
"ನೂರೊಂದು ನೆನಪು ಎದೆಯಾಳದಿಂದ, ಹಾಡಾಗಿ ಬಂತು ಆನಂದದಿಂದ....."

ನೆನಪು ಆ ದಿನ, ಆ ಗಳಿಗೆ, ಆ ಕ್ಷಣದ್ದು.... ನಾವು ಹೊರಟ ಆ ಜೀವನದ ಪಯಣದೆಡೆಗೆ..... ನೆನಪು ನಾವ್ ಕಂಡ ಆ ಹುಡುಗ/ ಆ ಹುಡುಗಿಯದು... ಅವರ ಕಣ್ಣೋಟಕ್ಕೆ ನಾವು ಸೆರೆಯಾದದ್ದು...! ಕಾಲೇಜ್ ನಲ್ಲಿ ಓದುವಾಗ ಮೊದಲ ಪ್ರೀತಿಯ ನೆನಪು... ನಮ್ಮ ಸುಖ-ದುಃಖವ ಹಂಚಿಕೊಂಡ ಆ ಮಿತ್ರರ ನೆನಪು... ಕೊನೆಗೆ ಮರೆಯಾಗಿ ಮತ್ತೆ ಸಿಕ್ಕಿದವರು, ಮತ್ತೆ-ಮತ್ತೆ ಗಲಾಟೆ ಮಾಡಿಕೊಂಡು, ಈ ಜನುಮದಲ್ಲಿ ಮುಖವನ್ನು ಕಾಣಲು ಇಷ್ಟಪಡದೆ ಮುಂದೆಂದೋ ಸಿಕ್ಕಾಗ ಮಾತಾಡಿಸಿ, ಎಲ್ಲಾ ಮರೆತು ಜೀವದ ಗೆಳೆಯರಾದ ಮಧುರ ನೆನಪು..? ಹುಂ ಹೇಳಿ, ಓಂದೇ, ಎರಡೇ.....!

ದೂರದ ಊರಿನಲ್ಲಿ ಓದುತ್ತಿದ್ದಾಗ, ಇಲ್ಲಾ ಕೆಲಸ ಮಾಡುತ್ತಿದ್ದಾಗ ಮನೆಗೆ ಅದಷ್ಟು ಬೇಗ ತಲುಪುವ ಹಂಬಲ... ಕಣ್ಣಾಲಿಗಳಲ್ಲಿ ನೀರು ತುಂಬಿ, ಹೊರಬರಿಸಲು ಇಷ್ಟಪಡದೆ/ಆಗದೆ ಚಡಪಡಿಸಿದ ಆ ನೆನಪು, ಮಿತ್ರರ ಹಿಂದೆ ಸುತ್ತಲೂ ಹೋದ, ಅವರ ಜೊತೆ ಕಾಲ ಕಳೆದ ಅ ಒಂದೊಂದು ಮಧುರ ಕ್ಷಣ... ಅ ಮಧುರ ದಿನದ ಕ್ಷಣ, ನಾವು ಒಬ್ಬ ಅಪರಿಚಿತ ಜೀವದೊಂದಿಗೆ ಬಂಧಿಯಾದದ್ದು, ಮತ್ತು ಅವರೇ ನಮ್ಮ ಜೀವನದ ಎಂದೂ ಬಿಡಿಸದ ಬಾಳಿನ ಬಂಧನವಾದದ್ದು....ಎಲ್ಲಾ ಮಧುರ ನೆನಪೇ ಅಲ್ಲವೆ..?

ತಂದೆ-ತಾಯಿಯ ಮಾತು ಕೇಳದೆ ಹಟಮಾಡಿ, ದೂರದೂರಿಗೆ ಹೋಗಿ..., ನಂತರ ಅವರಿಬ್ಬರು ನೆನಪಾಗಿ ಕಾಡಿದಾಗ ಕುಟುಂಬದೊಡನೆ ಇದ್ದ ಆ ಕ್ಷಣ... ನಮ್ಮ ಮನದ ಮಾತೆಲ್ಲವ ನಾವು ನಂಬಿದ ಮಿತ್ರನಿಗೆ ಹೇಳಿದ್ದು, ಅವನು ಇನ್ನ್ಯಾರಿಗೋ ಹೇಳಿ ನಾವು ಪೇಚಾಡುವಂತೆ ಮಾಡಿದ್ದು... ಕಾಲೇಜಿನ ಆ ಹಾಸ್ಟೆಲ್ ರೂಮ್, ಅಲ್ಲಿ ಮಾಡಿದ ಚಿತ್ರ-ವಿಚಿತ್ರ ಕಿಟಲೆ... ಜೂನಿಯರ್ಸ್ ನ ಹುಡುಕಿದ ಪರಿ, ಅವರಿಗೆ ಬಿಡದೆ ಕೊಟ್ಟ "ಸ್ಪೆಷಲ್. ಟ್ರೀಟ್ಮೆಂಟ್"...! ಪ್ರೀತಿಗಾಗಿ ನಾವ್ ಹುಡುಕಿದ ಆ ಹುಡುಗ/ಹುಡುಗಿ..., ಅವರಿಗೆ ತನ್ನ ಮನದ ಭಾವವ ಹೇಳಿ ಅವರು ನೀಡಿದ ಮಾತು/ಪ್ರತಿಕ್ರಿಯೆ ಜೀವನದ ದಿಕ್ಕನ್ನು ಬದಲಾಯಿಸಿದ್ದು... ಯಾರು ನಮಗೆ ತುಂಬ ಬೇಕಾಗಿದ್ದರೋ ಅವರೇ ಮುಂದೊಂದು ದಿನ ಎಲ್ಲದಕ್ಕೂ ಕಡೆಯವರಾಗಿ ಹೋದದ್ದು.... ನೆನಪಿನ ವಿಸ್ಮಯವೇ ಅದು....!

"ನಿನದೇ ನೆನಪು ದಿನವು ಮನದಲ್ಲಿ...,ನೋಡುವ ಅಸೆಯು ತುಂಬಿದೆ ನನ್ನಲಿ...,ನನ್ನಲಿ...."

ನೆನಪು ಬರುತ್ತದೆ, ಹಾಗೇ ಹೋಗುತ್ತದೆ ಸಹ... ಆದರೂ ಕೆಲವೊಂದು ಸಲ ಅ ನೆನಪೇ ನಮ್ಮ ಜೀವನವನ್ನ ಸುಂದರಗೊಳಿಸೋದು ಅಲ್ಲವೇ? ಅವುಗಳ ಮರೆತರೆ ಎಂದಾದರೂ ಊಹಿಸಿದ್ದೀರಾ...! ಉಹುಂ, ಬೇಡ ಬಿಡಿ... ಈ ಲೋಕದಲ್ಲಿ ಕೆಲವು ಮಿತ್ರರು ಮತ್ತು ಕೆಲವು ಆಪ್ತರು ನಮ್ಮ ಪ್ರಾತಃ ಸ್ಮರಣೀಯರೇ ಅಗಿರುತ್ತಾರೆ. ಅವರಿಂದಲ್ಲವೇ ನಮ್ಮ ಬಾಳು ಇಷ್ಟು ಬೆಳೆದದ್ದು ಮತ್ತು ನಾವು ಸಮೃದ್ಧಿ ಹೊಂದದ್ದು... ಮರೆಯದೆ ಹೊಂದಿಸಿಕೊಂಡು ಹೋಗಬೇಕಾದ ಬಂಧದ ನೆನಪಿನ ಸಾಲುಗಳು ಅವು...!

"ಜೀವನ ಉಲ್ಲಾಸ ಪಯಣ, ಜೀವನ ಸಂಗೀತ ಕವನ..."

- "ಮಿಥಿಲೆಯ ಸೀತೆಯರು" ಚಿತ್ರದ ಹಾಡಿನ ಸಾಲಿನಂತೆ ನಾವು ಜೀವನದ ಈ "ನಾಲ್ಕು ದಿನಗಳ" ಪಯಣವನ್ನ ಪ್ರತಿದಿನ ಉಲ್ಲಾಸದಿಂದ ಸಾಗಿಸಲೇ ಬೇಕು... ಕೆಲವೊಮ್ಮೆ ಎಂಥಾ ಕಷ್ಟಗಳು ಬಂದರೂ ಸಹ... ಎಕೆಂದರೆ ಜೀವನ ಮರುಳಿನ ಹಾಗೇ, ಕೈಯಿಂದ ಜಾರುತ್ತಲೇ ಹೋಗುತ್ತದೆ... ಪ್ರತಿ ಕ್ಷಣವು....! ನಾವು ಅದನ್ನು ಅರಿಯಲು ಹೋದರೆ ಕೊನೆಗೆ ನಾವು ಕಳೆದ ಕ್ಷಣಕ್ಕೆ ಕೊರಗ ಬೇಕು ಅಷ್ಟೆ.. ಇದ್ದ ಜೀವನವನ್ನೇ ಸುಂದರವಾಗಿ ಕಳೆದರೆ ಅದು ಮುಂದೊಂದು ದಿನ ಸುಂದರ ನೆನಪಾಗಿ ಬರುತ್ತೆ ತಾನೇ...! ನೀವೇ ಹೇಳಿ...

ಈ ಜೀವನವೇ ಅಷ್ಟೇ... ನಿಮ್ಮನ್ನು ಮನಸಾರೆ ಪ್ರೀತಿಸಿದವರ ಮನ ನೋಯಿಸದೆ ಇನ್ನು ಹೆಚ್ಚು ಪ್ರೀತಿಸಿ... ಕಾಲ ಯಾರಿಗೂ ಕಾಯುವುದಿಲ್ಲ.. ನಿಮಗೂ ಸಹ... ಇದೆಲ್ಲರ ಮಧ್ಯದಲ್ಲಿ ದ್ವೇಷದ ಜೀವನ ಎಕೆ..? ಯಾರೇ ಬಂದರೂ ಸರಿ, ಅವರು ನಿಮ್ಮ ಮಿತ್ರರೇ ಅಗಿರಬಹುದು, ಇಲ್ಲಾ ಅಪರಿಚಿತರೇ ಅಗಿರಬಹುದು... ನಿಮ್ಮ ಧ್ಯೇಯ ಅದಷ್ಟು ನಗುವ ಹಂಚುವುದು... ನಂಬಿ ನನ್ನನ್ನ....ಕೊನೆಯಲ್ಲಿ ಅದು ಸಹ ಒಂದು ಸುಮಧುರ ನೆನಪಾಗಿ ನೀವು ಈ ಜಗವ ಬಿಟ್ಟು ಹೋದ ಮೇಲೂ ನಿಮ್ಮ ಪ್ರೀತಿ-ಪಾತ್ರರ ಮನದಲ್ಲಿ ಇದ್ದು ಅವರ ಜೀವನವನ್ನು ಒಂದು ಒಳ್ಳೆಯ ಆದರ್ಶವಾಗಿ ಮುಂದುವರಿಸುವುದು. ಅಲ್ವಾ?
ವಿಭಾಗ: edit post
0 Responses

Post a Comment